Asian Games 2023: ಟೀಂ ಇಂಡಿಯಾ ಫೈನಲ್‌ಗೆ: ಭಾರತಕ್ಕೆ ಮತ್ತೊಂದು ಪದಕ ಖಚಿತ
ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ. ಭಾರತದ ಮಹಿಳಾ ಕ್ರಿಕೆಟ್ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿತ್ತು, ಈಗ ಪುರುಷರ ಕ್ರಿಕೆಟ್ ತಂಡ ಕೂಡ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ತಂದುಕೊಡುವ ವಿಶ್ವಾಸದಲ್ಲಿದೆ.
ಶುಕ್ರವಾರ ನಡೆದ ಏಷ್ಯನ್ ಗೇಮ್ಸ್ ಕ್ರಿಕೆಟ್‌ನ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿದ ಭಾರತ ಫೈನಲ್ ಪ್ರವೇಶಿಸಿದೆ. ಕ್ವಾರ್ಟರ್ ಫೈನಲ್‌ನಲ್ಲಿ ನೇಪಾಳದ ವಿರುದ್ಧ ಸುಲಭ ಗೆಲುವು ಸಾಧಿಸಿದ್ದ ಭಾರತಕ್ಕೆ, ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಕೂಡ ಸುಲಭ ತುತ್ತಾಯಿತು.

ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತದ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 96 ರನ್ ಗಳಿಸಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಭಾರತ ತಂಡ ಕೇವಲ 9.2 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 97 ರನ್ ಗಳಿಸುವ ಮೂಲಕ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಸಾಯಿಕಿಶೋರ್, ವಾಷಿಂಗ್ಟನ್ ಉತ್ತಮ ಬೌಲಿಂಗ್
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶಕ್ಕೆ ಭಾರತದ ಬೌಲಿಂಗ್ ಎದುರಿಸುವುದು ಕಠಿಣವಾಗಿತ್ತು. ಪರ್ವೇಜ್ ಹೊಸೈನ್ ಎಮೊನ್ 23 ರನ್, ಜಾಕೆರ್ ಅಲಿ 24 ರನ್ ಮತ್ತು ರಕಿಬುಲ್ ಹಸನ್ 14 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವೊಬ್ಬ ಬ್ಯಾಟರ್ ಕೂಡ ಎರಡಂಕಿ ಗಡಿ ದಾಟಲಿಲ್ಲ.
ಸಾಯಿ ಕಿಶೋರ್ 4 ಓವರ್ ಗಳಲ್ಲಿ ಕೇವಲ 12 ರನ್ ನೀಡಿ 3 ವಿಕೆಟ್ ಪಡೆದುಕೊಂಡರೆ, ವಾಷಿಂಗ್ಟನ್ ಸುಂದರ್ 4 ಓವರ್ ಗಳಲ್ಲಿ 15 ರನ್ ನೀಡಿ 2 ವಿಕೆಟ್ ಪಡೆದರು. ಅರ್ಷದೀಪ್ ಸಿಂಗ್, ತಿಲಕ್ ವರ್ಮಾ, ರವಿ ಬಿಷ್ಣೋಯ್ ಮತ್ತು ಶಹಬಾಝ್ ಅಹಮದ್ ತಲಾ ಒಂದು ವಿಕೆಟ್ ಪಡೆದುಕೊಂಡರು.
ತಿಲಕ್ ವರ್ಮಾ, ರುತುರಾಜ್ ಅಬ್ಬರ
ಸುಲಭ ಸವಾಲನ್ನು ಬೆನ್ನತ್ತಿದ ಭಾರತ ತಂಡ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಕಳೆದುಕೊಂಡಿತು. ನೇಪಾಳ ವಿರುದ್ಧ ಶತಕ ಸಿಡಿಸಿದ್ದ ಜೈಸ್ವಾಲ್ ಇಂದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರು. ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ತಿಲಕ್ ವರ್ಮಾ ಎರಡನೇ ವಿಕೆಟ್‌ಗೆ 97 ರನ್ ಕಲೆ ಹಾಕುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ರುತುರಾಜ್ ಗಾಯಕ್ವಾಡ್ 26 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿದರೆ, ತಿಲಕ್ ವರ್ಮಾ 26 ಎಸೆತಗಳಲ್ಲಿ 2 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ ಅಜೇಯ 55 ರನ್ ಗಳಿಸಿದರು.
ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಸೆಮಿಫೈನಲ್‌ನಲ್ಲಿ ಸೋತಿರುವ ಬಾಂಗ್ಲಾದೇಶ ಕಂಚಿನ ಪದಕಕ್ಕಾಗಿ ಮತ್ತೊಂದು ಪಂದ್ಯ ಆಡಲಿದ್ದು, ಪದಕ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.












Click it and Unblock the Notifications