ಭಾರತಕ್ಕೆ ಮಾತ್ರ ವಿಶೇಷ ಸೌಲಭ್ಯ ಯಾಕೆ ಬಾಂಗ್ಲಾ ಪ್ರಶ್ನೆ: ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಬಹುತೇಕ ಔಟ್
ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಬಂಧ ಹಳಸಿದೆ. ಭಾರತ ಮತ್ತು ಪಾಕಿಸ್ತಾನದ ಯುದ್ಧ ಸಂದರ್ಭದಲ್ಲೂ ಬಾಂಗ್ಲಾದೇಶ ಮೂಗು ತೂರಿಸಿತ್ತು. ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನೀಡಿದ್ದ 24 ಗಂಟೆಗಳ ಗಡುವು ಮುಗಿದಿದ್ದು, ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶವು ಹೊರಗೆ ಉಳಿಯುವುದು ಬಹುತೇಕ ಫಿಕ್ಸ್ ಎನ್ನುವಂತೆ ಆಗಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ)ಯು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಬಗ್ಗೆ ತನ್ನ ಅಧಿಕೃತ ನಿಲುವನ್ನು ಇನ್ನೂ ಪ್ರಕಟಿಸಿಲ್ಲ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.
ಭಾರತ ಹಾಗೂ ಶ್ರೀಲಂಕಾದ ಸಹಯೋಗದಲ್ಲಿ ಟಿ20 ವಿಶ್ವಕಪ್ 2026 ಆಯೋಜನೆ ಮಾಡಲಾಗಿದೆ. ಬಾಂಗ್ಲಾದೇಶವು ಭಾರತದಲ್ಲಿ ಆಟವಾಡುವುದಿಲ್ಲ ಎಂದು ಹೇಳಿತ್ತು. ಅಲ್ಲದೇ ಭದ್ರತೆಯ ದೃಷ್ಟಿಯಿಂದ ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಐಸಿಸಿಗೆ ಮನವಿ ಮಾಡಿತ್ತು. ಆದಾಗ್ಯೂ, ಐಸಿಸಿ ಈ ವಿನಂತಿಯನ್ನು ತಿರಸ್ಕರಿಸಿತು ಮತ್ತು ಈ ವಿಷಯದ ಬಗ್ಗೆ ತಮ್ಮ ಅಧಿಕೃತ ನಿಲುವನ್ನು ತಿಳಿಸುವುದಕ್ಕೆ ಸಂಬಂಧಿಸಿದಂತೆ ಬಿಸಿಬಿಗೆ (ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ) 24 ಗಂಟೆಗಳ ಗಡುವು ನೀಡಿತ್ತು. ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಬಿ ಮಾಧ್ಯಮಗಳಿಗೆ ತಿಳಿಸಿದ್ದರೂ, ನಿಗದಿತ ಅವಧಿಯೊಳಗೆ ಐಸಿಸಿಗೆ ಯಾವುದೇ ಅಧಿಕೃತ ಪತ್ರ ಅಥವಾ ಮಾಹಿತಿ ನೀಡಿರಲಿಲ್ಲ. ಈ ಕಾರಣದಿಂದಾಗಿ ಇದೀಗ ಬಾಂಗ್ಲಾದೇಶದ ಬದಲಿಗೆ ಸ್ಕಾಟ್ಲೆಂಡ್ ಕ್ರಿಕೆಟ್ ತಂಡಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ.

ಭಾರತಕ್ಕೆ ವಿಶೇಷ ಸೌಲಭ್ಯ ನೀಡಲಾಗಿತ್ತು: ಬಾಂಗ್ಲಾ
ಇನ್ನು ಭಾರತದ ಪುರುಷರ ಕ್ರಿಕೆಟ್ ತಂಡಕ್ಕೆ ವಿಶೇಷ ಸೌಲಭ್ಯವನ್ನು ನೀಡಲಾಗಿದೆ ಎಂದು ಬಾಂಗ್ಲಾದೇಶವು ಆರೋಪಿಸಿದೆ. ಬಿಸಿಬಿ ಪದಾಧಿಕಾರಿಗಳು ಮತ್ತು ರಾಷ್ಟ್ರೀಯ ಕ್ರಿಕೆಟಿಗರ ನಡುವೆ ನಡೆದ ಸಭೆಯ ನಂತರ ವಿಶ್ವಕಪ್ ಪಂದ್ಯಗಳಿಗಾಗಿ ಭಾರತಕ್ಕೆ ಪ್ರಯಾಣಿಸದಿರುವ ತನ್ನ ನಿಲುವು ದೃಢವಾಗಿದೆ ಎಂದು ಬಿಸಿಬಿ ಹೇಳಿದೆ. ಮುಂದುವರಿದು ದುಬೈನಲ್ಲಿ ಒಂದೇ ಸ್ಥಳದಲ್ಲಿ ಎಲ್ಲಾ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ಆಡುವ ವಿಶೇಷ ಸವಲತ್ತನ್ನು ಭಾರತಕ್ಕೆ ನೀಡಲಾಗಿದೆ ಎಂದು ಬಾಂಗ್ಲಾದೇಶ ಆರೋಪಿಸಿದೆ.
ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಸಲಹೆಗಾರ ಆಸಿಫ್ ನಜ್ರುಲ್, ಬಿಸಿಬಿ ಅಧ್ಯಕ್ಷ ಅಮಿನುಲ್ ಇಸ್ಲಾಂ ಮತ್ತು ಸಿಇಒ ನಿಜಾಮುದ್ದೀನ್, ನೂರುಲ್ ಹಸನ್, ಶಮಿಮ್ ಹೊಸೈನ್, ಹಸನ್ ಮಹ್ಮದ್, ನಜ್ಮುಲ್ ಹೊಸೈನ್ ಶಾಂಟೊ, ಜಾಕರ್ ಅಲಿ, ತಂಜಿದ್ ಹಸನ್ ಮತ್ತು ಸೈಫ್ ಹಸನ್ ಸೇರಿದಂತೆ ಹಲವು ಬಾಂಗ್ಲಾದೇಶದ ಕ್ರಿಕೆಟ್ ಆಟಗಾರರು ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಸಭೆಯ ನಂತರ ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅಮಿನುಲ್ ಇಸ್ಲಾಂ ಈ ಹೇಳಿಕೆ ನೀಡಿದ್ದಾರೆ.
ಇನ್ನು ಕಳೆದ ಫೆಬ್ರವರಿಯಲ್ಲಿ ಚಾಂಪಿಯನ್ಸ್ ಟ್ರೋಫಿಗಾಗಿ ಒಂದು ದೇಶವು ಮತ್ತೊಂದು ದೇಶಕ್ಕೆ ಪ್ರಯಾಣಿಸಲು ನಿರಾಕರಿಸಿತ್ತು. ಆ ಸಂದರ್ಭದಲ್ಲಿ ಐಸಿಸಿ ಅವರಿಗೆ ತಟಸ್ಥ ಸ್ಥಳವನ್ನು ಆಯೋಜಿಸಿತು. ತಂಡವು ತಮ್ಮ ಎಲ್ಲಾ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ಆ ತಟಸ್ಥ ಸ್ಥಳದಲ್ಲಿ ಆಡಿತ್ತು. ಅವರು ಒಂದೇ ಮೈದಾನದಲ್ಲಿ ಆಡಿದರು, ಒಂದೇ ಹೋಟೆಲ್‌ನಲ್ಲಿ ತಂಗಿದ್ದರು. ಅವರಿಗೆ ಮಾತ್ರ ವಿಶೇಷ ಸೌಲಭ್ಯ ನೀಡಲಾಗಿತ್ತು ಎಂದು ಅಮಿನುಲ್ ಇಸ್ಲಾಂ ಪರೋಕ್ಷವಾಗಿ ಭಾರತದ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಟಿ20 ವಿಶ್ವಕಪ್ ಎಲ್ಲಿ, ಯಾವಾಗ
ಇನ್ನು ಟಿ20 ವಿಶ್ವಕಪ್ ಫೆಬ್ರವರಿ 7 ರಂದು ಪ್ರಾರಂಭವಾಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಪಂದ್ಯಾವಳಿಯನ್ನು ಆಯೋಜಿಸಲಿವೆ. ಬಾಂಗ್ಲಾದೇಶವನ್ನು ಶ್ರೀಲಂಕಾದಲ್ಲಿ ಆಡಲು ಅನುಮತಿಸುವ ಹೈಬ್ರಿಡ್ /ಪರ್ಯಾಯ ಮಾದರಿಯನ್ನು ಅಳವಡಿಸಿಕೊಳ್ಳಬಹುದು ಎಂದು ಐಸಿಸಿಗೆ ತಿಳಿಸಿರುವುದಾಗಿ ಅಮಿನುಲ್ ಇಸ್ಲಾಂ ತಿಳಿಸಿದ್ದಾರೆ. ಆದರೆ ಬಾಂಗ್ಲಾದೇಶದ ಮನವಿಯನ್ನು ಈಗಾಗಲೇ ಐಸಿಸಿ ನಿರಾಕರಿಸಿದೆ. ವಿವಿಧ ಕ್ರಿಕೆಟ್ ಮಂಡಳಿಗಳು ಭಾರತದ ಪರವಾಗಿ ಮತ ಚಲಾಯಿಸಿವೆ.












Click it and Unblock the Notifications