SA vs Eng: ಹಶೀಮ್ ಆಮ್ಲಾ ಭರ್ಜರಿ ಬ್ಯಾಟಿಂಗ್; ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾಗೆ ಭರ್ಜರಿ ಗೆಲುವು
ವಡೋದರಾದ ಬಿಸಿಎ ಕ್ರೀಡಾಂಗಣದಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ 2025 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಮೊದಲ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ದಕ್ಷಿಣ ಆಫ್ರಿಕಾ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಹಶೀಮ್ ಆಮ್ಲಾ ಅರ್ಧಶತಕ ಸಿಡಿಸುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಕಾರಣವಾದರು.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮಾಸ್ಟರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಾಸ್ಟರ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತು. ಟಿ ಅಂಬ್ರೋಸ್ 53 ರನ್ ಗಳಿಸಿದರು, ನಾಯಕ ಇಯಾನ್ ಮಾರ್ಗನ್ 36 ರನ್ ಗಳಿಸಿದರು. ಸಿ ಟ್ರೆಮ್ಲೆಟ್ 4 ಎಸೆತಗಳಲ್ಲಿ 19 ರನ್ ಗಳಿಸಿದರು.

ಹಶೀಮ್ ಆಮ್ಲಾ ಭರ್ಜರಿ ಬ್ಯಾಟಿಂಗ್!
158 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಮಾಸ್ಟರ್ಸ್ ತಂಡಕ್ಕೆ ಹಶೀಮ್ ಆಮ್ಲಾ ಆಸರೆಯಾದರು. 55 ಎಸೆತಗಳಲ್ಲಿ 10 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 82 ರನ್ ಗಳಿಸಿದರು. ಹೆನ್ರಿ ಡೇವಿಸ್ ರನ್ ಗಳಿಸುವ ಮುನ್ನವೇ ಔಟಾದರೆ, ನಾಯಕ ಜಾಕ್ ಕಾಲಿಸ್ 8 ರನ್ ಗಳಿಸಿ ಔಟಾದರು. ಆಲ್ವಿರೋ ಪೀಟರ್ಸನ್ 41 ಎಸೆತಗಳಲ್ಲಿ 56 ರನ್ ಗಳಿಸಿದರು. 18.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 159 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಮೊದಲ ಎರಡು ಪಂದ್ಯಗಳಲ್ಲಿ ಶ್ರೀಲಂಕಾ ಮಾಸ್ಟರ್ಸ್ ಮತ್ತು ಇಂಡಿಯಾ ಮಾಸ್ಟರ್ಸ್ ವಿರುದ್ಧ ಸೋಲನುಭವಿಸಿದ್ದ ದಕ್ಷಿಣ ಆಫ್ರಿಕಾ ಪಂದ್ಯಾವಳಿಯ ಮೊದಲ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.
ಮಾರ್ಚ್ 5ರಂದು ಇಂಡಿಯಾ ಮಾಸ್ಟರ್ಸ್ ಆಸ್ಟ್ರೇಲಿಯಾ ಮಾಸ್ಟರ್ಸ್ ವಿರುದ್ಧ ಸೆಣೆಸಲಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಇಂಡಿಯಾ ಮಾಸ್ಟರ್ಸ್ ನಾಲ್ಕನೇ ಗೆಲುವಿನ ವಿಶ್ವಾಸದಲ್ಲಿದೆ.












Click it and Unblock the Notifications