Smriti Mandhana: ಅನುಕಂಪಕ್ಕಿಂತ ಸ್ವಾಭಿಮಾನ ಮುಖ್ಯ: ಸ್ಮೃತಿ ಮಂಧನಾ ಹೇಳಿಕೆ ಹಿಂದಿದೆ ಮಹತ್ವದ ಸಂದೇಶ
Smriti Mandhana: ಮಹಿಳಾ ಟಿ20 ಏಷ್ಯಾಕಪ್ 2026 ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾವು ಶ್ರೀಲಂಕಾ ವಿರುದ್ಧ ಭರ್ಜರಿ ಜಯ ದಾಖಲಿಸಿ ಟ್ರೋಫಿ ಎತ್ತಹಿಡಿಯಿತು. ಇದರ ಬೆನ್ನಲ್ಲೇ ಸ್ಮೃತಿ ಮಂಧಾನ ಅವರು ಭಾರತದ ಪ್ರಸಿದ್ಧ ಯೂಟ್ಯೂಬರ್ ರಾಜ್ ಶಮಾನಿ ಅವರ ಪಾಡ್‌ಕಾಸ್ಟ್‌ನಲ್ಲಿ ತಮ್ಮ ಜೀವನದ ಒತ್ತಡ, ಸೋಲುಗಳನ್ನು ಹೇಗೆ ಎದುರಿಸಿದರು ಎನ್ನುವ ಮಹತ್ವದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂಧನಾ ಅವರು ರಾಜ್ ಶಮಾನಿ ಅವರ ಪಾಡ್‌ಕಾಸ್ಟ್‌ನಲ್ಲಿ ತಮ್ಮ ಜೀವನ, ಕ್ರೀಡಾ ಒತ್ತಡ, ಸೋಲು ಮತ್ತು ಹಿನ್ನಡೆಗಳನ್ನು ಹೇಗೆ ಎದುರಿಸುತ್ತಾರೆ ಎಂಬುದರ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಈ ವಿಚಾರಗಳು ಪ್ರತಿಯೊಬ್ಬ ಮಹಿಳೆಯ ದೈನಂದಿನ ಜೀವನ, ವೃತ್ತಿಜೀವನ ಮತ್ತು ಸಂಬಂಧಗಳಿಗೆ ಸ್ಪೂರ್ತಿದಾಯಕವಾಗಿವೆ.

'ಅನುಕಂಪಕ್ಕಿಂತ ಸ್ವಯಂ ಶಕ್ತಿ ಮುಖ್ಯ'
ಸೋಲು, ಒತ್ತಡ, ತಪ್ಪುಗಳು ಮತ್ತು ಹಿನ್ನಡೆಗಳನ್ನು ಎದುರಿಸುವಾಗ ಮಾನಸಿಕವಾಗಿ ಹೇಗೆ ಗಟ್ಟಿಯಾಗಿರಬೇಕು ಎಂಬುದನ್ನು ಅವರು ಅದ್ಭುತವಾಗಿ ವಿವರಿಸಿದ್ದಾರೆ. 'ಸಂಕಷ್ಟ ಅಥವಾ ಹಿನ್ನಡೆ ಎದುರಾದಾಗ ಜನರು ತೋರಿಸುವ ಸಹಾನುಭೂತಿ ಅಥವಾ ಅನುಕಂಪ ಕೆಲವೊಮ್ಮೆ ಸಹಾಯಕ್ಕಿಂತ ಹೆಚ್ಚಾಗಿ ನಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ,' ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಹಿನ್ನಡೆಯಾದಾಗ ನಮಗೆ ಬೇಕಾಗಿರುವುದು ಯಾರದ್ದೋ ನೆರವಲ್ಲ, ಬದಲಾಗಿ ಪರಿಸ್ಥಿತಿಯನ್ನು ವಿಶ್ಲೇಷಿಸಿ ಮತ್ತೆ ಎದ್ದು ನಿಲ್ಲುವ ಮಾನಸಿಕ ಸಾಮರ್ಥ್ಯ. ಹಾಗಂತ ನನಗೆ ನೋವಾಗಿದೆ ಎಂದರೆ ನನಗೆ ಯಾರೋ ಬಂದು ಸಹಾಯ ಮಾಡಬೇಕು ಎಂದರ್ಥವಲ್ಲ. ಅನುಕಂಪ ಮತ್ತು ಕಾಳಜಿಯ ನಡುವೆ ತುಂಬಾ ವ್ಯತ್ಯಾಸವಿದೆ,' ಎಂದು ಅವರು ಹೇಳಿದ್ದಾರೆ.
'ತಪ್ಪುಗಳನ್ನೇ ನೆನೆದು ಕೊರಗಿದರೆ ಸುಧಾರಣೆ ಸಾಧ್ಯವಿಲ್ಲ'
ಆಟದಲ್ಲಿ ಅಥವಾ ಜೀವನದಲ್ಲಿ ಸೋಲಾದಾಗ ಅಥವಾ ತಪ್ಪುಗಳಾದಾಗ ಕೋಪ, ನಿರಾಶೆ, ದುಃಖವಾಗುವುದು ಸಹಜ. ಆದರೆ ಸ್ಮೃತಿ ಮಂಧನಾ ಅವರು ತಮ್ಮ ಭಾವನೆಗಳಿಗೆ ಒಂದು ಗಡಿಯನ್ನು ನಿಗದಿಪಡಿಸುತ್ತಾರೆ. ಹಿನ್ನಡೆಯಾದಾಗ ಆ ದುಃಖ ಅಥವಾ ನಿರಾಶೆಯನ್ನು ಅನುಭವಿಸಲು ಕೇವಲ 30 ನಿಮಿಷಗಳನ್ನು ಮಾತ್ರ ಮೀಸಲಿಡುತ್ತಾರೆ. ಆ ಸಮಯ ಮುಗಿದ ತಕ್ಷಣ, ಆ ನಿರಾಶೆಯಿಂದ ಹೊರಬಂದು "ಮುಂದೇನು ಮಾಡಬೇಕು?" ಎಂಬುದರ ಕಡೆಗೆ ಗಮನಹರಿಸುತ್ತಾರೆ. ತಪ್ಪುಗಳನ್ನೇ ನೆನೆದು ಅಳುತ್ತಾ ಕುಳಿತರೆ ಯಾವುದೇ ಸುಧಾರಣೆ ಸಾಧ್ಯವಿಲ್ಲ.
'ಪ್ರತಿಯೊಂದು ಹಿನ್ನಡೆಯೂ ಅದ್ಭುತ ಪಾಠ ಕಲಿಸುತ್ತದೆ'
2017ರ ವಿಶ್ವಕಪ್ ಫೈನಲ್ ಸೋಲಿನ ನಂತರವೂ ಸ್ಮೃತಿ ಇದೇ ಹಾದಿಯನ್ನು ತುಳಿದಿದ್ದರು. ಸೋಲಿನ ಬಗ್ಗೆ ಅತಿಯಾಗಿ ಚಿಂತಿಸುವ ಬದಲು, ತಂಡ ಮತ್ತು ತಾವು ಎಲ್ಲಿ ಸುಧಾರಿಸಬೇಕು ಎಂಬುದನ್ನು ಬರೆದಿಟ್ಟುಕೊಂಡು, ಮುಂದಿನ ಸರಣಿಗೆ ಸಿದ್ಧರಾಗುತ್ತಿದ್ದರು. ಪ್ರತಿಯೊಂದು ಹಿನ್ನಡೆಯೂ ಒಂದು ಪಾಠವನ್ನು ಕಲಿಸುತ್ತದೆ. ಆ ಪಾಠವನ್ನು ಗ್ರಹಿಸಿ ಮುಂದೆ ಸಾಗುವುದೇ ನಿಜವಾದ ಯಶಸ್ಸು.
ಮಹಿಳೆಯರಿಗೆ ಮಹತ್ವದ ಸಂದೇಶ
ಸಮಾಜದಲ್ಲಿ ಮಹಿಳೆಯರು ಸಂಕಷ್ಟದಲ್ಲಿದ್ದಾಗ ಅವರನ್ನು ಅತಿಯಾದ ಸಾಂತ್ವನದಿಂದ ಕಾಣುವ ಪ್ರವೃತ್ತಿ ಇದೆ. ಆದರೆ, ಮಹಿಳೆಯರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಲೇ ಮಾನಸಿಕವಾಗಿ ಗಟ್ಟಿಯಾಗಿರಬಹುದು ಎಂಬುದನ್ನು ಸ್ಮೃತಿ ತೋರಿಸಿಕೊಟ್ಟಿದ್ದಾರೆ. ಹಿನ್ನಡೆಗಳು ಬಂದಾಗ "ನನ್ನೊಂದಿಗೆ ಹೀಗಾಯಿತಲ್ಲ" ಎಂದು ಕೊರಗುವ ಬದಲು "ನಾನು ಮುಂದೆ ಏನು ಮಾಡಬೇಕು?" ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದು ಬದುಕಿನ ದಾರಿಯನ್ನು ಬದಲಾಯಿಸುತ್ತದೆ.
ಕಣ್ಣೀರು ಹಾಕುವುದು ಅಥವಾ ಬೇಸರ ಮಾಡಿಕೊಳ್ಳುವುದು ದೌರ್ಬಲ್ಯವಲ್ಲ. ಆದರೆ ಆ ಬೇಸರದಲ್ಲೇ ಉಳಿದುಕೊಳ್ಳುವುದು ತಪ್ಪು. ಬಿದ್ದು ಎದ್ದು ನಿಲ್ಲುವ ಸಾಮರ್ಥ್ಯವೇ ಪ್ರತಿಯೊಬ್ಬ ಮಹಿಳೆಯ ನಿಜವಾದ ಶಕ್ತಿ ಎಂಬುದನ್ನು ಸ್ಮೃತಿ ಮಂಧನಾ ಅವರ ಮಾತಿನ ಅರ್ಥವಾಗಿದೆ. ಒಟ್ಟಿನಲ್ಲಿ ಮಂಧಾನ ಅವರ ಈ ಮಾತುಗಳು ಸ್ಪೂರ್ತಿಯಾಗಿವೆ ಎಂದರೆ ತಪ್ಪಾಗಲಾರದು.


Click it and Unblock the Notifications
