SL Akshay Passes Away: ಕರ್ನಾಟಕದ ಶಿವಮೊಗ್ಗ ಮೂಲದ ರಣಜಿ ಪ್ಲೇಯರ್ ಹೃದಯಾಘಾತದಿಂದ ನಿಧನ
SL Akshay Passes Away: ರಣಜಿ ಮಾಜಿ ಕ್ರಿಕೆಟಿಗ ಕರ್ನಾಟಕದ ಎಸ್‌ಎಲ್ ಅಕ್ಷಯ್ (39) ಅವರು ಭಾನುವಾರ (ಮೇ 24) ಹೃದಯಾಘಾತದಿಂದ ನಿಧನರಾಗಿದ್ದಾರೆ. ವರದಿಗಳ ಪ್ರಕಾರ ಅಕ್ಷಯ್ ಅವರು ತಾವು ಕೊನೆಯುಸಿರೆಳೆಯುವ ಮುನ್ನ ಬೆಂಗಳೂರಿನಲ್ಲಿ ನಡೆದ ಡಿವಿಷನ್ III ಪಂದ್ಯವೊಂದರಲ್ಲಿ ಪಾಲ್ಗೊಂಡಿದ್ದರು. ಮೈದಾನದಲ್ಲಿ ಆಡುತ್ತಿದ್ದಾಗಲೇ ಅವರಿಗೆ ಹೃದಯಾಘಾತ ಸಂಭವಿಸಿ ನಿಧನರಾಗಿದ್ದಾರೆ.
ಕರ್ನಾಟಕ ಕ್ರಿಕೆಟ್ ವಲಯದಲ್ಲಿ ಭರವಸೆಯ ಆಟಗಾರನಾಗಿದ್ದ ಅಕ್ಷಯ್ ಅವರ ಹಠಾತ್ ಸಾವು ಕ್ರೀಡಾ ಅಭಿಮಾನಿಗಳಲ್ಲಿ ಮತ್ತು ಅವರ ಸಹ ಆಟಗಾರರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ. ಹಿರಿಯ ಮತ್ತು ಕಿರಿಯ ಆಟಗಾರರು ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.

ಅಕ್ಷಯ್ ಅವರ ಕ್ರಿಕೆಟ್ ವೃತ್ತಿಜೀವನ
ಅಕ್ಷಯ್ ಅವರ ಕ್ರಿಕೆಟ್ ಜೀವನದ ಅತ್ಯಂತ ಸ್ಮರಣೀಯ ಕ್ಷಣವೆಂದರೆ 2014-15ರ ಸಾಲಿನಲ್ಲಿ ರಣಜಿ ಟ್ರೋಫಿ ಗೆದ್ದು ಅಧಿಪತ್ಯ ಸ್ಥಾಪಿಸಿದ್ದ ಬಲಿಷ್ಠ ಕರ್ನಾಟಕ ತಂಡದ ಭಾಗವಾಗಿದ್ದರು. ಆ ಸೀಸನ್‌ನಲ್ಲಿ ಅವರು ಯಾವುದೇ ಪಂದ್ಯವನ್ನು ಆಡದಿದ್ದರೂ ಚಾಂಪಿಯನ್ ತಂಡದ ಸದಸ್ಯರಾಗಿದ್ದರು. ಅವರು ತಮ್ಮ ಕೊನೆಯ ವೃತ್ತಿಪರ ಪಂದ್ಯವನ್ನು 2019ರ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ (ಈಗಿನ ಮಹಾರಾಜ ಟಿ20 ಟ್ರೋಫಿ) ಆಡಿದ್ದರು. ಅಂದು ಅವರು ಬಿಜಾಪುರ ಬುಲ್ಸ್ ತಂಡವನ್ನು ಪ್ರತಿನಿಧಿಸಿ ಬಳ್ಳಾರಿ ಟಸ್ಕರ್ಸ್ ವಿರುದ್ಧ ಕಣಕ್ಕಿಳಿದಿದ್ದರು.
ರಣಜಿಗೆ ಪಾದಾರ್ಪಣೆ ಯಾವಾಗ?
ಅಕ್ಷಯ್ ಅವರು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೌರಾಷ್ಟ್ರ ತಂಡದ ವಿರುದ್ಧ ನಡೆದ ಗುಂಪು ಹಂತದ ಪಂದ್ಯದ ಮೂಲಕ ರಣಜಿಗೆ ಪದಾರ್ಪಣೆ ಮಾಡಿದ್ದರು. ತಮ್ಮ ವೃತ್ತಿಜೀವನದಲ್ಲಿ ಅವರು ಕರ್ನಾಟಕದ ಪರ ಒಟ್ಟು ಆರು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು.
ಇವರು ವೈಟ್ ಬಾಲ್‌ನಲ್ಲೂ ರಾಜ್ಯವನ್ನು ಪ್ರತಿನಿಧಿಸಿದ್ದು, ಮೂರು ಏಕದಿನ ಮತ್ತು ಒಂಬತ್ತು 20 ಓವರ್‌ಗಳ ಪಂದ್ಯಗಳನ್ನು ಆಡಿದ್ದರು. ತಮ್ಮ ವೃತ್ತಿಪರ ಕ್ರಿಕೆಟ್ ಜೀವನದಲ್ಲಿ ಅವರು ಒಟ್ಟು 32 ವಿಕೆಟ್‌ಗಳನ್ನು ಪಡೆದಿದ್ದಾರೆ. ಶಿವಮೊಗ್ಗ ಮೂಲದ ಈ ಆಟಗಾರ ಕರ್ನಾಟಕದ ಪರ ತಮ್ಮ ಕೊನೆಯ ಪಂದ್ಯವನ್ನು 2012-13ರ ಸಾಲಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡಿದ್ದರು. 2013ರಲ್ಲಿ ಇಂದೋರ್‌ನಲ್ಲಿ ಬರೋಡಾ ತಂಡದ ವಿರುದ್ಧ ನಡೆದ ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ 7 ಎಸೆತಗಳಲ್ಲಿ 10 ರನ್ ಗಳಿಸಿದ್ದರು. ಬೌಲಿಂಗ್‌ನಲ್ಲಿ 3.5 ಓವರ್‌ಗಳಲ್ಲಿ 39 ರನ್ ನೀಡಿ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು.












Click it and Unblock the Notifications