ಸ್ಮೃತಿ ಶತಕ, ಶಫಾಲಿ ಅಬ್ಬರದ ದ್ವಿಶತಕ; ದಾಖಲೆ ಪುಟ ಸೇರಿದ ಆರಂಭಿಕ ಜೊತೆಯಾಟ
ಶನಿವಾರ ಟಿ20 ವಿಶ್ವಕಪ್ ಫೈನಲ್ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇತ್ತ ಭಾರತದಲ್ಲೂ ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ವನಿತೆಯರ ತಂಡಗಳ ನಡುವಣ ಏಕೈಕ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಅಭಿಮಾನಿಗಳ ಮನ ಗೆದ್ದಿದೆ.
ಭಾರತೀಯ ನಾರಿಯರ ಆಟವನ್ನು ಕಂಡು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಚೆನ್ನೈನಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಜೋಡಿ ಶೆಫಾಲಿ ವರ್ಮಾ ಹಾಗೂ ಸ್ಮೃತಿ ಮಂದನಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾದರು. ಮೊದಲ ದಿನದಾಟದ ಮುಕ್ತಾಯಕ್ಕೆ ಟೀಮ್ ಇಂಡಿಯಾ 4 ವಿಕೆಟ್ ಗಳನ್ನು ಕಳೆದುಕೊಂಡು 525 ರನ್ ಕಲೆ ಹಾಕಿ ಸುಸ್ಥಿತಿಯಲ್ಲಿದೆ.

ದ್ವಿತೀಯ ಶತಕದ ಸಾಧನೆ
ಟೆಸ್ಟ್ ಪಂದ್ಯದ ಮೊದಲ ದಿನ ಶೆಫಾಲಿ ವರ್ಮಾ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ಶೆಫಾಲಿ ಎಲ್ಲರ ಚಿತ್ತ ಕದ್ದರು. ಹರಣಿಗಳ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ಇವರು ಮೊದಲ ದಿನವೇ ದ್ವಿಶತಕ ಬಾರಿಸಿ ಸಾಧನೆ ಮಾಡಿದರು. ಅಲ್ಲದೆ ವೇಗವಾಗಿ ಮಹಿಳಾ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.
ಶೆಫಾಲಿ 197 ಎಸೆತಗಳಲ್ಲಿ 207 ರನ್‌ಗಳ ಇನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್‌ನಲ್ಲಿ, ಶೆಫಾಲಿ 23 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಬಾರಿಸಿ ಅಬ್ಬರಿಸಿದರು. ಶೆಫಾಲಿ ದ್ವಿಶತಕ ಗಳಿಸಲು 194 ಎಸೆತಗಳನ್ನು ತೆಗೆದುಕೊಂಡರು.
ಇದೀಗ ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ದ್ವಿಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಶೆಫಾಲಿ ಪಾತ್ರರಾಗಿದ್ದಾರೆ. ಇದಲ್ಲದೇ ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಶೆಫಾಲಿ ಪಾತ್ರರಾಗಿದ್ದಾರೆ. ಶೆಫಾಲಿಗೂ ಮುನ್ನ ಟೀಂ ಇಂಡಿಯಾದ ಮಾಜಿ ನಾಯಕಿ ಮಿಥಾಲಿ ರಾಜ್ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ್ದರು.

ಮೊದಲ ವಿಕೆಟ್‌ಗೆ ಅಬ್ಬರದ ಜೊತೆಯಾಟ
ಚೆನ್ನೈನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಮೊದಲ ವಿಕೆಟ್‌ಗೆ 312 ಎಸೆತಗಳಲ್ಲಿ 292 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿ ದಾಖಲೆ ಪುಟದಲ್ಲಿ ತಮ್ಮ ಹೆಸರು ನಮೂದಿಸಿದರು. ಇದು ಭಾರತೀಯ ಆಟಗಾರ್ತಿಯರ ಯಾವುದೇ ವಿಕೆಟ್‌ಗೆ ದಾಖಲಾದ ಗರಿಷ್ಠ ರನ್‌ಗಳ ಜೊತೆಯಾಟ. ಮೊದಲ ವಿಕೆಟ್‌ಗೆ ಗರಿಷ್ಠ ರನ್ ಕಲೆ ಹಾಕಿದ ಕೀರ್ತಿ ಇದಕ್ಕೂ ಮೊದಲು ಪಾಕ್ ಆಟಗಾರ್ತಿಯರಾದ ಕಿರಣ್ ಬಲೋಚ್ ಮತ್ತು ಸಾಜಿದಾ ಶಾ ಹೆಸರಿನಲ್ಲಿತ್ತು. ಅವರು 2004 ರಲ್ಲಿ ಕರಾಚಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 241 ರನ್ಗಳ ಜೊತೆಯಾಟವನ್ನು ನೀಡಿತ್ತು.
ಸ್ಮೃತಿ ಮಂಧಾನ ಶತಕ
ಈ ಪಂದ್ಯದಲ್ಲಿ ಸ್ಮೃತಿ ಮಂಧಾನ ಕೂಡ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಭರ್ಜರಿ ಶತಕ ಬಾರಿಸಿದರು. ಈ ಪಂದ್ಯದಲ್ಲಿ ಮಂಧಾನ 149 ರನ್‌ಗಳ ಇನಿಂಗ್ಸ್ ಆಡಿದರು. ಟೀಮ್ ಇಂಡಿಯಾದ ಭರವಸೆಯ ಸ್ಮೃತಿ ಮಂಧಾನ 27 ಬೌಂಡರಿ ಮತ್ತು ಒಂದು ಸಿಕ್ಸರ್‌ಗಳ ನೆರವಿನಿಂದ ಶತಕ ಬಾರಿಸಿ ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದರು.












Click it and Unblock the Notifications