Saina Nehwal: ಡಿವೋರ್ಸ್ ಕೊಡಲ್ಲ, ಮತ್ತೆ ಒಂದಾಗ್ತೀವಿ ಎಂದ ಸೆಲೆಬ್ರಿಟಿ ಜೋಡಿ
ಭಾರತೀಯ ಬ್ಯಾಡ್ಮಿಂಟನ್ ತಾರಾ ಜೋಡಿ ಸೈನಾ ನೆಹ್ವಾಲ್ (Saina Nehwal) ಹಾಗೂ ಪರುಪಲ್ಲಿ ಕಶ್ಯಪ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿ ಇತ್ತೀಚೆಗಷ್ಟೇ ಡಿವೋರ್ಸ್ ಪಡೆಯುವುದಾಗಿ ಸುದ್ದಿಯಾಗಿತ್ತು. ತಮ್ಮ ಬೇರ್ಪಡುವಿಕೆ ನಿರ್ಧಾರವನ್ನು ಘೋಷಿಸಿದ ಹತ್ತೊಂಬತ್ತು ದಿನಗಳ ನಂತರ, ಸೈನಾ ನೆಹ್ವಾಲ್ ತಮ್ಮ ನಿರ್ಧಾರ ಬದಲಿಸಿರುವುದಾಗಿ ಹೇಳಿದ್ದಾರೆ. ಜುಲೈ 14 ರಂದು ಈ ಜೋಡಿ ಪರಸ್ಪರ ಇಬ್ಬರೂ ಡಿವೋರ್ಸ್‌ಗೆ ಮುಂದಾಗಿರುವ ಬಗ್ಗೆ ಹೇಳಿಕೆ ನೀಡಿದ್ದರು. ಅಲ್ಲದೆ ಈ ಬಗ್ಗೆ ಗೌಪ್ಯತೆಯನ್ನು ಕೋರಿದ್ದರು. ಈಗ ಇದ್ದಕ್ಕಿದ್ದಂತೆ ಡಿವೋರ್ಸ್ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಸೈನಾ ನೆಹ್ವಾಲ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂನಲ್ಲಿ ತಾನು ಮತ್ತು ಪರುಪಳ್ಳಿ ಕಶ್ಯಪ್ "ಮತ್ತೆ ಒಂದಾಗಲು ಪ್ರಯತ್ನಿಸುತ್ತಿದ್ದೇವೆ" ಎಂದು ಪೋಸ್ಟ್ ಮಾಡಿದ್ದಾರೆ. ಕೆಲವೊಮ್ಮೆ ದೂರವು ನಿಮಗೆ ವ್ಯಕ್ತಿಯ ಉಪಸ್ಥಿತಿಯ ಮೌಲ್ಯವನ್ನು ಕಲಿಸುತ್ತದೆ. ಇಲ್ಲಿ ನಾವು-ಮತ್ತೆ ಒಂದಾಗಲು ಪ್ರಯತ್ನಿಸುತ್ತಿದ್ದೇವೆ ಎಂದು ಸೈನಾ ಬರೆದುಕೊಂಡಿದ್ದಾರೆ. ಜೊತೆಗೆ ದಂಪತಿಯ ಫೋಟೋ ಹಂಚಿಕೊಂಡು, ಟ್ಯಾಗ್ ಕೂಡ ಮಾಡಿದ್ದಾರೆ. ಈ ಮೂಲಕ ಡಿವೋರ್ಸ್ ನಿರ್ಧಾರದಿಂದ ಹಿಂದೆ ಸರಿದಿರುವ ಸಂದೇಶ ರವಾನಿಸಿದ್ದಾರೆ.

ಜುಲೈ 14ರಂದು ಇನ್‌ಸ್ಟಾಗ್ರಾಮ್ ಸ್ಟೋರಿ ಪೋಸ್ಟ್ ಮಾಡಿದ್ದ ಸೈನಾ, "ಜೀವನವು ಕೆಲವೊಮ್ಮೆ ನಮ್ಮನ್ನು ವಿಭಿನ್ನ ದಿಕ್ಕುಗಳಲ್ಲಿ ಕರೆದೊಯ್ಯುತ್ತದೆ. ಸಾಕಷ್ಟು ಚಿಂತನೆ ಮತ್ತು ಪರಿಗಣನೆಯ ನಂತರ, ಕಶ್ಯಪ್ ಪರುಪಲ್ಲಿ ಮತ್ತು ನಾನು ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ನಮಗಾಗಿ ಮತ್ತು ಪರಸ್ಪರ ಶಾಂತಿ, ಬೆಳವಣಿಗೆ ಮತ್ತು ಗುಣಪಡಿಸುವಿಕೆಯನ್ನು ಆರಿಸಿಕೊಳ್ಳುತ್ತಿದ್ದೇವೆ" ಎಂದು ಸೈನಾ ಬರೆದುಕೊಂಡಿದ್ದರು. "ನೆನಪುಗಳಿಗೆ ನಾನು ಕೃತಜ್ಞನಾಗಿದ್ದೇನೆ ಮತ್ತು ಮುಂದುವರಿಯಲು ಉತ್ತಮವಾದದ್ದನ್ನು ಮಾತ್ರ ಬಯಸುತ್ತೇನೆ. ಈ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಮತ್ತು ಗೌರವಿಸಿದ್ದಕ್ಕಾಗಿ ಧನ್ಯವಾದಗಳು" ಎಂದು ಶಾಕ್ ನೀಡಿದ್ದರು.
ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಒಟ್ಟಿಗೆ ತರಬೇತಿ ಪಡೆದ ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರರಾದ ಸೈನಾ ಮತ್ತು ಕಶ್ಯಪ್ ಡಿಸೆಂಬರ್ 2014ರಲ್ಲಿ ವಿವಾಹವಾಗಿದ್ದರು. ಸೈನಾ ಅಧಿಕೃತವಾಗಿ ನಿವೃತ್ತಿ ಹೊಂದಿಲ್ಲವಾದರೂ, ಕಶ್ಯಪ್ ಅಕಾಡೆಮಿಯಲ್ಲಿ ತರಬೇತಿಗೆ ಪರಿವರ್ತನೆಗೊಂಡಿದ್ದಾರೆ. ಅವರ ವೃತ್ತಿಪರ ಸಾಧನೆಗಳು ಗಣನೀಯವಾಗಿವೆ. ಕಶ್ಯಪ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು. ವಿಶ್ವದ ಅಗ್ರ 10 ಸ್ಥಾನಗಳನ್ನು ತಲುಪಿದ್ದರು. ಆದರೆ ಸೈನಾ ಅವರು ಒಲಿಂಪಿಕ್ ಪದಕ ಗೆದ್ದ, ವಿಶ್ವ ಚಾಂಪಿಯನ್‌ಶಿಪ್ ಫೈನಲ್ ತಲುಪಿದ ಮತ್ತು ಬಿಡಬ್ಲ್ಯೂಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಎಂದು ಪ್ರಸಿದ್ಧರಾಗಿದ್ದಾರೆ.
ಸೈನಾ ತನ್ನ ತಾಯ್ನಾಡಿನಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಆಸಕ್ತಿಯನ್ನು ಹುಟ್ಟುಹಾಕಿದರು. ಹೆಣ್ಣುಮಕ್ಕಳ ಸಾಮೂಹಿಕ ಭಾಗವಹಿಸುವಿಕೆಯನ್ನು ಪ್ರೇರೇಪಿಸಿದರು. ಮಾತ್ರವಲ್ಲದೆ, ಅವರ ಫಲಿತಾಂಶಗಳು ಮಹಿಳಾ ಆಟಗಾರರಿಗೆ ಮಾತ್ರವಲ್ಲದೆ, ಇತರರ ಯಶಸ್ಸು ಸಾಧ್ಯ ಎಂದು ನಂಬುವಂತೆ ಮಾಡಿದ್ದರು. ಕಠಿಣ ಎದುರಾಳಿಗಳನ್ನು ಎದುರಿಸುವಾಗ ಎಲ್ಲಾ ಭಾರತೀಯ ಆಟಗಾರರಲ್ಲಿ ಬದಲಾವಣೆಗೆ ಪ್ರೇರಣೆಯಾಗಿದ್ದರು. ಭಾರತೀಯ ಬ್ಯಾಡ್ಮಿಂಟನ್‌ನ ಹೊಸ ಯುಗಕ್ಕೆ ಸ್ಫೂರ್ತಿ ನೀಡಿದ ಮತ್ತು ಭಾರತದಲ್ಲಿ ಮಹಿಳಾ ಕ್ರೀಡೆಯ ಗ್ರಹಿಕೆಗಳನ್ನು ಪರಿವರ್ತಿಸಿದ ಸೈನಾ ಅವರು ಪುರುಷ ಮತ್ತು ಮಹಿಳಾ ಆಟಗಾರರಿಬ್ಬರಿಗೂ ಪ್ರೇರಣೆ ನೀಡಿದ್ದಾರೆ.












Click it and Unblock the Notifications