RR Vs GT: ರಾಜಸ್ಥಾನ ರಾಯಲ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಗುಜರಾತ್ ಟೈಟಾನ್ಸ್
ರಶೀದ್ ಖಾನ್, ತೆವಾಟಿಯಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟಾನ್ಸ್ ರಾಜಸ್ಥಾನ ರಾಯಲ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ರಾಜಸ್ಥಾನ ರಾಯಲ್ಸ್ ಐಪಿಎಲ್ 2024ರ ಪಂದ್ಯಾವಳಿಯಲ್ಲಿ ಮೊದಲ ಸೋಲು ಕಂಡಿದೆ.
ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 196 ರನ್ ಗಳಿಸಿತು.

ಯಶಸ್ವಿ ಜೈಸ್ವಾಲ್ ಅವರ ರನ್ ಕೊರತೆ ಈ ಪಂದ್ಯದಲ್ಲಿ ಕೂಡ ಮುಂದುವರೆಯಿತು. 19 ಎಸೆತಗಳಲ್ಲಿ 24 ರನ್ ಗಳಿಸಿದ ಅವರು, ಉಮೇಶ್ ಯಾದವ್ ಅವರ ಬೌಲಿಂಗ್‌ನಲ್ಲಿ ಔಟಾದರು. ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಜೋಸ್ ಬಟ್ಲರ್ 10 ಎಸೆತಗಳಲ್ಲಿ 8 ರನ್ ಗಳಿಸಿ ಔಟಾದರು.
5.4 ಓವರ್ ಗಳಲ್ಲಿ 42 ರನ್ ಗಳಿಸಿದ ರಾಜಸ್ಥಾನ ರಾಯಲ್ಸ್ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ಈಹಂತದಲ್ಲಿ ಜವಾಬ್ದಾರಿಯುತ ಇನ್ನಿಂಗ್ಸ್ ಆಡುವ ಮೂಲಕ ಆಸರೆಯಾದರು.
ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ಇಬ್ಬರಿಗೂ ಜೀವದಾನ ಸಿಕ್ಕಿತು. ಕಳಪೆ ಫೀಲ್ಡಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ಅದಕ್ಕೆ ತಕ್ಕೆ ಬೆಲೆ ತೆತ್ತಿತು, ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ 130 ರನ್ ಕಲೆ ಹಾಕಿದರು. ಸ್ಯಾಮ್ಸನ್ 38 ಎಸೆತಗಳಲ್ಲಿ 7 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 68 ರನ್ ಗಳಿಸಿದರು. ರಿಯಾನ್ ಪರಾಗ್ 48 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ ಸಹಿತ 76 ರನ್ ಗಳಿಸಿದರು.
ಶುಭಮನ್ ಗಿಲ್ ಅರ್ಧಶತಕ
197 ರನ್‌ಗಳ ಸವಾಲಿನ ಮೊತ್ತವನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಉತ್ತಮ ಆರಂಭ ಪಡೆಯಿತು. ಸಾಯಿ ಸುದರ್ಶನ್ ಮತ್ತು ನಾಯಕ ಶುಭಮನ್ ಗಿಲ್ ಮೊದಲ ವಿಕೆಟ್‌ಗೆ 8.2 ಓವರ್ ಗಳಲ್ಲಿ 64 ರನ್ ಕಲೆಹಾಕಿದರು.
ಸಾಯಿ ಸುದರ್ಶನ್ 29 ಎಸೆತಗಳಲ್ಲಿ 35 ರನ್ ಗಳಿಸಿ ಔಟಾದರು. ಶುಭಮನ್ ಗಿಲ್ 44 ಎಸೆತಗಳಲ್ಲಿ 6 ಬೌಂಡರಿ 2 ಸಿಕ್ಸರ್ ಸಹಿತ 72 ರನ್ ಗಳಿಸಿದರು. ಮ್ಯಾಥ್ಯೂ ವೇಡ್ 4 ರನ್, ಅಭಿನವ್ ಮನೋಹರ್ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ರಾಹುಲ್ ತೆವಾಟಿಯಾ ಮತ್ತು ರಶೀದ್ ಖಾನ್ ಅವರು ಸ್ಫೊಟಕ ಬ್ಯಾಟಿಂಗ್ ಮೂಲಕ ಗುಜರಾತ್ ಟೈಟಾನ್ಸ್‌ಗೆ ರೋಚಕ ಗೆಲುವು ತಂದುಕೊಟ್ಟರು. ತೆವಾಟಿಯಾ 11 ಎಸೆತಗಳಲ್ಲಿ 22 ರನ್ ಗಳಿಸಿದರೆ, ರಶೀದ್ ಖಾನ್ 11 ಎಸೆತಗಳಲ್ಲಿ ಅಜೇಯ 24 ರನ್ ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.












Click it and Unblock the Notifications