Rohit Sharma: ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಎದುರಾಳಿಗಳಿಗೆ 'ಹಿಟ್ ಮ್ಯಾನ್' ರೋಹಿತ್ ವಾರ್ನಿಂಗ್
ಭಾರತ ತಂಡದ ಅಭಿಮಾನಿಗಳು ಬಹುದಿನಗಳಿಂದ ಕಾಯುತ್ತಿದ್ದ ದಿನ ಬಂದಿದೆ. ಹಿಟ್ ಮ್ಯಾನ್ ರೋಹಿತ್ ಶರ್ಮಾ ಯಾವಾಗ ಫಾರ್ಮ್‌ಗೆ ಮರಳುತ್ತಾರೋ ಎನ್ನುವ ಪ್ರಶ್ನೆಗೆ ಭಾನುವಾರ ಉತ್ತರ ಸಿಕ್ಕಿದೆ. ಭಾನುವಾರ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಅಬ್ಬರಿಸಿದ್ದಾರೆ. ಭರ್ಜರಿ ಶತಕ ಸಿಡಿಸುವ ಮೂಲಕ ಫಾರ್ಮ್‌ಗೆ ಮರಳಿದ್ದು ಭಾರತ ತಂಡದ ದೊಡ್ಡ ಚಿಂತೆಯೊಂದನ್ನು ದೂರವಾಗಿಸಿದ್ದಾರೆ.
ಶುಭಮನ್ ಗಿಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಆರಂಭದಿಂದಲೇ ಅಬ್ಬರಿಸಿದರು. 30 ಎಸೆತಗಳಲ್ಲೇ ತಮ್ಮ ಅರ್ಧಶತಕವನ್ನು ಪೂರೈಸಿದ ಅವರು ಇಂಗ್ಲೆಂಡ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. ಅರ್ಧಶತಕದ ಬಳಿಕ ಕೂಡ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದರ ಅವರು, 76 ಎಸೆತಗಳಲ್ಲೇ ಶತಕ ಪೂರೈಸಿ ಮಿಂಚಿದರು.

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 32ನೇ ಶತಕ ಪೂರೈಸಿ, ಅಭಿಮಾನಿಗಳ ದೊಡ್ಡ ಚಿಂತೆಯನ್ನು ದೂರವಾಗಿಸಿದರು. ತಮ್ಮ ವಿರುದ್ಧದ ಎಲ್ಲಾ ಟೀಕೆಗಳಿಗೆ ಕಟಕ್ ಅಂಗಳದಲ್ಲಿ ಬ್ಯಾಟ್‌ನಿಂದಲೇ ಉತ್ತರ ಕೊಟ್ಟಿದ್ದು, ಟೀಕಾಕಾರರ ಬಾಯಿ ಮುಚ್ಚಿಸಿದರು. 90 ಎಸೆತಗಳಲ್ಲಿ 12 ಬೌಂಡರಿ 7 ಸಿಕ್ಸರ್ ಸಹಿತ 119 ರನ್ ಗಳಿಸಿ ಔಟಾದರು.
ಭಾರತದ ಚಿಂತೆ ದೂರ
ರೋಹಿತ್ ಶರ್ಮಾ ಫಾರ್ಮ್ ಕಂಡುಕೊಂಡರೆ ಎಂತಹ ವಿಧ್ವಂಸಕ ಬ್ಯಾಟರ್ ಎನ್ನುವುದು ಕ್ರಿಕೆಟ್ ಜಗತ್ತಿಗೆ ಗೊತ್ತಿದೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಸ್ಪೋಟಕ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕವೇ ಭಾರತಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದರು. ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಮುನ್ನ ರೋಹಿತ್ ಫಾರ್ಮ್‌ಗೆ ಮರಳಿರುವುದು ಭಾರತ ತಂಡದ ದೊಡ್ಡ ಚಿಂತೆಯೊಂದನ್ನು ದೂರವಾಗಿಸಿದೆ.
ಸರಣಿಯ ಕೊನೆಯ ಪಂದ್ಯದಲ್ಲಿ ಏನಾದರೂ ರೋಹಿತ್‌ರಿಂದ ಮತ್ತೊಂದು ದೊಡ್ಡ ಇನ್ನಿಂಗ್ಸ್ ಬಂದರೆ ಭಾರತದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಲಿದೆ. ಫೆಬ್ರವರಿ 19 ರಂದು ಭಾರತ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಮೊದಲ ಪಂದ್ಯವನ್ನಾಡಲಿದ್ದು ಬಾಂಗ್ಲಾದೇಶವನ್ನು ಎದುರಿಸಲಿದೆ. ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತ ಸರಣಿ ಗೆದ್ದಿದ್ದು ಆತ್ಮ ವಿಶ್ವಾಸವನ್ನೂ ಹೆಚ್ಚಿಸಿದೆ.
ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ 5 ರನ್ ಗಳಿಸಿದ್ದು ನಿರಾಸೆ ಮೂಡಿಸಿದ್ದಾರೆ. ಅಹಮದಾಬಾದ್‌ನಲ್ಲಿ ನಡೆಯಲಿರುವ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೂಡ ಫಾರ್ಮ್‌ಗೆ ಮರಳಿದರೆ ಭಾರತದ ಬ್ಯಾಟಿಂಗ್ ಮತ್ತಷ್ಟು ಬಲಿಷ್ಠವಾಗಲಿದೆ. ಗಿಲ್, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಈಗಾಗಲೇ ಭರವಸೆ ಮೂಡಿಸಿದ್ದು ರೋಹಿತ್ ಶರ್ಮಾ ಕೂಡ ಫಾರ್ಮ್‌ಗೆ ಮರಳಿದ್ದಾರೆ.












Click it and Unblock the Notifications