Rishabh Pant: ವಿಕೆಟ್ ಕೀಪಿಂಗ್‌ನಲ್ಲೂ ದಾಖಲೆ ಬರೆದ ರಿಷಭ್ ಪಂತ್
ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ದಾಖಲೆ ಬರೆದಿದ್ದಾರೆ. ಮೊದಲು ಶತಕ ಬಾರಿಸಿ ಅಬ್ಬರಿಸಿದ್ದ ರಿಷಭ್ ಪಂತ್, ಈಗ ವಿಕೆಟ್ ಕೀಪಿಂಗ್‌ನಲ್ಲೂ ಅಮೋಘ ಪ್ರದರ್ಶನ ನೀಡಿ ದಾಖಲೆ ಬರೆದಿದ್ದಾರೆ. ಈ ಮೂಲಕ ಈ ಸಾಧನೆಯನ್ನು ಮಾಡಿದ ಭಾರತದ ಮೂರನೇ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಭಾನುವಾರ 3 ವಿಕೆಟ್‌ಗೆ 209 ರನ್‌ಗಳಿಂದ ಮೊದಲ ಇನಿಂಗ್ಸ್ ಮುಂದುವರೆಸಿದ ಇಂಗ್ಲೆಂಡ್ ಉತ್ತಮ ಆರಂಭವನ್ನು ಮಾಡಿತು. ಈ ವೇಳೆ ಶನಿವಾರ ಶತಕ ಬಾರಿಸಿದ್ದ ಒಲಿ ಪೋಪ್ ಅವರಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣಾ ಖೆಡ್ಡಾ ತೋಡಿದರು. ಪ್ರಸಿದ್ಧ್ ಎಸೆದ ಶಾರ್ಟ್ ಹಾಗೂ ವೈಡ್ ಎಸೆತವನ್ನು ತಪ್ಪಾಗಿ ಗ್ರಹಿಸಿದ ಪೋಪ್ ರಿಷಭ್‌ಗೆ ಕ್ಯಾಚ್ ನೀಡಿದರು.

ಮೊದಲ ಇನಿಂಗ್ಸ್‌ನಲ್ಲಿ ರಿಷಭ್ ಪಂತ್ 178 ಎಸೆತಗಳನ್ನು ಎದುರಿಸಿ 12 ಬೌಂಡರಿ, 6 ಸಿಕ್ಸರ್ ಸಹಾಯದಿಂದ 134 ರನ್ ಸಿಡಿಸಿ ತಂಡಕ್ಕೆ ನೆರವಾದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಭಾರತದ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಇವರಿಗಿಂತಲೂ ಮೊದಲು ಈ ಸಾಧನೆಯನ್ನು ಎಂಎಸ್ ಧೋನಿ ಮಾಡಿದ್ದರು. ಪಂತ್ ಅವರು ಗುರು ಧೋನಿ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಈಗ ವಿಕೆಟ್ ಕೀಪರ್ ಆಗಿಯೂ ಧೋನಿ ಅವರ ವಿಶೇಷ ಕ್ಲಬ್‌ಗೆ ಸ್ಥಾನ ಪಡೆದಿದ್ದಾರೆ.
ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ದಾಖಲೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಸಲ್ಲುತ್ತದೆ. ಎಂಎಸ್ ಧೋನಿ 256 ಕ್ಯಾಚ್‌ಗಳನ್ನು ಪಡೆದ ದಾಖಲೆಯನ್ನು ಹೊಂದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಸೈಯದ್ ಕಿರ್ಮಾನಿ ಇದ್ದಾರೆ. ಇವರು 160 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಇನ್ನು ರಿಷಭ್ ಪಂತ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಪಂತ್ 151 ಕ್ಯಾಚ್‌ಗಳನ್ನು ಪಡೆದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.

ಬುಮ್ರಾಗೆ ಐದು ವಿಕೆಟ್
ಭಾನುವಾರ ಮೊದಲ ಇನಿಂಗ್ಸ್ ಮುಂದುವರೆಸಿದ ಇಂಗ್ಲೆಂಡ್ 465 ರನ್‌ಗಳಿಗೆ ಅಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ 6 ರನ್‌ಗಳ ಅಲ್ಪ ಮುನ್ನಡೆ ಸಾಧಿಸುವಲ್ಲಿ ಸಫಲವಾಯಿತು. ಇನ್ನು ಇಂಗ್ಲೆಂಡ್ ತಂಡದ ಪರ ಒಲಿ ಪೋಪ್ (106 ರನ್) ಶತಕ ಬಾರಿಸಿ ಮಿಂಚಿದರು. ಹ್ಯಾರಿ ಬ್ರೂಕ್ (99 ರನ್) ಒಂದು ರನ್‌ಗಳಿಂದ ಶತಕ ವಂಚಿತರಾದರು. ಜೇಮಿ ಸ್ಮಿತ್ 40, ಕ್ರಿಸ್ ವೋಕ್ಸ್ 38 ರನ್ ಸಿಡಿಸಿ ತಂಡಕ್ಕೆ ಆಧಾರವದರು. ಆದರೆ ಇನಿಂಗ್ಸ್ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಟೀಮ್ ಇಂಡಿಯಾದ ಪರ ಜಸ್ಪ್ರಿತ್ ಬುಮ್ರಾ 83 ರನ್ ನೀಡಿ 5 ವಿಕೆಟ್ ಕಬಳಿಸಿದರು. ಇನ್ನು ಕನ್ನಡಿಗ ಪ್ರಸಿದ್ಧ್ ಕೃಷ್ಣಾ 3, ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು.












Click it and Unblock the Notifications