ನಮ್ ಹುಡುಗ್ರು 'ಚಿನ್ನ' ಸ್ವಾಮಿ: ಆರ್‌ಸಿಬಿ ಗೆಲುವಿಗೆ ಮನಸೋತ ಡಿಸಿಎಂ ಡಿಕೆ ಶಿವಕುಮಾರ್
DK Shivakumar On RCB: ಐಪಿಎಲ್ 2025ರ 42ನೇ ಪಂದ್ಯದಲ್ಲಿ ಆರ್‌ಸಿಬಿಯು ಕೊನೆಗೂ ತವರು ಅಂಗಳ ಬೆಂಳಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಗೆಲುವು ಸಾಧಿಸಿದೆ. ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಫೈನಲ್ ಮ್ಯಾಚ್ ಗೆದ್ದ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದರು. ಮತ್ತೊಂದೆಡೆ ಡಿಸಿಎಂ ಡಿಕೆ ಶಿವಕುಮಾರ್ ಈ ಬಗ್ಗೆ ಟ್ವೀಟ್‌ನಲ್ಲಿ ಏನು ಹೇಳಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.
ನಮ್ ಹುಡುಗ್ರು 'ಚಿನ್ನ' ಸ್ವಾಮಿ!❤️
— DK Shivakumar (@DKShivakumar) April 24, 2025
And finally we win at home! Congratulations @RCBTweets for finally getting a win on the home ground. What an intense, nail biting match it was.
Great game boys, this one’s special!#PlayBold #ನಮ್ಮRCB #IPL2025 #RCBvRR pic.twitter.com/4Y76KE7r3r
ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ಸತತ ಮೂರು ಪಂದ್ಯಗಳನ್ನು ಸೋತಿತ್ತು. ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನುಭವಿಸಿತ್ತು. ಇನ್ನು ತವರಿಂದಾಚೆ ಆಡಿದ್ದ ಎಲ್ಲಾ ಪಂದ್ಯಗಳನ್ನು ಗೆದ್ದಿತ್ತು. ಆದರೆ, ಗುರುವಾರ ಆರ್‌ಆರ್ ವಿರುದ್ಧ 11 ರನ್‌ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಆರ್‌ಸಿಬಿಯು ಈ ಆವೃತ್ತಿಯಲ್ಲಿ ತವರಿನಲ್ಲಿ ಮೊದಲ ಪಂದ್ಯ ಗೆದ್ದಿದೆ. ಈ ಬಗ್ಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ನಮ್ ಹುಡುಗ್ರು 'ಚಿನ್ನ' ಸ್ವಾಮಿ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಅಂತಿಮವಾಗಿ ನಾವು ತವರಿನಲ್ಲಿ ಗೆದ್ದಿದ್ದೇವೆ. ತವರು ನೆಲದಲ್ಲಿ ಕೊನೆಗೂ ಗೆಲುವು ಸಾಧಿಸಿದ್ದಕ್ಕಾಗಿ ನಮ್ಮ ರಾಯಲ್ ಹುಡುಗರಿಗೆ ಅಭಿನಂದನೆಗಳು. ಆರ್‌ಆರ್ ವಿರುದ್ಧ ನಡೆದ ಪಂದ್ಯ ಅದ್ಭುತವಾಗಿತ್ತು. ಇದು ಅದ್ಭುತ ಆಟ, ತುಂಬಾ ವಿಶೇಷವಾಗಿತ್ತು ಹುಡುಗರೇ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರನ್ನು ಹೊಗಳಿದ್ದಾರೆ.
ಆರ್‌ಆರ್ ವಿರುದ್ಧ ಗೆಲುವಿನ ಮೂಲಕ ಐಪಿಎಲ್ 2025ರಲ್ಲಿ ಆರ್‌ಸಿಬಿ ತನ್ನ ತವರಿನಲ್ಲಿ ಸೋಲಿನ ಸರಣಿಗೆ ಅಂತ್ಯ ಹಾಡಿತು. ಇದೇ ಕ್ರೀಡಾಂಗಣದಲ್ಲಿ ಸತತ 3 ಪಂದ್ಯಗಳಲ್ಲಿ ಸೋತಿದ್ದ ರಜತ್ ಪಟಿದಾರ್ ನಾಯಕತ್ವದ ಆರ್‌ಸಿಬಿ ತಂಡ ನಿನ್ನೆಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ 11 ರನ್‌ಗಳಿಂದ ಸೋಲುಣಿಸಿತು.
ಆರ್‌ಸಿಬಿ ಆರ್‌ಆರ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆಯೇ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಆಕರ್ಷಕ ಅರ್ಧಶತಕ ಸಿಡಿಸಿದರು. ಈ ರನ್‌ಗಳ ನೆರವಿನಿಂದ ತಂಡ 205 ರನ್ ಕಲೆ ಹಾಕಲು ಸಾಧ್ಯವಾಯಿತು.
ಬಳಿಕ ಆರ್‌ಆರ್ ಪರ ಬ್ಯಾಟಿಂಗ್ ಮಾಡಿದ ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೆಲ್ ಅವರ ಅಬ್ಬರದ ಇನ್ನಿಂಗ್ಸ್ ರಾಜಸ್ಥಾನಕ್ಕೆ ಗೆಲುವಿನ ಭರವಸೆ ಮೂಡಿಸಿತ್ತು. ಆದರೆ, ಕೊನೆಗೆ ಜೋಶ್ ಹ್ಯಾಜಲ್‌ವುಡ್ ಮಾರಕ ಬೌಲಿಂಗ್ ದಾಳಿಯಿಂದ ಮೂಲಜ ಪಂದ್ಯದ ದಿಕ್ಕನ್ನೇ ಬದಲಿಸಿಬಿಟ್ಟರು. ಇದು ಕೂಡ ಆರ್‌ಸಿಬಿ ಗೆಲುವಿಗೆ ಪ್ರಮುಖ ಕಾರಣವಾಯಿತು.
ರಜತ್ ಪಾಟೀದಾರ್ ಹೇಳಿದ್ದೇನು?: ಪಂದ್ಯ ಗೆದ್ದ ಬಳಿಕ ಮಾತನಾಡಿದ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್, ಈ ಗೆಲುವು ನಮಗೆ ತುಂಬಾ ಅಗತ್ಯ ಆಗಿತ್ತು. ಈ ಪಂದ್ಯದಲ್ಲಿ 10ನೇ ಓವರ್ ನಂತರ ನಮ್ಮ ಬೌಲರ್ಗಳು ಆರ್‌ಆರ್ ಬ್ಯಾಟಿಂಗ್ ಅಬ್ಬರಕ್ಕೆ ಫುಲ್ ಸ್ಟಾಪ್ ಇಡುತ್ತಾ ಬಂದರು. ಆದ್ದರಿಂದ ತಂಡದ ಗೆಲುವಿನ ಕ್ರೆಡಿಟ್ ಬೌಲರ್‌ಗಳಿಗೆ ಸಲ್ಲುತ್ತದೆ ಎಂದು ಹೇಳಿದರು.
ರಾಜಸ್ಥಾನ್ ರಾಯಲ್ಸ್ ಕೂಡ ಆರ್‌ಸಿಬಿಯಂತೆಯೇ ಆರಂಭದಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನ ಮಾಡಿತು. ಆಗ ನಾವು ವಿಕೆಟ್‌ಗಳನ್ನು ಹುಡುಕುತ್ತಿದ್ದೆವು. ವಿಕೆಟ್ ಬಿದ್ದಾಗ ಮಾತ್ರ ರನ್ ಓಟಕ್ಕೆ ಬ್ರೇಕ್ ಹಾಕಬಹುದು. ನಮ್ಮಲ್ಲಿ ಉತ್ತಮ ನಾಯಕರ ತಂಡವಿದೆ. ಅವರಿಂದ ತುಂಬಾ ಸಹಾಯ ಆಗುತ್ತಿದೆ ಎಂದು ಹೇಳಿದರು.












Click it and Unblock the Notifications