RCB vs PBKS: ತವರಿನಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಾ ಆರ್‌ಸಿಬಿ?
ಐಪಿಎಲ್ 2024ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡದ ವಿರುದ್ಧ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಎರಡನೇ ಪಂದ್ಯವನ್ನು ತವರಿನಲ್ಲಿ ಆಡಲಿದೆ.
ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ತವರಿನ ಮೊದಲ ಪಂದ್ಯವನ್ನು ಗೆದ್ದು ಹೊಸ ಅಧ್ಯಾಯ ಆರಂಭಿಸುವ ತವಕದಲ್ಲಿದೆ ಆರ್‌ಸಿಬಿ.

ಮೊದಲ ಪಂದ್ಯ ಸೋತಿರುವ ಆರ್ ಸಿಬಿ ತಪ್ಪುಗಳನ್ನು ತಿದ್ದಿಕೊಂಡು ತವರಿನಲ್ಲಿ ಗೆಲುವಿನ ಅಭಿಯಾನ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮತ್ತೊಂದೆಡೆ ಆಡಿದ ಮೊದಲ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸುಲಭ ಗೆಲುವು ಸಾಧಿಸಿರುವ ಪಂಜಾಬ್ ಕಿಂಗ್ಸ್ ಗೆಲುವಿನ ಓಟ ಮುಂದುವರೆಸುವ ವಿಶ್ವಾಸದಲ್ಲಿದೆ.
ಆರ್‌ಸಿಬಿ ಗೆಲುವಿನ ಅಧ್ಯಾಯ?
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬ್ಯಾಟರ್ ಗಳ ಅಬ್ಬರ ಜೋರಾಗಿರುವ ಸಾಧ್ಯತೆ ಇದೆ. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಆರ್‌ಸಿಬಿ ತವರಿನ ಲಾಭ ಪಡೆದರೆ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಬಹುದು.
ಚಿನ್ನಸ್ವಾಮಿಯಲ್ಲಿ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್, ಅನುಜ್ ರಾವತ್ ಅವರ ಮೇಲೆ ದೊಡ್ಡ ಮೊತ್ತ ಪೇರಿಸುವ ಜವಾಬ್ದಾರಿ ಇದೆ.
ಪಂಜಾಬ್ ಕಿಂಗ್ಸ್ ತಂಡದಲ್ಲಿ ಕೂಡ ಬಲಿಷ್ಠ ಬ್ಯಾಟಿಂಗ್ ಪಡೆ ಇದೆ. ಶಿಖರ್ ಧವನ್, ಜಾನಿ ಬೈರ್ ಸ್ಟೋ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಸ್ಯಾಮ್ ಕರನ್, ಪ್ರಭ್‌ಸಿಮ್ರಾನ್ ಸಿಂಗ್ ಮೇಲೆ ರನ್ ಗಳಿಸುವ ಜವಾಬ್ದಾರಿ ಇದೆ.
ಬೌಲಿಂಗ್‌ನಲ್ಲಿ ಸುಧಾರಣೆ ಬೇಕು?
ತವರಿನಲ್ಲಿ ಗೆಲ್ಲಬೇಕಾದರೆ ಆರ್‌ಸಿಬಿ ಬೌಲಿಂಗ್‌ನಲ್ಲಿ ಸುಧಾರಣೆ ಕಾಣಬೇಕಿದೆ. ಮುಖ್ಯವಾಗಿ ಡೆತ್ ಬೌಲಿಂಗ್ ಸುಧಾರಿಸಬೇಕಾಗಿದೆ. ಅಲ್ಜಾರಿ ಜೋಸೆಫ್ ಬದಲಾಗಿ ಲಾಕಿ ಫರ್ಗ್ಯುಸನ್ ಕಣಕ್ಕಿಳಿಯುವ ಸಾಧ್ಯತೆ ಇದೆ.
ಚಿನ್ನಸ್ವಾಮಿ ಪಿಚ್ ಹೇಗಿದೆ?
ಚಿನ್ನಸ್ವಾಮಿ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್‌ಗೆ ಹೆಚ್ಚಿನ ನೆರವು ನೀಡುತ್ತದೆ. ಆದರೂ, ಸ್ಪಿನ್ ಮತ್ತು ನಿಧಾನ ಗತಿಯ ಬೌಲಿಂಗ್ ಮಾಡಿದ ಬ್ಯಾಟರ್ ಗಳನ್ನು ಕಟ್ಟಿಹಾಕಬಹುದಾಗಿದೆ. ಮೊದಲು ಬ್ಯಾಟಿಂಗ್ ಮಾಡುವ ತಂಡ 180-190 ರನ್ ಗಳಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ.
ಹೆಡ್ ಟು ಹೆಡ್ ದಾಖಲೆ
ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಇದುವರೆಗೂ 31 ಬಾರಿ ಮುಖಾಮುಖಿಯಾಗಿವೆ. ಆರ್‌ಸಿಬಿ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಪಂಜಾಬ್ ಕಿಂಗ್ಸ್ 17 ಬಾರಿ ಗೆಲುವು ಸಾಧಿಸಿದೆ. ಆದರೆ ಈ ಬಾರಿ ತಂಡಗಳ ಬಲಾಬಲ ನೋಡಿದರೆ ಆರ್‌ಸಿಬಿ ಮೇಲುಗೈ ಸಾಧಿಸುವ ಸಾಧ್ಯತೆ ಇದೆ.
ಸಂಭಾವ್ಯ ಆಡುವ ಬಳಗ
ಆರ್‌ಸಿಬಿ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಮಯಾಂಕ್ ಮಾರ್ಕಂಡೆ, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಅಲ್ಜಾರಿ ಜೋಸೆಫ್/ ಲಾಕಿ ಫರ್ಗ್ಯುಸನ್.
ಪಂಜಾಬ್ ಕಿಂಗ್ಸ್: ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರ್ರಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್.
ಸೋಮವಾರ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.












Click it and Unblock the Notifications