RCB: ಜೋಶ್ ಹೇಜಲ್‌ವುಡ್, ಟಿಮ್ ಡೇವಿಡ್ ಫಿಟ್‌ನೆಸ್ ಬಗ್ಗೆ ಜಿತೇಶ್ ಶರ್ಮಾ ಮಹತ್ವದ ಮಾಹಿತಿ
ಐಪಿಎಲ್ 2025ರ ಪ್ಲೇಆಫ್‌ಗೆ ಮುನ್ನ ಆರ್ ಸಿಬಿಗೆ ಹಲವು ಸಮಸ್ಯೆಗಳು ಎದುರಾಗಿವೆ. ಪ್ರಮುಖ ಆಟಗಾರ ಜೇಕಬ್ ಬೆಥೆಲ್, ಲುಂಗಿ ಎಂಗಿಡಿ ಅಲಭ್ಯರಾಗಿದ್ದರೆ, ಜೋಶ್ ಹೇಜಲ್‌ವುಡ್ ಮತ್ತು ಟಿಮ್ ಡೇವಿಡ್ ಗಾಯಗೊಂಡಿದ್ದಾರೆ. ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೆ ಮುನ್ನವೇ ಜೋಶ್ ಹೇಜಲ್‌ವುಡ್ ಭುಜದ ಗಾಯದಿಂದ ಹೊರಗುಳಿದಿದ್ದಾರೆ, ಸನ್‌ರೈಸರ್ಸ್ ಹೈದಾರಾಬಾದ್ ವಿರುದ್ಧದ ಪಂದ್ಯದ ವೇಳೆ ಟಿಮ್ ಡೇವಿಡ್ ಗಾಯಗೊಂಡಿದ್ದರು.
ಮಂಗಳವಾರ ಲಕ್ನೋದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಆರ್ ಸಿಬಿ ತಂಡದ ನಾಯಕ ಜಿತೇಶ್ ಶರ್ಮಾ ಇಬ್ಬರು ಆಟಗಾರರ ಫಿಟ್‌ನೆಸ್ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಎಲ್‌ಎಸ್‌ಜಿ ವಿರುದ್ಧವೇ ಜೋಶ್ ಹೇಜಲ್‌ವುಡ್ ಆಡುತ್ತಾರೆ ಎನ್ನಲಾಗಿತ್ತು ಆದರೆ ಅವರ ಬದಲಾಗಿ ನುವಾನ್ ತುಷಾರ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆದರು.

ಜಿತೇಶ್ ಶರ್ಮಾ ಹೇಳಿದ್ದೇನು?
ಟಾಸ್ ಬಳಿಕ ಮಾತನಾಡಿದ ಜಿತೇಶ್ ಶರ್ಮಾ, ಪ್ಲೇಆಫ್ ಪಂದ್ಯದಲ್ಲಿ ನಿಮಗೆ ಅಚ್ಚರಿ ಕಾದಿದೆ ಎಂದರು. ಜೋಶ್ ಹೇಜಲ್‌ವುಡ್ ಮತ್ತು ಟಿಮ್ ಡೇವಿಡ್ ಪ್ಲೇಆಫ್ ಪಂದ್ಯದ ವೇಳೆಗೆ ಫಿಟ್ ಆಗಲಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಶುಭ ಸುದ್ದಿ ಸಿಕ್ಕಂತಾಗಿದೆ.
ಪ್ಲೇಆಫ್‌ನಲ್ಲಿ ಆಡುವುದು ಖಚಿತ
ಜೋಶ್ ಹೇಜಲ್‌ವುಡ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡುವವರೆಗೆ ಆರ್ ಸಿಬಿ ಬೌಲಿಂಗ್ ಮಾರಕವಾಗಿತ್ತು. 10 ಪಂದ್ಯಗಳಲ್ಲೇ ಅವರು 18 ವಿಕೆಟ್ ಪಡೆದಿದ್ದರು. ಅದಾದ ಬಳಿಕ ಭುಜದ ನೋವಿನಿಂದ ಬಳಲಿದ್ದ ಅವರು ಸಿಎಸ್‌ಕೆ ವಿರುದ್ಧದ ಪಂದ್ಯದಿಂದ ಹೊರಗುಳಿದರು. ಪಾಕಿಸ್ತಾನ ಭಾರತದ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಐಪಿಎಲ್ ಪಂದ್ಯಾವಳಿ ಒಂದು ವಾರ ಸ್ಥಗಿತಗೊಂಡ ಬಳಿಕ ಜೋಶ್ ಹೇಜಲ್‌ವುಡ್ ಅಸ್ಟ್ರೇಲಿಯಾಗೆ ವಾಪಸ್ ಹೋಗಿದ್ದರು.
ಐಪಿಎಲ್ ಮತ್ತೆ ಆರಂಭದ ಬಳಿಕ ಅವರು ವಾಪಸ್ ಬರುವ ಬಗ್ಗೆ ಪ್ರಶ್ನೆಗಳಿದ್ದವು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಇರುವ ಕಾರಣ ಅವರು ಆಸ್ಟ್ರೇಲಿಯಾ ತಂಡಕ್ಕಾಗಿ ಫಿಟ್ ಆಗಲು ಅಭ್ಯಾಸ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಅವರು ಐಪಿಎಲ್ ಪ್ಲೇಆಫ್ ಆಡಲು ವಾಪಸ್ ಬಂದಿರುವುದು ಅಭಿಮಾನಿಗಳಿಗೆ ನೆಮ್ಮದಿ ತರಿಸಿದೆ.
ಒಂದು ವೇಳೆ ಆರ್ ಸಿಬಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತರೆ ಮುಂಬೈ ಇಂಡಿಯನ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯ ಆಡಲಿದೆ. ಎಲ್‌ಎಸ್‌ಜಿ ವಿರುದ್ಧ ಗೆಲುವು ಸಾಧಿಸಿದರೆ ಪಂಜಾಬ್ ಕಿಂಗ್ಸ್ ವಿರುದ್ಧ ಕ್ವಾಲಿಫೈಯರ್ ಪಂದ್ಯ ಆಡಲಿದೆ.












Click it and Unblock the Notifications