RCB Match in Bengaluru: ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯಕ್ಕೆ ಭಾರೀ ಬಿಗಿ ಭದ್ರತೆ
RCB Match in Bengaluru: ಐಪಿಎಲ್ 2025ರ 58ನೇ ಪಂದ್ಯ ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ನಡೆಯಲಿದೆ. ಈ ಹೈ ವೋಲ್ಟೇಜ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳ ದಂಡೇ ಹರಿದುಬರಲಿದೆ. ಈ ಹಿನ್ನೆಲೆ ಪೊಲೀಸರು ಭಾರೀ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಕಾರಣ ಆಟಗಾರರು, ಅಭಿಮಾನಿಗಳ ಹಿತದೃಷ್ಟಿಯಿಂದ ಬಿಸಿಸಿಐಯು ಪ್ರಾಂಚೈಸಿ ಮನವಿ ಮೇರೆಗೆ ಐಪಿಎಲ್ 2025 ಟೂರ್ನಿಯನ್ನು ರದ್ದಪಡಿಸಿ ಒಂದು ವಾರಕ್ಕೆ ಮುಂದೂಡಿಕೆ ಮಾಡಿತ್ತು. ಇದೀಗ ಎರಡು ರಾಷ್ಟ್ರಗಳ ನಡುವೆ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಂತೆಯೇ ಮೇ 17ರಂದು ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ಮೊದಲ ಪಂದ್ಯ ನಡೆಯಲಿದೆ.

ಈ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಆರ್‌ಸಿಬಿ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಬರುವ ಸಾಧ್ಯತೆಯಿದೆ. ಅದರಲ್ಲೂ ವಿದಾಯ ಪಂದ್ಯವಿಲ್ಲದೆ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ ಹಿನ್ನೆಲೆ ಅವರಿಗೆ ಎಲ್ಲಾರೂ ವೈಟ್ ಜೆರ್ಸಿ ಧರಿಸಿ ಗೌರವ ಸಲ್ಲಿಸಲು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಅಂದು ಇಡೀ ಕ್ರೀಡಾಂಗಣವೇ ಶ್ವೇತ ವರ್ಣದಿಂದ ರಾರಾಜಿಸಲಿದೆ.
ವಿರಾಟ್ ಕೊಹ್ಲಿಗಾಗಿಯೇ ಆರ್‌ಸಿಬಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದೆ. ಅಲ್ಲದೆ, ಭಾರತ ಹಾಗೂ ಪಾಕಿಸ್ತಾನದ ನಡುವಿನ ಘರ್ಷಣೆ ಬಳಿಕ ಐಪಿಎಲ್ ಪುನರಾರಂಭ ಆಗುತ್ತಿರುವ ಈ ಹಿನ್ನೆಲೆ ಯಾವುದೇ ಅಹಿತಕರ ನಡೆಯದಂತೆ ಚಿನ್ನಸ್ವಾಮಿ ಮೈದಾನದ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಆರ್ಸಿಬಿ-ಕೆಕೆಆರ್ ನಡುವೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಸಂಜೆ 7:30ಕ್ಕೆ ಹೈವೋಲ್ಟೇಜ್ ಪಂದ್ಯ ಆರಂಭ ಆಗಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಲೂ 1,600 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಈ ಪೈಕಿ ನಾಲ್ವರು ಡಿಸಿಪಿ, 12 ಎಸಿಪಿ, 28 ಇನ್ಸ್ಪೆಕ್ಟರ್, 80 ಸಬ್ ಇನ್ಸ್ಪೆಕ್ಟರ್ ಸೇರಿದ್ದಾರೆ. ಜೊತೆಗೆ ಕ್ಯೂಆರ್ಟಿ, ವಾಟರ್ ಜೆಟ್, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ನಿಯೋಜನೆ ಮಾಡಲಾಗಿದೆ. 4 ಕೆಎಸ್ಆರ್ಪಿ ತುಕಡಿ, ಹೋಂಗಾರ್ಡ್ಸ್ ಅನ್ನು ಸಹ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಪಂದ್ಯ ಆರಂಭವಾಗುವ ಮೊದಲೇ ಪ್ರತಿ 2 ಗಂಟೆಗಳಿಗೊಮ್ಮೆ ಡಾಗ್ ಸ್ಕ್ವಾಡ್ ಹಾಗೂ ಬಾಂಬ್ ಸ್ಕ್ವಾಡ್ನಿಂದ ತಪಾಸಣೆ ನಡೆಸಲಾಗುತ್ತದೆ. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಲಿನ ರಸ್ತೆಗಳಲ್ಲೂ ಭದ್ರತೆ ಹೆಚ್ಚಳ ಮಾಡಲಾಗಿದೆ. ಕ್ವೀನ್ಸ್ ರಸ್ತೆ, ಕಬ್ಬನ್ ಪಾರ್ಕ್ ಜಂಕ್ಷನ್, ಎಂಜಿ ರಸ್ತೆ ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್ಗಳಲ್ಲೂ ಭದ್ರತಾ ಸಿಬ್ಬಂದಿ ಇರಲಿದ್ದಾರೆ.
ಆರ್‌ಸಿಬಿ ಈ ಆವೃತ್ತಿಯಲ್ಲಿ ಇದುವರೆಗೂ ಆಡಿರುವ 11 ಪಂದ್ಯಗಳಲ್ಲಿ 8ರಲ್ಲಿ ಗೆದ್ದು, ಮೂರರಲ್ಲಿ ಸೋಲು ಕಂಡು 16 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಮೂಲಕ ಪ್ಲೇ ಆಫ್ ಹಾದಿಯನ್ನು ತುಸು ಸುಗಮಗೊಳಿಸಿಕೊಂಡಿದೆ. ಉಳಿದ ಮೂರು ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದರೂ ಪ್ಲೇ ಆಫ್ ಪ್ರವೇಶಿಸಲಿದೆ. ಆದ್ದರಿಂದ ನಾಳೆ ತವರಿನಲ್ಲಿ ಕೆಕೆಆರ್ ವಿರುದ್ಧ ಗೆದ್ದೇ ಗೆಲ್ಲಬೇಕು ಎನ್ನುವ ಹಠದಲ್ಲಿ ಆರ್‌ಸಿಬಿ ಇದೆ.












Click it and Unblock the Notifications