RCB: ಆಸ್ಟ್ರೇಲಿಯಾದಲ್ಲಿ ಅಬ್ಬರಿಸಿದ ಜೇಕಬ್ ಬೆಥೆಲ್; ಆರ್‌ಸಿಬಿ ಫ್ಯಾನ್ಸ್ ಏನಂದ್ರು?
2025ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಆಲ್‌ರೌಂಡರ್ ವಿಲ್ ಜ್ಯಾಕ್ಸ್‌ರನ್ನು ಖರೀದಿಸದೆ ಇಂಗ್ಲೆಂಡ್‌ನ ಮತ್ತೊಬ್ಬ ಆಲ್‌ರೌಂಡರ್ ಜೇಕಬ್ ಬೆಥೆಲ್‌ರನ್ನು 2.60 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಆರ್ ಸಿಬಿಯ ಈ ನಡೆ ಹಲವರಲ್ಲಿ ಅಚ್ಚರಿ ಮೂಡಿಸಿತ್ತು, ಕಳೆದ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ವಿಲ್ ಜ್ಯಾಕ್ಸ್‌ರನ್ನು ಬಿಟ್ಟು ಜೇಕಬ್ ಬೆಥೆಲ್‌ರನ್ನು ಖರೀದಿಸಿದ್ದೇಕೆ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿತ್ತು.
ಬಳಿಕ ಜೇಕಬ್ ಬೆಥೆಲ್ ಬಗ್ಗೆ ಹುಡುಕಾಡಿದಾಗ ಆತನ ಪ್ರತಿಭೆ ಅಭಿಮಾನಿಗಳಿಗೆ ಮನವರಿಕೆಯಾಗಿತ್ತು. ಕೆಲವೇ ದಿನಗಳಲ್ಲಿ ಆತ ಇಂಗ್ಲೆಂಡ್ ತಂಡದಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿದ್ದಲ್ಲದೆ, ಏಕದಿನ, ಟೆಸ್ಟ್ ಮತ್ತು ಟಿ20 ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲೂ ಮಿಂಚಿದ್ದಾರೆ.

ಈಗ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಜೇಕಬ್ ಬೆಥಲ್‌ರ ಇನ್ನಿಂಗ್ಸ್ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆರ್ ಸಿಬಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಅದರಲ್ಲೂ ಸ್ಪಿನ್ ಬೌಲರ್ ಗೆ ಬೆಥೆಲ್ ಸಿಕ್ಸರ್ ಬಾರಿಸಿದ್ದು, ರಜತ್ ಪಟಿದಾರ್ ಜೊತೆ ಈತ ಆಡಿದರೆ ಎದುರಾಳಿಗಳಿಗೆ ಸಿಂಹಸ್ವಪ್ನವಾಗುತ್ತಾರೆ ಎನ್ನುತ್ತಿದ್ದಾರೆ ಆರ್ ಸಿಬಿ ಫ್ಯಾನ್ಸ್.
ಬಿಗ್ ಬ್ಯಾಷ್ ಲೀಗ್‌ನಲ್ಲಿ ಬೆಥೆಲ್ ಮೆಲ್ಬೋರ್ನ್ ರೆನಿಗೇಡ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಸೋಮವಾರ ಪರ್ಥ್ ಸ್ಕಾರ್ಚರ್ಸ್ ವಿರುದ್ಧದ ಪಂದ್ಯದಲ್ಲಿ 22 ಎಸೆತಗಳಲ್ಲಿ 2 ಬೌಂಡರಿ 2 ಸಿಕ್ಸರ್ ಸಹಿತ 30 ರನ್ ಸಿಡಿಸಿದ ಜೇಕಬ್ ಬೆಥೆಲ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಭಾರತದ ವಿರುದ್ಧ ಆಡಲು ಸಜ್ಜು
ಜೇಕಬ್ ಬೆಥೆಲ್ ಈಗ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಾಗಿದೆ. ಆತ ಮುನ್ನಲೆಗೆ ಬಂದ ಕೆಲವೇ ದಿನಗಳಲ್ಲಿ ಇಂಗ್ಲೆಂಡ್‌ನ ಮೂರು ಮಾದರಿಯಲ್ಲಿ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಜನವರಿ ಮತ್ತು ಫೆಬ್ರವರಿಯಲ್ಲಿ ನಡೆಯಲಿರು ಭಾರತದ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಇಂಗ್ಲೆಂಡ್ ತಂಡದಲ್ಲಿ ಜೇಕಬ್ ಬೆಥೆಲ್ ಸ್ಥಾನ ಪಡೆದುಕೊಂಡಿದ್ದು ಭಾರತದಲ್ಲಿ ಮೊದಲ ಬಾರಿ ಆಡಲು ಸಜ್ಜಾಗಿದ್ದಾರೆ. ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಕೂಡ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗಿರುವುದು ಆತನ ಪ್ರತಿಭೆಗೆ ಸಾಕ್ಷಿ.
ಐಪಿಎಲ್‌ನಲ್ಲಿ ಕೂಡ ಜೇಕಬ್ ಬೆಥೆಲ್ ಆರ್ ಸಿಬಿ ತಂಡಕ್ಕಾಗಿ ಇದೇ ರೀತಿ ಉತ್ತಮ ಪ್ರದರ್ಶನ ನೀಡಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಜೇಕಬ್ ಬೆಥೆಲ್‌ರ ಸಾಮರ್ಥ್ಯ ಗುರುತಿಸಿ ಖರೀದಿ ಮಾಡಿದ ಆರ್ ಸಿಬಿ ಫ್ರಾಂಚೈಸಿಯನ್ನು ಕೂಡ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.












Click it and Unblock the Notifications