RCB vs SRH: ರಜತ್ ಪಾಟಿದಾರ್, ಫಿಲ್ ಸಾಲ್ಟ್ ಫಿಟ್ನೆಸ್ ಬಗ್ಗೆ ಮಹತ್ವದ ಮಾಹಿತಿ ಕೊಟ್ಟ ಕೋಚ್
ಐಪಿಎಲ್ 2025ರ ಆವೃತ್ತಿಯಲ್ಲಿ ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಂಡಿರುವ ಆರ್ ಸಿಬಿ ಈಗ ಮೊದಲ ಎರಡು ಸ್ಥಾನಗಳಲ್ಲಿ ಒಂದು ಸ್ಥಾನ ಪಡೆಯುವ ವಿಶ್ವಾಸದಲ್ಲಿದೆ. ಶುಕ್ರವಾರ ನಡೆಯುವ ಪಂದ್ಯದಲ್ಲಿ ಆರ್ ಸಿಬಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಐಪಿಎಲ್ ಪಂದ್ಯಾವಳಿ ಒಂದು ವಾರ ಸ್ಥಗಿತಗೊಂಡಿದ್ದು ಆರ್ ಸಿಬಿಗೆ ಒಂದು ರೀತಿ ವರದಾನವಾಗಿದೆ. ಗಾಯಗೊಂಡಿದ್ದ ಫಿಲ್ ಸಾಲ್ಟ್, ರಜತ್ ಪಟಿದಾರ್, ಕೃನಾಲ್ ಪಾಂಡ್ಯ ಅವರಿಗೆ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಸಿಕ್ಕಂತಾಗಿದೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಫಿಲ್ ಸಾಲ್ಟ್, ರಜತ್ ಪಟಿದಾರ್ ಆಡುತ್ತಾರಾ ಎನ್ನುವ ಪ್ರಶ್ನೆಗೆ ಕೋಚ್ ಆಂಡಿ ಫ್ಲವರ್ ಉತ್ತರ ಕೊಟ್ಟಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ತವರಿನ ಪಂದ್ಯದ ಸಮಯದಲ್ಲಿ ಪಾಟಿದಾರ್ ಬೆರಳಿಗೆ ಗಾಯವಾಗಿತ್ತು. ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಅವರ ಬದಲಾಗಿ ಜಿತೇಶ್ ಶರ್ಮಾ ನಾಯಕತ್ವ ವಹಿಸಲು ಸಜ್ಜಾಗಿದ್ದರು. ಆದರೆ ಭಾರತ ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಪಂದ್ಯಾವಳಿಯನ್ನು ಒಂದು ವಾರ ಸ್ಥಗಿತಗೊಳಿಸಲಾಗಿತ್ತು.

ಒಂದು ವಾರ ಐಪಿಎಲ್ ಸ್ಥಗಿತಗೊಂಡ ಬಳಿಕ ಪಂದ್ಯಾವಳಿ ಆರಂಭವಾದರೂ ಆರ್ ಸಿಬಿ ಕೆಕೆಆರ್ ನಡುವಿನ ಪಂದ್ಯ ಮಳೆಯಿಂದ ರದ್ದಾಗಿತ್ತು. ಇದರಿಂದ ಆಟಗಾರರಿಗೆ ಗಾಯದಿಂದ ಚೇತರಿಸಿಕೊಳ್ಳಲು ಮತ್ತಷ್ಟು ಸಮಯ ಸಿಕ್ಕಿತು. ಈಗ ಬಹುತೇಕ ಎಲ್ಲಾ ಆಟಗಾರರು ಫಿಟ್ ಆಗಿದ್ದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪ್ರಮುಖ ಆಟಗಾರರು ಕಣಕ್ಕಿಳಿಯಲಿದ್ದಾರೆ.
ಕೋಚ್ ಆಂಡಿ ಫ್ಲವರ್ ಮಾಹಿತಿ
ಆಟಗಾರರ ಫಿಟ್‌ನೆಸ್ ಬಗ್ಗೆ ಮಾತನಾಡಿದ ಕೋಚ್ ಆಂಡಿ ಫ್ಲವರ್, "ನಾವು ಬ್ರೇಕ್ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಇಡೀ ಆವೃತ್ತಿಯಲ್ಲಿ ಆಟಗಾರರು ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ಈಗ ಸ್ವಲ್ಪ ವಿರಾಮ ಸಿಕ್ಕಿರುವುದು ನಮಗೆ ಅನುಕೂಲವಾಗಿದೆ" ಎಂದು ಹೇಳಿದ್ದಾರೆ.
ನಾಯಕ ರಜತ್ ಪಾಟಿದಾರ್ ತಮ್ಮ ಗಾಯಗೊಂಡ ಬೆರಳನ್ನು ರಕ್ಷಿಸಿಕೊಳ್ಳಲು ಸ್ಪ್ಲಿಂಟ್ ಧರಿಸಿದ್ದರು, ಆದರೆ ಮೇ 17 ರಂದು ಬೆಂಗಳೂರಿನಲ್ಲಿ ಮಳೆಯಿಂದಾಗಿ ಆರ್‌ಸಿಬಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ರದ್ದಾದ ಕಾರಣ ಅವರು ಚೇತರಿಸಿಕೊಳ್ಳಲು ಇನ್ನೂ ಕೆಲವು ದಿನ ಸಮಯ ಸಿಕ್ಕಿತು. ರಜತ್ ಪಾಟಿದಾರ್ ಅವರಿಗೆ ವಿಶ್ರಾಂತಿ ಪಡೆಯಲು ಸಾಕಷ್ಟು ಸಮಯ ಸಿಕ್ಕಿತು, ಅವರು ಬ್ಯಾಟಿಂಗ್ ಮಾಡಲು ಫಿಟ್ ಆಗಿದ್ದಾರೆ ಎಂದು ಆಂಡಿ ಫ್ಲವರ್ ಹೇಳಿದ್ದಾರೆ.
ಫಿಲ್ ಸಾಲ್ಟ್ ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಈ ವಿರಾಮ ಅವರಿಗೆ ಮನೆಗೆ ಮರಳಲು ಸ್ವಲ್ಪ ಅವಕಾಶ ನೀಡಿದೆ. ಅವರು ತಮ್ಮ ಬ್ಯಾಟರಿಗಳನ್ನು ರೀಚಾರ್ಜ್ ಮಾಡಿದ್ದಾರೆ ಮತ್ತು ಅವರು ಪೂರ್ಣ ಶಕ್ತಿಯೊಂದಿಗೆ ಮರಳಿದ್ದಾರೆ ಎಂದು ಕೋಚ್ ಹೇಳಿದ್ದಾರೆ. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸಾಲ್ಟ್ ಕಣಕ್ಕಿಳಿಯುವುದು ಖಚಿತವಾಗಿದೆ.












Click it and Unblock the Notifications