Rajat Patidar: ವಿರಾಟ್ ಕೊಹ್ಲಿ ಎಲ್‌ಎಸ್‌ಜಿ ವಿರುದ್ಧ ಆಡುವುದಿಲ್ಲವೇ? ನಾಯಕ ರಜತ್ ಪಾಟಿದಾರ್ ಮಹತ್ವದ ಮಾಹಿತಿ
Rajat Patidar: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರು ಗಾಯದ ಕಾರಣ ಪೀಲ್ಡಿಂಗ್‌ಗೆ ಬರಲಿಲ್ಲ. ಇದು ಬುತೇಕರಲ್ಲಿ ಅವರು ಮುಂದಿ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನುವ ಗೊಂದಲ ಸೃಷ್ಟಿಯಾಗಿತ್ತು. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ರಜತ್ ಪಾಟಿದಾರ್ ಅವರು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಬಗ್ಗೆ ಮಾಹಿತಿ ಮಹತ್ವದ ನೀಡಿದ್ದಾರೆ. ಈ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ರಾಜಸ್ಥಾನ ರಾಯಲ್ಸ್ ವಿರುದ್ಧದ ಸೋಲಿನ ನಂತರ, ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 18 ರನ್‌ಗಳ ಜಯ ಸಾಧಿಸುವ ಮೂಲಕ ಆರ್‌ಸಿಬಿ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಆರ್‌ಸಿಬಿ 240/4 ರನ್ ಕಲೆಹಾಕಿತು.

ಫೀಲ್ಡಿಂಗ್‌ಗೆ ಬಾರದ ವಿರಾಟ್ ಕೊಹ್ಲಿ
ಶೆರ್ಫೇನ್ ರುದರ್‌ಫೋರ್ಡ್ 31 ಎಸೆತಗಳಲ್ಲಿ 9 ಸಿಕ್ಸರ್ ಮತ್ತು 1 ಬೌಂಡರಿ ಸೇರಿ ಅಜೇಯ 71 ರನ್‌ಗಳ ಸ್ಫೋಟಕ ಬ್ಯಾಟಿಂಗ್ ನಡೆಸಿದ ಹೊರತಾಗಿಯೂ, ಮುಂಬೈ ಇಂಡಿಯನ್ಸ್ 222/5 ರನ್‌ಗಳಿಗೆ ಸೀಮಿತಗೊಂಡು 18 ರನ್‌ಗಳ ಸೋಲನ್ನೊಪ್ಪಿಕೊಂಡಿತು. ಗಮನಾರ್ಹ ವಿಷಯವೆಂದರೆ, ವಿರಾಟ್ ಕೊಹ್ಲಿ ಫೀಲ್ಡಿಂಗ್‌ಗೆ ಬರಲಿಲ್ಲ ಮತ್ತು ಮೈದಾನದ ಹೊರಗೆ ಜಾಕೆಟ್ ಧರಿಸಿ ಕುಳಿತಿರುವುದು ಕಂಡುಬಂದಿತು.
ಕೊಹ್ಲಿ ಗಾಯದ ಬಗ್ಗೆ ಪಾಟಿದಾರ್ ಹೇಳಿದ್ದಿಷ್ಟು
ಪಂದ್ಯದ ನಂತರ ವಿರಾಟ್ ಕೊಹ್ಲಿ ಅವರಿಗೆ ಗಾಯದ ವರದಿಗಳ ಬಗ್ಗೆ ಮಾತನಾಡಿದ ಪಾಟಿದಾರ್, "ನನಗೆ ಇನ್ನೂ ಸರಿಯಾಗಿ ತಿಳಿದಿಲ್ಲ, ಆದರೆ ಅವರು ಸದ್ಯಕ್ಕೆ ಆರಾಮವಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ," ಎಂದು ಹೇಳಿದರು. ಈ ಮೂಲಕ ಎಲ್‌ಎಸ್‌ಜಿ ವಿರುದ್ಧ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಗೆಲುವಿನ ಬಗ್ಗೆ ಮಾತನಾಡಿದ ಪಾಟಿದಾರ್, ಬ್ಯಾಟಿಂಗ್ ಕ್ರಮಾಂಕದಲ್ಲಿರುವ ಎಲ್ಲಾ ಆಟಗಾರರಿಗೆ ತಮ್ಮ ಜವಾಬ್ದಾರಿಯ ಬಗ್ಗೆ ಸ್ಪಷ್ಟತೆ ನೀಡಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ಮುಂಬೈನ ಐಕಾನಿಕ್ ವಾಂಖೆಡೆ ಕ್ರೀಡಾಂಗಣದ ವಾತಾವರಣ ಮತ್ತು ಅಲ್ಲಿನ ಅಭಿಮಾನಿಗಳ ಸಂಭ್ರಮದ ಬಗ್ಗೆಯೂ ಅವರು ಮಾತನಾಡಿದರು.
ವಾಂಖೆಡೆ ಬಗ್ಗೆ ಪಾಟಿದಾರ್ ಹೇಳಿದ್ದೇನು?
"ನಾವು ಯಾವಾಗ ಮುಂಬೈಗೆ, ಅದರಲ್ಲೂ ವಿಶೇಷವಾಗಿ ಈ ಮೈದಾನಕ್ಕೆ ಬಂದಾಗ ಅಲ್ಲಿನ ವಾತಾವರಣ, ಅಭಿಮಾನಿಗಳು ಮತ್ತು ಅವರ ಸಮ್ಮುಖದಲ್ಲಿ ಕಿಕ್ಕಿರಿದು ತುಂಬಿದ ಕ್ರೀಡಾಂಗಣದಲ್ಲಿ ಆಡುವುದು ಒಂದು ವಿಭಿನ್ನ ಅನುಭವ ನೀಡುತ್ತದೆ. ನಮ್ಮ ತಂಡದಲ್ಲಿ ಪ್ರತಿಯೊಬ್ಬ ಆಟಗಾರನಿಗೂ ಅವರ ಪಾತ್ರದ ಬಗ್ಗೆ ಹೆಚ್ಚಿನ ಸ್ಪಷ್ಟತೆ ಇತ್ತು. ವಿರಾಟ್ ಭಾಯ್ ಮತ್ತು ಸಾಲ್ಟ್ ಇನ್ನಿಂಗ್ಸ್ ಆರಂಭಿಸಿದ ರೀತಿ ನಮ್ಮನ್ನು ಉತ್ತಮ ಸ್ಥಿತಿಯಲ್ಲಿರಿಸಿತು. ನಂತರ ನಾನು ಮತ್ತು ಟಿಮ್ ಡೇವಿಡ್ ನೀಡಿದ ಉಪಯುಕ್ತ ಕೊಡುಗೆಯೂ ಸೇರಿದಂತೆ, ಇದು ಸಂಪೂರ್ಣವಾಗಿ ತಂಡದ ಸಾಮೂಹಿಕ ಪ್ರಯತ್ನವಾಗಿತ್ತು," ಎಂದು ಹೇಳಿದರು.
'ವೇಗಿಗಳ ವಿರುದ್ಧ ಬ್ಯಾಟಿಂಗ್ ಆಡುವುದು ತುಂಬಾ ಇಷ್ಟ'
"ನನಗೆ ಸ್ಪಿನ್ ಎದುರಿಸುವುದೆಂದರೆ ಇಷ್ಟ ಎಂದು ಜನರು ಹೇಳುತ್ತಿರುತ್ತಾರೆ. ಆದರೆ ಯಾರಾದರೂ ನನ್ನನ್ನು ಕೇಳಿದರೆ, ನನಗೆ ವೇಗದ ಬೌಲಿಂಗ್ ಎದುರಿಸುವುದೆಂದರೆ ಹೆಚ್ಚು ಇಷ್ಟ. ಅದರಲ್ಲೂ ಈ ಮೈದಾನದಲ್ಲಿ ವೇಗದ ಬೌಲರ್‌ಗಳನ್ನು ಎದುರಿಸುವುದು ತುಂಬಾ ಸುಲಭವಾಗಿದೆ. ಹಾಗಾಗಿ, ಫಾಸ್ಟ್ ಬೌಲಿಂಗ್ ಎದುರಿಸುವುದನ್ನು ನಾನು ಹೆಚ್ಚು ಆನಂದಿಸುತ್ತೇನೆ," ಎಂದು ನಾಯಕ ರಜತ್ ಪಾಟಿದಾರ್ ಅವರು ಹೇಳಿದರು.
ಈವರೆಗೂ ಸ್ಪಿನ್ ವಿರುದ್ಧ ಪಾಟಿದಾರ್ 59 ಎಸೆತಗಳನ್ನು ಎದುರಿಸಿ, 218.94 ರ ಸ್ಟ್ರೈಕ್ ರೇಟ್‌ನಲ್ಲಿ 9 ಬೌಂಡರಿ ಮತ್ತು 11 ಸಿಕ್ಸರ್ ಒಳಗೊಂಡಂತೆ 129 ರನ್ ಗಳಿಸಿದ್ದಾರೆ ಹಾಗೂ ಎರಡು ಬಾರಿ ಔಟ್ ಆಗಿದ್ದಾರೆ. ಇನ್ನು ವೇಗದ ಬೌಲಿಂಗ್ ವಿರುದ್ಧ 32 ಎಸೆತಗಳಲ್ಲಿ 206.25 ರ ಸ್ಟ್ರೈಕ್ ರೇಟ್‌ನಲ್ಲಿ 2 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಿಂದ 66 ರನ್ ಗಳಿಸಿದ್ದು, ಕೇವಲ ಒಂದು ಬಾರಿ ಮಾತ್ರ ವಿಕೆಟ್ ಒಪ್ಪಿಸಿದ್ದಾರೆ. ಒಟ್ಟಿನಲ್ಲಿ ರಜತ್ ಪಾಟಿದಾರ್ ನೀಡಿರುವ ಮಾಹಿತಿ ಪ್ರಕಾರ, ಇಂದು ತವರು ಮೈದಾನ ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ನಡೆಯುವ ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಆಡಲಿದ್ದು, ರನ್ ಮಳೆ ಸುರಿಸಲು ಸಜ್ಜಾಗಿದ್ದಾರೆ.












Click it and Unblock the Notifications