RCB: ಟೀಕಾಕಾರರ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ, ಆರ್‌ಸಿಬಿ ಗೆಲ್ಲಿಸಿದ ರಸಿಖ್ ದಾರ್ ಸಲಾಂ
RCB IPL 2026: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ (ಏಪ್ರಿಲ್ 15) ನಡೆದ ಐಪಿಎಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಲ್‌ಎಸ್‌ಜಿ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ರಸಿಖ್ ದಾರ್ ಸಲಾಂ ಮಾಡಿದ ಮಾರಕ ಬೌಲಿಂಗ್ ದಾಳಿಯು ಆರ್‌ಸಿಬಿ ಗೆಲುವಿಗೆ ಪ್ರಮುಖ ಪಾತ್ರವಹಿಸಿತು.
ವೇಗಿ ರಸಿಖ್ ಸಲಾಮ್ ದಾರ್ ಅವರು 4 ಓವರ್ ಬೌಲಿಂಗ್ ಎಸೆದು ಕೇವಲ 24 ರನ್ ನೀಡಿ, 4 ವಿಕೆಟ್ ಕಬಳಿಸುವ ಮೂಲಕ ಎಲ್‌ಎಸ್‌ಜಿ ತಂಡವನ್ನು ಕಡಿಮೆ ರನ್‌ಗೆ ಕಟ್ಟಿಹಾಕುಲ್ಲಿ ಪ್ರಮುಖ ಪಾತ್ರವಹಿಸಿದರು. ಇವರ ಉತ್ತಮ ಬೌಲಿಂಗ್ ಪ್ರದರ್ಶನದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

ಅಂಕಪಟ್ಟಿಯಲ್ಲಿ ಆರ್‌ಸಿಬಿಗೆ ಅಗ್ರಸ್ಥಾನ
ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ರಿಷಭ್ ಪಂತ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ನಿಗದಿತ 20 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 146 ರನ್‌ಗಳನಷ್ಟೇ ಕಲೆಹಾಕಿತು. ಈ ಸಾಧಾರಣ ಗುರಿಯನ್ನು ಆರ್‌ಸಿಬಿಯು 15.1 ಓವರ್‌ಗಳಲ್ಲಿ ತಲುಪಿ ಭರ್ಜರಿ ಜಯ ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ಎಲ್‌ಎಸ್‌ಜಿ 146 ರನ್‌ಗಳಿಗೆ ಆಲೌಟ್
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಎಲ್ಲಿಯೂ ಉತ್ತಮ ಲಯ ಕಂಡುಕೊಳ್ಳಲಿಲ್ಲ. ಮಿಚೆಲ್ ಮಾರ್ಷ್ 40, ಆಯುಷ್ ಬದೋನಿ 38 ರನ್‌ಗಳನ್ನು ಮತ್ತು ಮಕುಲ್ ಚೌಧರಿ 39 ತಂಡದ ಪರ ಗರಿಷ್ಠ ರನ್ ಸಿಡಿಸಿದರು. ಇವರನ್ನ ಹೊರತುಪಡಿಸಿ ಉಳಿದ ಬ್ಯಾಟರ್‌ಗಳಿಂದ ಉತ್ತಮ ಪ್ರದರ್ಶನ ಕಂಡುಬರಲಿಲ್ಲ. ಅಂತಿಮವಾಗಿ ಲಕ್ನೋ 146 ರನ್‌ಗಳಿಗೆ ಆಲೌಟ್ ಆಯಿತು. ಇದು ಈ ಸೀಸನ್‌ನಲ್ಲಿ ಆ ತಂಡದ ಅತ್ಯಂತ ಕಡಿಮೆ ಮೊತ್ತವಾಗಿದೆ.
ಎಲ್‌ಎಸ್‌ಜಿ ವಿರುದ್ಧ ಮಿಂಚಿದ ಆರ್‌ಸಿಬಿ ಬೌಲರ್ಸ್
ಆರ್‌ಸಿಬಿ ಪರ ಬೌಲರ್‌ಗಳು ಎದುರಾಳಿ ಎಲ್‌ಎಸ್‌ಜಿ ಬ್ಯಾಟರ್‌ಗಳ ವಿರುದ್ಧ ಉತ್ತಮ ಬೌಲಿಂಗ್ ದಾಳಿ ನಡೆಸಿ ಕಡಿಮೆ ರನ್‌ಗಳಿಗೆ ಕಟ್ಟಿಹಾಕಿದರು. ರಸಿಖ್ ದಾರ್ ಸಲಾಂ 4 ಪ್ರಮುಖ ವಿಕೆಟ್ ಪಡೆದು ಮಿಂಚಿದರು. ಭುವನೇಶ್ವರ್ ಕುಮಾರ್ (3/27) ಮತ್ತು ಕೃನಾಲ್ ಪಾಂಡ್ಯ (2/38) ವಿಕೆಟ್ ಪಡೆದರೆ, ಜೋಶ್ ಹ್ಯಾಜಲ್‌ವುಡ್ ಒಂದು ವಿಕೆಟ್ ಪಡೆದರು.
ಟೀಕಾಕಾರರ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ
ಎಲ್‌ಎಸ್‌ಜಿ ನೀಡಿದ ಸುಲಭದ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಪರ ಆರಂಭಿಕ ಆಟಗಾರ ವಿರಾಟ್ ಕೊಹ್ಲಿ 49 ರನ್‌ಗಳ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಆಧಾರವಾದರು. ನಾಯಕ ರಜತ್ ಪಾಟಿದಾರ್ 27, ಜಿತೇಶ್ ಶರ್ಮಾ 23 ಬಿರುಸಿನ ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ಕೊನೆಯಲ್ಲಿ ಟಿಮ್ ಡೆವಿಡ್ ಅಜೇಯ 14, ರೊಮಾರಿಯೋ ಶೆಫರ್ಡ್ ಅಜೇಯ 14 ರನ್ ಗಳಿಸಿವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಮತ್ತೊಂದೆಡೆ, ವಿರಾಟ್ ಕೊಹ್ಲಿ ಅವರು ತಮ್ಮ ಸ್ವಾರ್ಥಕ್ಕಾಗಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಆಡುತ್ತಿದ್ದಾರೆ ಎನ್ನುವ ಕೆಲವರ ಟೀಕೆಗಳಿಗೆ ತಮ್ಮ ಬ್ಯಾಟ್ ಮೂಲಕ ಉತ್ತರ ನೀಡಿದ್ದಾರೆ. ಇಂದಿನ ಪಂದ್ಯದಲ್ಲಿ ಕಾಲು ನೋವಿನ ನಡುವೆಯೂ ಉತ್ತಮ ಆರಂಭ ಒದಗಿಸಿಕೊಟ್ಟು ಗಮನ ಸೆಳೆದರು.












Click it and Unblock the Notifications