Dinesh Karthik: ಟಿ20 ವಿಶ್ವಕಪ್‌ನಲ್ಲಿ ಆಡಲು ಸಿದ್ಧ ಎಂದ ದಿನೇಶ್ ಕಾರ್ತಿಕ್
ನಾನು ಟಿ20 ವಿಶ್ವಕಪ್‌ನಲ್ಲಿ ಆಡಲು ಸಿದ್ಧವಾಗಿದ್ದೇನೆ ಎಂದು ಆರ್ ಸಿಬಿ ಬ್ಯಾಟರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಐಪಿಎಲ್ 2024ರಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ದಿನೇಶ್ ಕಾರ್ತಿಕ್ ಮತ್ತೊಮ್ಮೆ ಭಾರತ ತಂಡಕ್ಕಾಗಿ ಆಡುವ ಆಸೆ ಇದೆ ಎಂದು ಹೇಳಿದ್ದಾರೆ.
ಜೂನ್ 1 ರಂದು ಟಿ20 ವಿಶ್ವಕಪ್ ಆರಂಭವಾಗುವ ವೇಳೆಗೆ 39 ವರ್ಷಕ್ಕೆ ಕಾಲಿಡಲಿರುವ ದಿನೇಶ್ ಕಾರ್ತಿಕ್ ಸದ್ಯ ಐಪಿಎಲ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಭಾರತಕ್ಕಾಗಿ ಮತ್ತೆ ಆಡುವ ಕನಸಿದೆ, ತಾನಿನ್ನೂ ಭರವಸೆ ಕಳೆದುಕೊಂಡಿಲ್ಲ ಎಂದು ಹೇಳಿದ್ದಾರೆ.

ಏಪ್ರಿಲ್ 21, ಭಾನುವಾರದಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವು ಬಯಕೆ ವ್ಯಕ್ತಪಡಿಸಿದ್ದಾರೆ. "ನನ್ನ ಜೀವನದಲ್ಲಿ ಈ ಹಂತದಲ್ಲಿ ಭಾರತವನ್ನು ಪ್ರತಿನಿಧಿಸುವುದು ದೊಡ್ಡ ಭಾವನೆಯಾಗಿದೆ. ನಾನು ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ಬಿಟ್ಟರೆ ನನ್ನ ಜೀವನದಲ್ಲಿ ದೊಡ್ಡದೇನೂ ಇಲ್ಲ" ಎಂದು ಡಿಕೆ ಹೇಳಿದ್ದಾರೆ.
ಆಯ್ಕೆದಾರರ ತೀರ್ಮಾನ ಗೌರವಿಸುತ್ತೇನೆ
ಭಾರತ ತಂಡದ ಆಯ್ಕೆದಾರರ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ನಾನು ಭಾರತ ತಂಡಕ್ಕಾಗಿ ಆಡಲು, ಮತ್ತೆ ಬ್ಲೂ ಜೆರ್ಸಿಯಲ್ಲಿ ಆಡಲು 100 ಪ್ರತಿಶತ ಸಿದ್ಧವಾಗಿದ್ದೇನೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
"ವಿಶ್ವಕಪ್‌ಗೆ ಅತ್ಯುತ್ತಮ ಭಾರತೀಯ ತಂಡ ಯಾವುದು ಎಂದು ನಿರ್ಧರಿಸಲು ಮೂರು ಅತ್ಯಂತ ಸ್ಥಿರ, ಪ್ರಾಮಾಣಿಕ ವ್ಯಕ್ತಿಗಳಾದ ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ ಮತ್ತು ಅಜಿತ್ ಅಗರ್ಕರ್ ಇದ್ದಾರೆ. ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಆದರೆ ನಾನು 100 ಪ್ರತಿಶತ ಸಿದ್ಧನಿದ್ದೇನೆ ಮತ್ತು ಭಾರತ ತಂಡದಲ್ಲಿರಲು ಎಲ್ಲ ಪ್ರಯತ್ನ ಮಾಡುತ್ತೇನೆ" ಎಂದು ಹೇಳಿದರು.
ಐಪಿಎಲ್‌ನಲ್ಲಿ ಡಿಕೆ ಮಿಂಚು
ಐಪಿಎಲ್ 2024ರ ಆವೃತ್ತಿಯಲ್ಲಿ7 ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್ 75.33 ಸರಾಸರಿಯಲ್ಲಿ 226 ರನ್ ಗಳಿಸಿದ್ದಾರೆ. ಎರಡು ಅರ್ಧಶತಕಗಳನ್ನು ಸಿಡಿಸಿರುವ ಅವರು, 205.45 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಅಪಾರ ಅನುಭವ ಹೊಂದಿರುವ ದಿನೇಶ್ ಕಾರ್ತಿಕ್ ಯಾವುದೇ ತಂಡಕ್ಕೆ ಅತ್ಯುತ್ತಮ ಆಯ್ಕೆ ಆಗಬಲ್ಲರು.
2022ರ ಐಪಿಎಲ್‌ನಲ್ಲಿ ಕೂಡ ಅತ್ಯುತ್ತಮ ಪ್ರದರ್ಶನ ನೀಡಿದ್ದ ದಿನೇಶ್ ಕಾರ್ತಿಕ್ ಬಳಿಕ ಭಾರತ ಟಿ20 ತಂಡಕ್ಕೆ ಆಯ್ಕೆಯಾಗಿದ್ದರು. ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅವರು, ಟಿ20 ವಿಶ್ವಕಪ್‌ನಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಈ ಬಾರಿ ವೆಸ್ಟ್ ಇಂಡೀಸ್ ಮತ್ತು ಯುಎಸ್‌ನಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯಲಿದ್ದು, ಡಿಕೆ ಆಯ್ಕೆಯಾದರೂ ಅಚ್ಚರಿಯಿಲ್ಲ.












Click it and Unblock the Notifications