ಅಮ್ಮನ ಕಿವಿಮಾತು ಕೇಳಿ ಚೆಸ್ ಮಾಸ್ಟರ್ ಪ್ರಜ್ಞಾನಂದ ಗೆದ್ದಿದ್ದು 1,00,000 ಅಮೆರಿಕನ್ ಡಾಲರ್ಸ್
R. Praggnanandhaa: ನಾರ್ವೆ ಚೆಸ್ 2026 ಟೂರ್ನಿಯಲ್ಲಿ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಅವರು ಹೊಸ ದಾಖಲೆ ಸೃಷ್ಟಿಸಿದ್ದಾರೆ. ಬಳಿಕ ಅವರು ಈ ಗೆಲುವಿಗೂ ಮುನ್ನ ತಮ್ಮ ತಾಯಿ ನೀಡಿದ ಮಹತ್ವದ ಕಿವಿಮಾತನ್ನು ರಿವೀಲ್ ಮಾಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಚೆನ್ನೈನ 20 ವರ್ಷದ ಈ ಯುವ ತಾರೆ ಓಸ್ಲೋದಲ್ಲಿ ನಡೆದ ಚೆನ್ ಟೂರ್ನಿಯಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡುವ ಮೂಲಕ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಅಂತಿಮ ಮತ್ತು ನಿರ್ಣಾಯಕ ಪಂದ್ಯಕ್ಕೆ ಕಣಕ್ಕಿಳಿಯುವ ಮುನ್ನ ಪ್ರಜ್ಞಾನಂದ ಅವರು ತಮ್ಮ ಯಶಸ್ಸಿನ ಹಿಂದಿನ ಶಕ್ತಿಯಾಗಿರುವ ತಾಯಿ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

1,00,000 ಅಮೆರಿಕನ್ ಡಾಲರ್ ನಗದು ಬಹುಮಾನ
ಕ್ಲಾಸಿಕಲ್ ಈವೆಂಟ್‌ನ 10ನೇ ಹಾಗೂ ಕೊನೆಯ ಸುತ್ತಿನಲ್ಲಿ ಜರ್ಮನಿಯ ದಿಗ್ಗಜ ಆಟಗಾರ ವಿನ್ಸೆಂಟ್ ಕೀಮರ್ ಅವರನ್ನು ಸೋಲಿಸಿ ಪ್ರಜ್ಞಾನಂದ ಅವರು ಚಾಂಪಿಯನ್ ಆದರು. ಈ ಐತಿಹಾಸಿಕ ಪ್ರಶಸ್ತಿ ಗೆಲುವಿನೊಂದಿಗೆ ಅವರು ಬರೋಬ್ಬರಿ 1,00,000 ಅಮೆರಿಕನ್ ಡಾಲರ್ (ಸುಮಾರು 95,00,000 ರಿಂದ 96,00,000 ಲಕ್ಷ ರೂಪಾಯಿ) ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡರು. ಈ ಐತಿಹಾಸಿಕ ಗೆಲುವಿನ ಹಾದಿಯಲ್ಲಿ ಅವರು ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಮತ್ತು ಭಾರತದವರೇ ಆದ ಡಿ. ಗುಕೇಶ್ ವಿರುದ್ಧವೂ ಅದ್ಭುತ ಜಯ ದಾಖಲಿಸಿದ್ದರು.
ದಿಗ್ಗಜರೆದುರು ಗೆದ್ದ ಆರ್.ಪ್ರಜ್ಞಾನಂದ
ಈ ಟೂರ್ನಿಯಲ್ಲಿ ಪ್ರಜ್ಞಾನಂದ ಅವರ ಯಶಸ್ಸಿನ ಹಾದಿ ಸುಲಭವಾಗಿರಲಿಲ್ಲ. ಆರಂಭದಲ್ಲಿ ಅಮೆರಿಕದ ವೆಸ್ಲಿ ಸೊ ವಿರುದ್ಧ ಗೆದ್ದು ಶುಭಾರಂಭ ಮಾಡಿದರೂ, ಆ ಬಳಿಕ ಫ್ರಾನ್ಸ್‌ನ ಅಲಿರೇಝಾ ಫೀರೋಝ್‌ಜಾ ಮತ್ತು ಡಿ. ಗುಕೇಶ್ ವಿರುದ್ಧ ಸತತ ಸೋಲು ಕಂಡು ಅಂಕಪಟ್ಟಿಯಲ್ಲಿ ಅತ್ಯಂತ ಕೊನೆಯ ಸ್ಥಾನಕ್ಕೆ ಕುಸಿದಿದ್ದರು. ಆದರೆ ತೀವ್ರ ಹಿನ್ನಡೆಯ ನಡುವೆಯೂ ತಾಳ್ಮೆ ಕಳದುಕೊಳ್ಳದ ಅವರು ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿದರು.
ತಾಯಿ ಬಗ್ಗೆ ಆರ್.ಪ್ರಜ್ಞಾನಂದ ಹೇಳಿದ್ದೇನು?
ಅಂತಿಮ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ಅವರನ್ನು ಮಣಿಸಿದ ನಂತರ ಮಾತನಾಡಿದ ಆರ್.ಪ್ರಜ್ಞಾನಂದ ಅವರು, ಜೂನ್ 1ರಂದೇ ತಮ್ಮ ತಾಯಿ ನಾಗಲಕ್ಷ್ಮಿ ಅವರು ಈ ಗೆಲುವಿನ ಬಗ್ಗೆ ಒಂದು ಅದ್ಭುತವಾದ ಭವಿಷ್ಯ ನುಡಿದಿದ್ದರು ಎಂಬ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಭಾರೀ ವೈರಲ್ ಆಗಿದೆ.
"ನಾನು ಜೂನ್ 1ರಂದು ಅಲಿರೇಝಾ ವಿರುದ್ಧದ ಪಂದ್ಯಕ್ಕೂ ಮುನ್ನ ನನ್ನ ತಾಯಿಯ ಜೊತೆ ಮಾತನಾಡುತ್ತಿದ್ದೆ. ಆಗ ಅವರು ಇದು ಹೊಸ ತಿಂಗಳು, ನೀನು ಖಂಡಿತ ಚೆನ್ನಾಗಿ ಆಡುತ್ತೀಯಾ ಎಂದು ಧೈರ್ಯ ತುಂಬಿದ್ದರು. ಆಗ ನಾನು ಸರಿ, ಅಮ್ಮಂದಿರು ಯಾವಾಗಲೂ ಹೀಗೆ ಸಮಾಧಾನದ ಮಾತುಗಳನ್ನು ಹೇಳುತ್ತಿರುತ್ತಾರೆ ಎಂದು ಸುಮ್ಮನಾಗಿದ್ದೆ. ಆದರೆ ನಂತರ ನಾನು ಸತತವಾಗಿ ನಾಲ್ಕು ಪಂದ್ಯಗಳನ್ನು ಗೆದ್ದೆ. ಬಹುಶಃ ನನ್ನ ತಾಯಿಗೆ ಮುಂದೇನು ನಡೆಯಲಿದೆ ಎಂಬುದು ಮೊದಲೇ ಗೊತ್ತಿತ್ತೇನೋ ಅನಿಸುತ್ತದೆ,' ಎಂದು ಪ್ರಜ್ಞಾನಂದ ಅವರು 'ಚೆಸ್24' ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.
'ಹೇಗೋ ಎಲ್ಲವೂ ನನ್ನ ಪರವಾಗಿಯೇ ನಡೆಯಿತು. ಅಲ್ಲದೆ ಹೆಚ್ಚು ಶ್ರದ್ಧಯಿಂದ ಆಡಲು ಪ್ರಾರಂಭಿಸಿದೆ ಎಂದು ನನಗನಿಸಿತು. ಇದು ಯಾವಾಗಲೂ ಒಳ್ಳೆಯ ವಿಷಯವೇ. ನಾನು ಮೊದಲಿಗಿಂತ ಸ್ವಲ್ಪ ವೇಗವಾಗಿ ಆಡಬೇಕೆಂದು ನಿರ್ಧರಿಸಿದೆ. ಇದರಿಂದಾಗಿ ಪ್ರತಿ ಪಂದ್ಯದಲ್ಲೂ ಹೆಚ್ಚು ಸಮಯ ಸಿಗುತ್ತಿತ್ತು. ಹೀಗಾಗಿ ಈ ನಿರ್ಧಾರ ತುಂಬಾ ಸಹಾಯ ಮಾಡಿತು ಎಂದು ಭಾವಿಸುತ್ತೇನೆ,' ಅಂತಾ ಹೇಳಿದರು.
ಅಂತಿಮ ಪಂದ್ಯದಲ್ಲಿ ಬಿಳಿ ದಾಳಗಳೊಂದಿಗೆ ಆಡುತ್ತಿದ್ದ ಪ್ರಜ್ಞಾನಂದ, ಪಂದ್ಯದ ಮಧ್ಯಭಾಗದಲ್ಲಿ ಜರ್ಮನಿಯ ಕೀಮರ್ ಮಾಡಿದ ಸಣ್ಣ ತಪ್ಪುಗಳನ್ನು ತಮಗೆ ಪೂರಕವಾಗಿ ಬಳಸಿಕೊಂಡರು. ಅಂತಿಮವಾಗಿ 45ನೇ ನಡೆಯಲ್ಲಿ ಕೀಮರ್ ಅವರ ಕೋಟೆಯನ್ನು ಭೇದಿಸಿ ಪಂದ್ಯವನ್ನು ವಶಪಡಿಸಿಕೊಂಡರು. ಈ ಮೂಲಕ ಟೂರ್ನಿಯಲ್ಲಿ 5 ಗೆಲುವು, 2 ಸೋಲು ಹಾಗೂ 2 ಡ್ರಾ ಒಳಗೊಂಡಂತೆ ಒಟ್ಟು 18 ಅಂಕಗಳೊಂದಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡರು.
'ಪಂದ್ಯದ ಕೆಲವೇ ಕ್ಷಣಗಳಲ್ಲಿ ನಾನು ಗೆಲ್ಲಲಿದ್ದೇನೆ ಎಂಬುದು ಖಚಿತವಾಗಿ ತಿಳಿದಿತ್ತು. ಎಲ್ಲೂ ತಪ್ಪು ಮಾಡಬಾರದು ಎಂದು ಜಾಗರೂಕತೆಯಿಂದ ಇರಲು ಬಯಸಿದ್ದೆ. ಏಕೆಂದರೆ ಒಮ್ಮೆ ನಾನು 'ನೈಟ್ ಇ6' ನಡೆ ಇಟ್ಟ ಬಳಿಕ, ಮುಂದೆ ಏನೂ ಯೋಚಿಸಲು ಸಾಧ್ಯವಾಗುತ್ತಿರಲಿಲ್ಲ. ನಾನು ಕೇವಲ ದಾಳಗಳನ್ನು ಮುಂದೆ ನಡೆಸುತ್ತಿದ್ದೆ. ಆದರೂ ನನ್ನಲ್ಲಿ ಎಲ್ಲೋ ಒಂದು ಕಡೆ ಆತಂಕವಿತ್ತು. ಯಾವಾಗ ಅವರು ಪಂದ್ಯವನ್ನು ಕೈಬಿಟ್ಟು ಸೋಲೊಪ್ಪಿಕೊಂಡರೋ ಆಗಷ್ಟೇ ನಿರಾಳವಾದೆ,' ಎಂದು ಪ್ರಜ್ಞಾನಂದ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.












Click it and Unblock the Notifications