Ind vs Pak: ಶೀಘ್ರದಲ್ಲೇ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ?
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಕ್ರಿಕೆಟ್ ಜಗತ್ತಿನ ರೋಮಾಂಚನಕಾರಿ ಮುಖಾಮುಖಿಗಳಲ್ಲಿ ಒಂದಾಗಿದೆ. ಎರಡೂ ತಂಡಗಳು ಮುಖಾಮುಖಿಯಾದಾಗ ಕೋಟ್ಯಂತರ ಜನ ಪಂದ್ಯವನ್ನು ವೀಕ್ಷಿಸುತ್ತಾರೆ. ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಸಾಂಪ್ರದಾಯಿಕ ಎದುರಾಳಿಗಳು ಪಂದ್ಯಗಳನ್ನು ಆಡುತ್ತಿದ್ದು, ಒಂದು ದಶಕದಿಂದ ದ್ವಿಪಕ್ಷೀಯ ಸರಣಿಯಲ್ಲಿ ಆಡಿಲ್ಲ.
2012-2013ರಲ್ಲಿ ಭಾರತ ಪಾಕಿಸ್ತಾನ ಸರಣಿಯನ್ನು ಆಡಿದ್ದವು. ಅದಾದ ಬಳಿಕ ಎರಡೂ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದಿಲ್ಲ. ದ್ವಿಪಕ್ಷೀಯ ಸರಣಿಯ ಅನುಪಸ್ಥಿತಿಯಿಂದ ಕ್ರಿಕೆಟ್ ಅಭಿಮಾನಿಗಳು ಹೊಸ ಘರ್ಷಣೆಯನ್ನು ಕುತೂಹಲದಿಂದ ನಿರೀಕ್ಷಿಸುತ್ತಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಡಳಿತ ಸಮಿತಿ ಅಧ್ಯಕ್ಷ ಝಾಕಾ ಅಶ್ರಫ್, ಭಾರತ-ಪಾಕಿಸ್ತಾನ ಸರಣಿಗೆ ಸಂಬಂಧಿಸಿದಂತೆ, ಎರಡೂ ಮಂಡಳಿಗಳು ಪರಸ್ಪರ ದ್ವಿಪಕ್ಷೀಯ ಸರಣಿ ಆಡಲು ಸಿದ್ಧವಾಗಿವೆ. ಆದರೆ ಸರ್ಕಾರ ಅನುಮತಿ ನೀಡಬೇಕು ಎಂದು ಹೇಳಿರುವುದಾಗಿ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕೃತ ವೆಬ್‌ಸೈಟ್ ವರದಿ ಮಾಡಿದೆ.
ಪ್ರತಿಕ್ರಿಯೆ ನೀಡದ ಬಿಸಿಸಿಐ
ಈ ಹೇಳಿಕೆಗೆ ಬಿಸಿಸಿಐನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದಾಗ್ಯೂ, ಸೆಪ್ಟೆಂಬರ್ 2023 ರಲ್ಲಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು "ಭಯೋತ್ಪಾದನೆ" ಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಿಲ್ಲಿಸುವವರೆಗೆ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿಯನ್ನು ಆಡದಿರಲು ಬಿಸಿಸಿಐ ನಿರ್ಧರಿಸಿದೆ ಎಂದು ಘೋಷಿಸಿದ್ದರು.
ಭಯೋತ್ಪಾದನೆ, ಗಡಿಯಾಚೆಗಿನ ದಾಳಿ ಮತ್ತು ಒಳನುಸುಳುವಿಕೆಯನ್ನು ಕೊನೆಗೊಳಿಸುವವರೆಗೆ ನಾವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಪಂದ್ಯಗಳನ್ನು ಆಡುವುದಿಲ್ಲ ಎಂದು ಬಿಸಿಸಿಐ ಬಹಳ ಹಿಂದೆಯೇ ನಿರ್ಧರಿಸಿತ್ತು ಎಂದು ಠಾಕೂರ್ ಒತ್ತಿ ಹೇಳಿದರು. ದೇಶದ ಮತ್ತು ಸಾರ್ವಜನಿಕರ ಭಾವನೆಗಳು ಸಹ ಒಂದೇ ಆಗಿವೆ ಎಂದು ನಾನು ಭಾವಿಸುತ್ತೇನೆ ಎಂದಿದ್ದರು.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಮೂವರು ಉನ್ನತ ಭಾರತೀಯ ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ ಘಟನೆಯ ನಂತರ ಈ ಹೇಳಿಕೆಯು ಗಮನಾರ್ಹವಾಗಿದೆ.
ಭಾರತ ಇತ್ತೀಚೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 2023 ರ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಿತು, ಏಳು ವಿಕೆಟ್‌ಗಳಿಂದ ಜಯ ಸಾಧಿಸಿತು. ಉಭಯ ತಂಡಗಳ ನಡುವಿನ ಮುಂಬರುವ ಪಂದ್ಯವು ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ 2024 ರ ಟಿ20 ವಿಶ್ವಕಪ್‌ನಲ್ಲಿ ನಡೆಯಲಿದೆ.
ತಟಸ್ಥ ಸ್ಥಳದಲ್ಲಿ ಎರಡೂ ತಂಡಗಳು ದ್ವಿಪಕ್ಷೀಯ ಸರಣಿ ಆಡುವಂತೆ ಹಲವು ಬಾರಿ ಸಲಹೆಗಳು ಬಂದರು, ಬಿಸಿಸಿಐ ಮಾತ್ರ ಸ್ಪಷ್ಟವಾಗಿ ನಿರಾಕರಿಸಿದೆ. ಆದರೂ ಎರಡೂ ತಂಡಗಳು ದ್ವಿಪಕ್ಷೀಯ ಸರಣಿಯನ್ನು ಆಡಬೇಕು ಎಂದು ಎರಡೂ ತಂಡಗಳ ಅಭಿಮಾನಿಗಳು ಬಯಸುತ್ತಾರೆ.












Click it and Unblock the Notifications