Paris Olympics 2024: ದೀಪಿಕಾ, ಲೊವ್ಲಿನಾಗೆ ಮುನ್ನಡೆ: ಇಲ್ಲಿದೆ ಫಲಿತಾಂಶ
ಭಾರತದ ಹೆಮ್ಮೆಯ ಕ್ರೀಡಾ ಪಟುಗಳು ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಸ್ಥಿರ ಪ್ರದರ್ಶನ ಮುಂದುವರೆಸಿದ್ದಾರೆ. ಆರ್ಚರಿ ಹಾಗೂ ಬಾಕ್ಸಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತೀಯ ಮಹಿಳೆಯರು ಅಬ್ಬರಿಸಿದ್ದಾರೆ. ಇನ್ನು ಟ್ರ್ಯಾಪ್ ಶೂಟಿಂಗ್‌ನಲ್ಲಿ ಭಾರತ ಪದಕ ಗೆಲ್ಲದೇ ಇದ್ದರೂ ಸಹ ಎಲ್ಲರ ಚಿತ್ತ ಕದಿಯುವಲ್ಲಿ ಸಫಲವಾಗಿದೆ.
ಭಾರತದ ಸ್ಟಾರ್ ಬಿಲ್ಲುಗಾರರ್ತಿ ನಾಲ್ಕನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ದೀಪಿಕಾ ಕುಮಾರಿ, ಈ ಬಾರಿ ಪದಕದ ಆಸೆಯನ್ನು ಚಿಗುರಿಸಿದ್ದಾರೆ. ಹಂತ ಹಂತವಾಗಿ ಸ್ಥಿರ ಪ್ರದರ್ಶನವನ್ನು ಮುಂದುವರೆಸಿರುವ ದೀಪಿಕಾ ಪ್ರೀ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಇನ್ನು ದೀಪಿಕಾ ಆಗಸ್ಟ್ 3 ರಂದು ಮೈದಾನ ಪ್ರವೇಶಿಸಲಿದ್ದಾರೆ. ದೀಪಿಕಾ ಕುಮಾರಿ ಮತ್ತೊಮ್ಮೆ ಆರ್ಚರಿ ಕ್ಷೇತ್ರಕ್ಕೆ ಎಂಟ್ರಿ ಕೊಡಲಿದ್ದಾರೆ.

ಪ್ರಿ ಕ್ವಾರ್ಟರ್ ಫೈನಲ್‌ಗೆ
ಭಾರತದ ಅನುಭವಿ ಬಿಲ್ಲುಗಾರ್ತಿ ದೀಪಿಕಾ ಕುಮಾರಿ 64 ರ ಮೊದಲ ಸುತ್ತಿನಲ್ಲಿ ಎಸ್ಟೋನಿಯಾದ ರೀನಾ ಪರ್ನಾಟ್ ಅವರನ್ನು ಶೂಟ್-ಆಫ್‌ನಲ್ಲಿ 6.5 ರಿಂದ ಸೋಲಿಸಿ ಕೊನೆಯ 32 ರೊಳಗೆ ಪ್ರವೇಶಿಸಿದರು. 32 ನೇ ಸುತ್ತಿನಲ್ಲಿ ಅವರು ನೆದರ್ಲೆಂಡ್ಸ್‌ನ ರೋಫೆನ್ ಕ್ವಿಂಟಿ ಅವರ ಕಠಿಣ ಸವಾಲು ಎದುರಿಸಬೇಕಾಯಿತು. ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ದೀಪಿಕಾ 6.2 ಅಂಕ ಗಳಿಸಿ ನೇರವಾಗಿ 16ರ ಘಟ್ಟ ಪ್ರವೇಶಿಸಿದರು.

ಲೊವ್ಲಿನಾ ಕ್ವಾರ್ಟರ್‌ಗೆ
ಲೊವ್ಲಿನಾ ಬೊರ್ಗೊಹೈನ್ ಮಹಿಳೆಯರ 75 ಕೆಜಿ ವಿಭಾಗದ ಬಾಕ್ಸಿಂಗ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು. ಈ ಮೂಲಕ ಅವರು ಮತ್ತೊಂದು ಪದಕದಿಂದ ಒಂದು ಹೆಜ್ಜೆ ಹಿಂದೆ ನಿಂತಿದ್ದಾರೆ. ಅವರು 16 ರ ಸುತ್ತಿನ ಪಂದ್ಯದಲ್ಲಿ ನಾರ್ವೆಯ ಬಾಕ್ಸರ್ ಸುನಿವಾ ಹಾಫ್‌ಸ್ಟಾಡ್ ಅವರನ್ನು 5-0 ಅಂತರದಿಂದ ಏಕಪಕ್ಷೀಯವಾಗಿ ಸೋಲಿಸಿದರು. ಟಾಪ್-8ರ ಸುತ್ತಿನಲ್ಲಿ ಲೊವ್ಲಿನಾ ವಿಶ್ವದ ನಂ-1 ಚೀನಾದ ಲಿ ಕ್ವೀನ್ ಅವರನ್ನು ಎದುರಿಸಲಿದ್ದಾರೆ.

ಶ್ರೀಜಾಗೆ ಮುನ್ನಡೆ
ಇನ್ನು ಟೆಬಲ್ ಟೆನಿಸ್‌ನಲ್ಲಿ ಶ್ರೀಜಾ ಅಕುಲ್ ಮಹಿಳೆಯ ಸಿಂಗಲ್ಸ್ ವಿಭಾಗದಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಮನಿಕಾ ಬಾತ್ರಾ ಈ ಸಾಧನೆ ಮಾಡಿದ್ದರು.
ಮಹಿಳೆಯರ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಭಾರತದ ರಾಜೇಶ್ವರಿ ಕುಮಾರಿ 22ನೇ ಸ್ಥಾನ, ಶ್ರೇಯಸಿ ಸಿಂಗ್ 23ನೇ ಸ್ಥಾನವನ್ನು ಪಡೆದರು.












Click it and Unblock the Notifications