ಐಸಿಸಿ ವಿಶ್ವಕಪ್ ಅಖಾಡದಲ್ಲಿ ಪಾಕಿಸ್ತಾನಕ್ಕೆ ಕೊನೇ ಘಳಿಗೆಯಲ್ಲಿ ಜಾಕ್‌ಪಾಟ್!
ಅಂತೂ ಪಾಕಿಸ್ತಾನಕ್ಕೆ ಇಂದು ಜೀವ ಬಂದಿದ್ದು, ಸಾಲು ಸಾಲು ಸೋಲುಗಳಿಂದ ಮನೆಕಡೆ ಹೆಜ್ಜೆ ಹಾಕಬೇಕಿದ್ದ ಪಾಕಿಸ್ತಾನ ತಂಡಕ್ಕೆ ಬ್ರೇಕ್ ಸಿಕ್ಕಿದೆ. ನ್ಯೂಜಿಲೆಂಡ್ ವಿರುದ್ಧ, ಮಳೆಯ ಕೃಪೆಯಿಂದ ಜಯ ಸಾಧಿಸಿರುವ ಪಾಕಿಸ್ತಾನ ತಂಡದ ಮುಂದಿನ ಪರಿಸ್ಥಿತಿ ಏನು? ಈಗಲೂ ಪಾಕಿಸ್ತಾನ ತಂಡವು ಸೆಮಿಫೈನಲ್‌ಗೆ ಪ್ರವೇಶ ಮಾಡಲು, ಅವಕಾಶ ಇದೆಯಾ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ಒಳ್ಳೆಯ ಆಟಗಾರರನ್ನ ಹೊಂದಿದ್ರೂ, ಪಾಕಿಸ್ತಾನ ತಂಡ ಸ್ಥಿರವಾದ ಪ್ರದರ್ಶನ ನೀಡುವಲ್ಲಿ ಪದೇ ಪದೆ ವಿಫಲವಾಗುತ್ತಿದೆ. ಅದರಲ್ಲೂ ಸಾಲು ಸಾಲು ಸೋಲು ಕಂಡಿದ್ದ ಪಾಕಿಸ್ತಾನದ ಕ್ರಿಕೆಟ್ ತಂಡಕ್ಕೆ ಇಂದು 'ಮಾಡು ಇಲ್ಲವೆ ಮಡಿ' ಸ್ಥಿತಿ ನಿರ್ಮಾಣವಾಗಿತ್ತು. ನ್ಯೂಜಿಲೆಂಡ್ ವಿರುದ್ಧ ಇಂದು ಗೆಲ್ಲದೇ ಹೋಗಿದ್ರೆ ಪಾಕಿಸ್ತಾನ ಸೀದಾ ಮನೆಕಡೆಗೆ ದಾರಿ ಹಿಡಿಯಬೇಕಿತ್ತು. ಅದರಲ್ಲೂ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಬರೋಬ್ಬರಿ 400 ರನ್ ಗಡಿ ದಾಟಿದ ನಂತರ, ಪಾಕಿಸ್ತಾನ ಇವತ್ತು ಮನೆಗೆ ಹೋಗೋದು ಪಕ್ಕಾ ಅಂತಾ ಎಲ್ಲರೂ ಅಂದುಕೊಂಡಿದ್ದರು. ಇದೇ ಸಮಯದಲ್ಲಿ ಬಂದ ಮಳೆರಾಯ ಪಾಕಿಸ್ತಾನ ತಂಡದ ಪಾಲಿಗೆ ಹೀರೋ ಆಗಿದ್ದ!

ಪಾಕಿಸ್ತಾನ ಗೆದ್ದಿದ್ದು ಹೇಗೆ ಗೊತ್ತಾ?
ಹೌದು, ಪಾಕಿಸ್ತಾನ & ನ್ಯೂಜಿಲೆಂಡ್ ಪಂದ್ಯದ ವೇಳೆ ಮಳೆ ಬಿಟ್ಟೂ ಬಿಡದೆ ಕಾಡಿಬಿಟ್ಟಿತು. ಅದರಲ್ಲೂ ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಮುಗಿದ ನಂತರ ಮಳೆ ವಿಚಿತ್ರವಾಗಿ ಕಾಡಿ, ಕಾಡಿ ಪಂದ್ಯವನ್ನು ನಡೆಸಲು ಬಿಡುವುದಿಲ್ಲ ಎಂದು ಹಠ ಹಿಡಿದಿತ್ತು. ಹೀಗಿದ್ದಾಗ ಇಬ್ಬರು ಒಂದೊಂದು ಅಂಕ ಪಡೀತಾರೆ ಅಂತಾ ಅಂದುಕೊಂಡಿದ್ದರು ಅಭಿಮಾನಿಗಳು. ಅದೇನೋ ಗೊತ್ತಿಲ್ಲ ಆವಾಗಲೇ ದೊಡ್ಡ ಪವಾಡ ನಡೆದು ಹೋಗಿತ್ತು.
ರನ್ ಹೊಡಿ ಮಗಾ.. ಚಚ್ಚು ಮಗಾ..!
ಪವಾಡ ಎನ್ನುವಂತೆ ಜೋರಾಗಿ ಸುರಿಯುತ್ತಿದ್ದ ಮಳೆರಾಯ ಬ್ರೇಕ್ ಕೊಟ್ಟು ಪಂದ್ಯವನ್ನು ರೀ ಸ್ಟಾರ್ಟ್ ಮಾಡಲು ಸಾಥ್ ನೀಡಿದ್ದ. ಆದ್ರೆ ಮಧ್ಯದಲ್ಲಿ ಮತ್ತೆ ಮಳೆ ಬಂದು ಡಕ್ವರ್ತ್ ಲೂಯಿಸ್ ನಿಯಮದ ಆಧಾರದಲ್ಲಿ ರನ್ & ಓವರ್ ಕಡಿತ ಮಾಡಲಾಗಿತ್ತು. ಆಗ ಅಲರ್ಟ್ ಆದ ಪಾಕಿಸ್ತಾನ ತಂಡದ ಬ್ಯಾಟ್ಸ್‌ಮನ್‌ಗಳು, ನ್ಯೂಜಿಲೆಂಡ್ ಬೌಲರ್‌ಗಳ ಬೆವರನ್ನು ಇಳಿಸಿ ಉತ್ತಮ ರನ್ ಕಲೆಹಾಕಿದರು. ಆದರೆ ಇದೇ ವೇಳೆ ಮತ್ತೆ ಮಳೆ ಬಂದು ಪಂದ್ಯ ನಿಂತಿತ್ತು.

200 ರನ್ ಗಳಿಸಿ ಗೆದ್ದ ಪಾಕಿಸ್ತಾನ!
ನ್ಯೂಜಿಲೆಂಡ್ ತಂಡ ನೀಡಿದ್ದ 402 ರನ್‌ಗಳ ಗುರಿಯನ್ನು ಬೆನ್ನತ್ತಲು ಆರಂಭಿಸಿದ ಪಾಕ್ ಮಳೆ ಕಾಟದ ನಡುವೆ 200 ರನ್ ಕಲೆ ಹಾಕಿ 1 ವಿಕೆಟ್ ಕಳೆದುಕೊಂಡಿತ್ತು. ಆಗಲೇ 25.3 ಓವರ್ ಮುಗಿದಿದ್ದ ಕಾರಣ, 'ಡಕ್ವರ್ತ್ ಲೂಯಿಸ್' ನಿಯಮ ಅನ್ವಯಿಸಿ ಪಾಕ್ ತಂಡದ ಪರ 21 ರನ್‌ಗಳ ಗೆಲುವನ್ನು ಘೋಷಿಸಲಾಯಿತು. ಆದರೆ 402 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ ಭರ್ಜರಿ ಗೆಲುವಿನ ವಿಶ್ವಾಸದಲ್ಲಿದ್ದ ನ್ಯೂಜಿಲೆಂಡ್ ತಂಡಕ್ಕೆ ಇದರಿಂದ ಆಘಾತವಾಗಿತ್ತು.
ಅಂಕಪಟ್ಟಿಯಲ್ಲಿ ಪಾಕಿಸ್ತಾನ ಎಲ್ಲಿದೆ?
ಒಟ್ನಲ್ಲಿ ಈ ಗೆಲುವಿನಿಂದಾಗಿ ಪಾಕಿಸ್ತಾನ ತಂಡ 2 ಅಂಕ ಪಡೆದುಕೊಂಡಿದೆ. ಅಲ್ಲದೆ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಅಂಕಪಟ್ಟಿಯಲ್ಲಿ ಇದೀಗ ಪಾಕಿಸ್ತಾನ ತಂಡ 5ನೇ ಸ್ಥಾನಕ್ಕೆ ಎಂಟ್ರಿ ಕೊಟ್ಟಿದೆ. ಪಾಕಿಸ್ತಾನ 8 ಪಂದ್ಯಗಳಿಂದ 8 ಅಂಕಗಳನ್ನ ಗಳಿಸಿ 5ನೇ ಸ್ಥಾನಕ್ಕೆ ಎಂಟ್ರಿಯಾಗಿದೆ. ಅಲ್ಲದೆ ಸೆಮಿಫೈನಲ್‌ಗೆ ಹೋಗುವ ಪಾಕ್ ಕನಸು ಕೂಡ ಮಳೆರಾಯನ ಕೃಪೆಯಿಂದ ಈಗ ಜೀವಂತವಾಗಿದೆ. ಪಾಕ್ ಮುಂದಿನ ಹಂತಕ್ಕೆ ಹೋಗಲು, ಈಗ ಅಂಕಪಟ್ಟಿಯಲ್ಲಿ ಜಾದೂ ನಡೆಯಬೇಕಿದೆ. ಬಾಕಿ ಇರುವ 1 ಪಂದ್ಯದಲ್ಲಿ ಪಾಕ್ ಭರ್ಜರಿ ಗೆಲುವು ಸಾಧಿಸಿ ರನ್‌ರೇಟ್ ಹೆಚ್ಚಿಸಿಕೊಳ್ಳಬೇಕಿದೆ.
ಭಾರತಕ್ಕೆ ಮತ್ತೆ ಪಾಕಿಸ್ತಾನ ಎದುರಾಳಿ?
ಹೀಗೆ ಮತ್ತೊಂದು ಮಹತ್ವದ & ರೋಚಕ ಪಂದ್ಯಕ್ಕೆ ನಮ್ಮ ಬೆಂಗಳೂರಿನ ಕ್ರೀಡಾಂಗಣವು ಸಾಕ್ಷಿಯಾಗಿತ್ತು. ಅಕಸ್ಮಾತ್ ಪಾಕಿಸ್ತಾನ ಎದ್ದೂ ಬಿದ್ದು ಸೆಮಿಫೈನಲ್ ಪ್ರವೇಶ ಮಾಡಿದರೆ ಭಾರತದ ವಿರುದ್ಧ ಪಂದ್ಯ ಆಡುವ ಸಾಧ್ಯತೆ ಕೂಡ ದಟ್ಟವಾಗಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ಅಭಿಮಾನಿಗಳಿಗೆ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ, ಎರಡೆರಡು ಬಾರಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.












Click it and Unblock the Notifications