India vs Pakistan: ಭಾರತಕ್ಕೆ 242 ರನ್‌ಗಳ ಗುರಿ ನೀಡಿದ ಪಾಕಿಸ್ತಾನ
ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯಾವಳಿಯ ಭಾರತದ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 50 ಓವರ್ ಗಳಲ್ಲಿ 241 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿದೆ. ಈ ಮೂಲಕ ಭಾರತದ ಗೆಲುವಿಗೆ 242 ರನ್ ಗಳ ಗುರಿ ನೀಡಿದೆ.
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಶಿಸ್ತಿನ ಬೌಲಿಂಗ್ ಎದುರು ಪಾಕಿಸ್ತಾನ ರನ್ ಗಳಿಸಲು ತಡಕಾಡಿತು. ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿದರೂ ಹಾರ್ದಿಕ್ ಪಾಂಡ್ಯ 23 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಬಾಬರ್ ಆಜಂ ವಿಕೆಟ್ ಪಡೆಯುವ ಮೂಲಕ ಪಾಕಿಸ್ತಾನಕ್ಕೆ ಆಘಾತ ನೀಡಿದರು. ಬಳಿಕ ಅಕ್ಷರ್ ಪಟೇಲ್ ಮಿಂಚಿನ ಫೀಲ್ಡಿಂಗ್ ಮೂಲಕ ಇಮಾಮ್ ಉಲ್ ಹಕ್ ರನ್ನು ರನೌಟ್ ಮಾಡಿದರು. ಆರಂಭಿಕ ಆಘಾತದ ಬಳಿಕ ನಾಯಕ ಮೊಹಮ್ಮದ್ ರಿಜ್ವಾನ್ ಮತ್ತು ಸೌದ್ ಶಕೀಲ್ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು.

ಮೂರನೇ ವಿಕೆಟ್‌ಗೆ ಈ ಜೋಡಿ 104 ರನ್ ಕಲೆಹಾಕಿತು. ಉತ್ತಮವಾಗಿ ಆಡುತ್ತಿದ್ದ ಮೊಹಮ್ಮದ್ ರಿಜ್ವಾನ್ ಜೀವದಾನ ಪಡೆದರೂ ಮುಂದಿನ ಓವರ್ ನಲ್ಲೇ ಅಕ್ಷರ್ ಪಟೇಲ್ ಅವರ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ರಿಜ್ವಾನ್ 46 ರನ್ ಗಳಿಸಿದ್ದಾಗ ಔಟಾಗುತ್ತಿದ್ದಂತೆ 62 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಸೌದ್ ಶಕೀಲ್ ಕೂಡ ಮುಂದಿನ ಓವರ್ ನಲ್ಲೇ ಔಟಾದರು.
ಇವರಿಬ್ಬರು ಔಟಾದ ಬಳಿಕ ಪಾಕಿಸ್ತಾನದ ಉಳಿದ ಬ್ಯಾಟರ್ ಗಳು ಹೆಚ್ಚಿನ ಅಮಯ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಸಲ್ಮಾನ್ ಆಘಾ 19 ರನ್ ಗಳಿಸಿ ಔಟಾದರೆ, ತಯ್ಯಬ್ ತಾಹಿರ್ 4 ರನ್ ಗಳಿಸಿ ಔಟಾದರು. ಶಹೀನ್ ಅಫ್ರಿದಿ ಮೊದಲ ಎಸೆತದಲ್ಲೇ ಔಟಾದರು.
ಭಾರತದ ಪರವಾಗಿ ಕುಲದೀಪ್ ಯಾದವ್ 10 ಓವರ್ ಗಳಲ್ಲಿ 45 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 8 ಓವರ್ ಗಳಲ್ಲಿ 31 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದುಕೊಂಡರು. ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು.
ಬಳಿಕ ಈ ಗುರಿಯನ್ನು ಬೆನ್ನಟ್ಟಿದ ಭಾರತ 42.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 244 ರನ್ ಗಳಿಸುವ ಮೂಲಕ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ವಿರಾಟ್ ಕೊಹ್ಲಿ ಅಜೇಯ ಶತಕ ಸಿಡಿಸುವ ಮೂಲಕ ಭಾರತಕ್ಕೆ ಸುಲಭ ಗೆಲುವು ತಂದುಕೊಟ್ಟರು. ಈ ಗೆಲುವಿನ ಮೂಲಕ ಭಾರತ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು, ಪಾಕಿಸ್ತಾನ ಪಂದ್ಯಾವಳಿಯಿಂದಲೇ ಬಹುತೇಕ ಹೊರಬಿದ್ದಿದೆ.












Click it and Unblock the Notifications