ಕಲಬುರಗಿ; ನ. 26ರಿಂದ ಲಾನ್ ಟೆನಿಸ್ ಟೂರ್ನಿ 2023
ಕಲಬುರಗಿ, ನವೆಂಬರ್ 24; ಧಾರವಾಡ, ದಾವಣಗೆರೆ ಬಳಿಕ ಈಗ ಬಿಸಿಲು ನಾಡು ಕಲಬುರಗಿಯಲ್ಲಿ ಲಾನ್ ಟೆನಿಸ್ ಟೂರ್ನಿ ನಡೆಯಲಿದೆ. ನವೆಂಬರ್ 26 ರಿಂದ ಡಿಸೆಂಬರ್ 3ರ ತನಕ ಐ.ಟಿ.ಎಫ್ ಕಲಬುರಗಿ ಓಪನ್ ಮೆನ್ಸ್ ಲಾನ್ ಟೆನಿಸ್ ಟೂರ್ನಾಮೆಂಟ್-2023 ಆಯೋಜನೆ ಮಾಡಲಾಗಿದೆ.
ಈ ಕುರಿತು ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮಾಹಿತಿ ನೀಡಿದ್ದಾರೆ. ಟೆನಿಸ್ ಟೂರ್ನಾಮೆಂಟ್ ಆಯೋಜನೆ ಸಂಬಂಧ ರಚಿಸಲಾಗಿರುವ ವಿವಿಧ ಸಮಿತಿಗಳ ಮುಖ್ಯಸ್ಥರಾಗಿರುವ ಅಧಿಕಾರಿಗಳೊಂದಿಗೆ ಅವರು ಸಭೆಯನ್ನು ನಡೆಸಿದರು.

ನವೆಂಬರ್ 26ರಿಂದ ಲಾನ್ ಟೆನಿಸ್ ಟೂರ್ನಾಮೆಂಟ್-2023 ಸಂಘಟಿಸಲಾಗುತ್ತಿದ್ದು, ಟೆನಿಸ್ ಕ್ರೀಡಾಕೂಟ ಯಶಸ್ಸಿಗೆ ಎಲ್ಲಾ ಸಮಿತಿಗಳು ಕಾರ್ಯೋನ್ಮುಖವಾಗಬೇಕು. ಅಂತರಾಷ್ಟ್ರೀಯ ಖ್ಯಾತಿಯ ಆಟಗಾರರು ಇದರಲ್ಲಿ ಭಾಗವಹಿಸಲಿದ್ದು, ಎಲ್ಲಿಯೂ ಲೋಪವಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.
ಮುಖ್ಯ ಪಂದ್ಯಗಳು ಯಾವಾಗ?; ನವೆಂಬರ್ 26ರಿಂದ ಡಿಸೆಂಬರ್ 3ರ ತನಕ ಒಂದು ವಾರಗಳ ಕಾಲ ಕಲಬುರಗಿಯಲ್ಲಿ ಟೆನಿಸ್ ಕಲರವ ಕಾಣಲಿದೆ. ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಈ ಕ್ರೀಡಾಕೂಟ ನಡೆಯಲಿದೆ.
ಕ್ರೀಡಾಪಟುಗಳಿಗೆ ವಸತಿ, ಊಟೋಪಚಾರ, ಸಾರಿಗೆ, ಭದ್ರತೆ ವ್ಯವಸ್ಥೆಯಲ್ಲಿ ಲೋಪವಾಗದಂತೆ ನೋಡಿಕೊಳ್ಳಬೇಕು. ಟೂರ್ನಿ ಕುರಿತು ಟೀಸರ್, ಪ್ರೊಮೋಷನ್ ಕಾರ್ಯ ಕೂಡಲೇ ಚುರುಕುಗೊಳಿಸಬೇಕು. ಸಾಮಾಜಿಕ ಜಾಲತಾಣ ಮೂಲಕ ಹೆಚ್ಚಿನ ಪ್ರಚಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಕ್ರೀಡಾಕೂಟ ಯಶಸ್ಸಿಗೆ ಈಗಾಗಲೇ ಸ್ವಾಗತ, ಹಣಕಾಸು, ಸಾರಿಗೆ, ಪ್ರಚಾರ, ಮನರಂಜನಾ, ವಸತಿ, ಆರೋಗ್ಯ, ಭದ್ರತಾ, ಕುಡಿಯುವ ನೀರು ಮತ್ತು ಸ್ವಚ್ಛತೆ, ಅಗ್ನಿಶಾಮಕ ಹೀಗೆ ಒಟ್ಟಾರೆ 14 ಸಮಿತಿ ರಚಿಸಿ ಜವಾಬ್ದಾರಿ ನೀಡಿದ್ದು, ಅದರಂತೆ ಸಮಿತಿಯಲ್ಲಿರುವ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಬಿ. ಫೌಜಿಯಾ ತರನ್ನುಮ್ ಸೂಚಿಸಿದರು.
ನವೆಂಬರ್ 26 ಮತ್ತು 27ರಂದು ಅರ್ಹತಾ ಪಂದ್ಯಗಳು ನಡೆಯಲಿವೆ. ನವೆಂಬರ್ 28ರಿಂದ ಮುಖ್ಯ ಪಂದ್ಯ ನಡೆಯಲಿದ್ದು, ಡಿಸೆಂಬರ್ 2 ರಂದು ಮೆನ್ಸ್ ಡಬಲ್ ಮತ್ತು ಡಿಸೆಂಬರ್ 3 ರಂದು ಮೆನ್ಸ್ ಸಿಂಗಲ್ ಫೈನಲ್ ಪಂದ್ಯ ನಡೆಯಲಿದೆ.
ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಸಂಸ್ಥೆಯ ಟೂರ್ನಾಮೆಂಟ್ ನಿರ್ದೇಶಕ ಪೀಟರ್ ವಿಜಯಕುಮಾರ್ ಮಾತನಾಡಿ, ಸುಮಾರು 75 ಜನ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಕಲಬುರಗಿ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಐ.ಟಿ.ಎಫ್. ಕಲಬುರಗಿ ಓಪನ್-2023 ಮೆನ್ಸ್ ಟೆನಿಸ್ ಟೂರ್ನಿ ಹಿನ್ನೆಲೆಯಲ್ಲಿ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಮತ್ತು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಶುಕ್ರವಾರ ಚಂಪಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿದರು. ಕ್ರೀಡಾಂಗಣದಲ್ಲಿರುವ ಸಿಂಥೆಟಿಕ್ ಟೆನಿಸ್ ಕೋರ್ಟ್ ಅಂಗಣ, ಪ್ರೇಕ್ಷಕರ ಗ್ಯಾಲರಿ, ಐ.ಟಿ.ಎಫ್. ಸೂಪರ್‍ವೈಸರ್ ಕೋಣೆ, ಆಟಗಾರರ ಲಾಂಜ್, ಮೀಡಿಯಾ ಸೆಂಟರ್, ಫುಡ್ ಕೋರ್ಟ್ ಸ್ಥಳವನ್ನು ಖುದ್ದಾಗಿ ಪರಿಶೀಲಿಸಿದರು.
ಅಲ್ಟ್ರಾಟೆಕ್ ಪ್ರಾಯೋಜಕತ್ವದ ಐ.ಟಿ.ಎಫ್ ಕಲಬುರಗಿ ಓಪನ್ ಪುರುಷರ ಅಂತಾರಾಷ್ಟ್ರೀಯ ಟೆನಿಸ್ ಪಂದ್ಯಾವಳಿಗಳು ನವೆಂಬರ್ 26 ರಿಂದ ಡಿಸೆಂಬರ್ 3ರ ವರೆಗೆ ಬೆಳಗ್ಗೆ 9.30 ರಿಂದ ಸಾಯಂಕಾಲ 5 ಗಂಟೆ ವರೆಗೆ ನಡೆಯಲಿದೆ. ಕ್ರೀಡಾಕೂಟ ವೀಕ್ಷಣೆಗೆ ಪ್ರವೇಶ ಉಚಿತವಾಗಿದೆ.
ಜಿಲ್ಲೆಯ ಸಾರ್ವಜನಿಕರು, ಶಾಲಾ-ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಪಂದ್ಯಾವಳಿಯನ್ನು ವೀಕ್ಷಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಲಬುರಗಿ ಸಹಾಯಕ ನಿರ್ದೇಶಕಿ ಗಾಯತ್ತಿ ಮನವಿ ಮಾಡಿದ್ದಾರೆ.












Click it and Unblock the Notifications