Nitesh Kumar: ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನಿತೇಶ್ ಕುಮಾರ್
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಸೋಮವಾರ ನಡೆದ ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಎಸ್‌ಎಲ್ 4 ವಿಭಾಗದಲ್ಲಿ ನಿತೇಶ್ ಕುಮಾರ್ ಚಿನ್ನದ ಪದಕ ಗೆದ್ದುಕೊಂಡರು. ಹರಿಯಾಣದ ಷಟ್ಲರ್ ನಿತೇಶ್ ಕುಮಾರ್, ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ವಿರುದ್ಧ ಮೂರು ಗೇಮ್‌ಗಳ ಪಂದ್ಯದಲ್ಲಿ 2-1 (21-14, 18-21, 22-21) ಗೆಲುವು ಸಾಧಿಸಿದರು.
ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ. ಅಗ್ರ ಶ್ರೇಯಾಂಕದ ನಿತೇಶ್ ಕುಮಾರ್ ಮೊದಲ ಗೇಮ್‌ನಲ್ಲಿ 21-14 ರಲ್ಲಿ ಗೆಲುವು ಸಾಧಿಸಿದರು, ಎರಡನೇ ಗೇಮ್‌ನಲ್ಲಿ 18-21ರಲ್ಲಿ ಸೋಲನುಭವಿಸಿದರು. ಮೂರನೇ ನಿರ್ಣಾಯಕ ಗೇಮ್‌ನಲ್ಲಿ ನಿತೇಶ್ ಕುಮಾರ್ 23-21 ರಲ್ಲಿ ಗೆಲ್ಲುವ ಮೂಲಕ ಚಿನ್ನದ ಪದಕ ಗೆದ್ದುಕೊಂಡರು.

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಇದು ಎರಡನೇ ಚಿನ್ನದ ಪದಕ. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 ಸ್ಪರ್ಧೆಯಲ್ಲಿ ಪ್ಯಾರಾ ಶೂಟರ್ ಅವನಿ ಲೆಖರಾ 249.7 ಪಾಯಿಂಟ್‌ಗಳೊಂದಿಗೆ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡಿದ್ದರು.
ಭಾರತಕ್ಕೆ ಎರಡನೇ ಚಿನ್ನ
ಭಾರತದ ಷಟ್ಲರ್ ನಿತೇಶ್ ಕುಮಾರ್ ಅವರಿಗೆ ಇದು ಮೊದಲ ಪ್ಯಾರಾಲಿಂಪಿಕ್ ಪದಕವಾಗಿದೆ. ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿನ ತಮ್ಮ ಯಶಸ್ಸನ್ನು ಪ್ಯಾರಾಲಿಂಪಿಕ್ಸ್‌ನಲ್ಲಿ ಮುಂದುವರೆಸಿದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಿತೇಶ್ ಕುಮಾರ್ ಉತ್ತಮ ಪ್ರದರ್ಶನ ನೀಡಿದ್ದಾರೆ. 2019ರ ಬಾಸೆಲ್ ಮತ್ತು 2022 ರ ಟೋಕಿಯೋ ವಿಶ್ವ ಚಾಂಪಿಯನ್‌ಶಿಪ್ ಪಂದ್ಯಾವಳಿಗಳಲ್ಲಿ ಅವರು ಬೆಳ್ಳಿ ಪದಕ ಗೆದ್ದಿದ್ದರು. 2024ರ ಪಟ್ಟಾಯದಲ್ಲಿ ಕಂಚು ಗೆದ್ದುಕೊಂಡಿದ್ದರು.
ಬೆಳ್ಳಿ ಗೆದ್ದ ಯೋಗೇಶ್
ಇದಕ್ಕೂ ಮುನ್ನ ನಡೆದ ಡಿಸ್ಕಸ್ ಎಫ್ 56 ಫೈನಲ್‌ನಲ್ಲಿ ಭಾರತದ ಡಿಸ್ಕಸ್ ಎಸೆತಗಾರ ಯೋಗೇಶ್ ಕಥುನಿಯಾ ಬೆಳ್ಳಿ ಪದಕ ಗೆದ್ದರು. ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ಫೈನಲ್ ಸ್ಪರ್ಧೆ ನಡೆಯಿತು. ಹರಿಯಾಣದ ಅಥ್ಲೀಟ್ ಯೋಗೇಶ್ ಕಥುನಿಯಾ 42.22 ಮೀಟರ್‌ಗಳಷ್ಟು ದೂರ ಎಸೆಯುವ ಮೂಲಕ ಪದಕವನ್ನು ಖಚಿತಪಡಿಸಿಕೊಂಡರು. ಬ್ರೆಜಿಲ್‌ನ ಕ್ಲಾಡಿನಿ ಬಟಿಸ್ಟಾ ಡಾಸ್ ಸ್ಯಾಂಟೋಸ್ ಪ್ಯಾರಾಲಿಂಪಿಕ್ ದಾಖಲೆಯೊಂದಿಗೆ 46.86 ಮೀ ದೂರ ಎಸೆದಯ ಚಿನ್ನ ಗೆದ್ದರು. ಗ್ರೀಸ್‌ನ ಕಾನ್‌ಸ್ಟಾಂಟಿನೋಸ್ ಝೌನಿಸ್ 41.32 ಮೀಟರ್ ಎಸೆದು ಕಂಚಿನ ಪದಕ ಗೆದ್ದರು.
ಯೋಗೇಶ್ ಕಥುನಿಯಾಗೆ ಇದು ಎರಡನೇ ಪ್ಯಾರಾಲಿಂಪಿಕ್ ಪದಕವಾಗಿದೆ. ಈ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲೂ ಕೂಡ ಅವರು ಬೆಳ್ಳಿ ಪದಕ ಗೆದ್ದಿದ್ದರು. ಎರಡು ಬಾರಿ ಬೆಳ್ಳಿ ಪದಕ ಗೆದ್ದಿರುವ ಯೋಗೇಶ್ ಚಿನ್ನ ಗೆಲ್ಲುವ ಕನಸು ಈ ಬಾರಿ ನನಸಾಗಲಿಲ್ಲ.












Click it and Unblock the Notifications