Neeraj Chopra: ನೀರಜ್ ಚೋಪ್ರಾಗೆ ಲೆಫ್ಟಿನೆಂಟ್ ಕರ್ನಲ್ ಹುದ್ದೆ
Neeraj Chopra: ಜಾವೆಲಿನ್ ಎಸೆತದಲ್ಲಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೆ ಪ್ರಾದೇಶಿಕ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಲಾಗಿದೆ. ಈ ನೇಮಕಾತಿ ಏಪ್ರಿಲ್ 16ರಿಂದ ಜಾರಿಗೆ ಬಂದಿದೆ ಎಂದು ತಿಳಿಸಿದೆ.
ಜಾವೆಲಿನ್ ಎಸೆತದಲ್ಲಿ ಮಿಂಚಿ ಭಾರತದ ಘನತೆಯನ್ನು ಎತ್ತಿಹಿಡಿದಿದ್ದ ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆಯಲ್ಲಿ ದೊಡ್ಡ ಹುದ್ದೆಯನ್ನು ನೀಡಲಾಗಿದೆ. ನೀರಜ್ ಚೋಪ್ರಾ ಅವರು ಎರಡು ಬಾರಿ ಒಲಿಂಪಿಕ್ ಪದಕ ವಿಜೇತರಾಗಿದ್ದು, ಇದೀಗ ಅವರಿಗೆ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆಯನ್ನು ನೀಡಲಾಗಿದೆ.

ರಕ್ಷಣಾ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೀರಜ್ ಚೋಪ್ರಾ ಅವರಿಗೆ ಈ ಶ್ರೇಣಿಯನ್ನು ನೀಡಿದ್ದಾರೆ. ಈಗಾಗಲೇ ನೀರಜ್ ಚೋಪ್ರಾ ಅವರು ಭಾರತೀಯ ಸೇನೆಯಲ್ಲಿ ಸುಬೇದಾರ್ ಮೇಜರ್ ಆಗಿ ನೇಮಕ ಆಗಿದ್ದು, ಇದೀಗ ಅವರಿಗೆ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿದೆ. ಆದ್ದರಿಂದ ಅವರು ಸುಬೇದಾರ್ ಮೇಜರ್ ಹುದ್ದೆಗೆ ರಾಜೀನಾಮೆ ಕೊಡಬೇಕಾಗುತ್ತದೆ.
ರಕ್ಷಣಾ ಸಚಿವಾಲಯ ಬುಧವಾರ ಅಂದರೆ ಮೇ 14ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಅಧಿಸೂಚನೆಯ ಪ್ರಕಾರ, ರಾಷ್ಟ್ರಪತಿಗಳು ಪ್ರಾದೇಶಿಕ ಸೇನಾ ನಿಯಮಗಳಡಿಯಲ್ಲಿ ತಮ್ಮ ಅಧಿಕಾರವನ್ನು ಚಲಾಯಿಸಿ, ನೀರಜ್ ಚೋಪ್ರಾ ಅವರಿಗೆ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಕೊಟ್ಟಿದ್ದಾರೆ.
ಭಾರತೀಯ ಸೇನೆಯ ರಜಪೂತ್ ರೈಫಲ್ಸ್‌ನಲ್ಲಿ ಮೊದಲು ಸುಬೇದಾರ್, ನಂತರ ಸುಬೇದಾರ್ ಮೇಜರ್ ಆಗಿದ್ದ ನೀರಜ್, ಜಾವೆಲಿನ್ ಥ್ರೋನಲ್ಲಿ ಅತ್ಯದ್ಭುತ ಸಾಧನೆ ಮಾಡಿ ಇಡೀ ವಿಶ್ವದ ಗಮನ ಸೆಳೆದಿದ್ದರು. ಈ ಮೂಲಕ ದೇಶ ಹಾಗೂ ಸೈನ್ಯಕ್ಕೆ ಕೀರ್ತಿ ತಂದಿದ್ದಾರೆ. ಅಲ್ಲದೆ, ಪದಕ ಗೆದ್ದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರೇ ಕರೆಸಿಕೊಂಡು ನೀರಜ್ ಚೋಪ್ರಾ ಜೊತೆ ಮಾತುಕತೆ ನಡೆಸಿ ಅಭಿನಂದನೆ ಸಲ್ಲಿಸಿದ್ದರು.
2016ರಲ್ಲಿ ಸೇನೆಯಲ್ಲಿ ಇದ್ದ ವೇಳೆ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ನೀರಜ್ ಚೋಪ್ರಾಗೆ ಅದೇ ವರ್ಷ ಸುಬೇದಾರ್ ಹುದ್ದೆ ನೀಡಲಾಯಿತು. ಬಳಿಕ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದು, ಈ ಮೂಲಕ ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ ಚಾಂಪಿಯನ್ ಆಗಿ ಹೊರಹೊಮ್ಮಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದಾದ ಬಳಿಕ ಅವರಿಗೆ ಬಡ್ತಿ ನೀಡಿ ಸುಬೇದಾರ್ ಮೇಜರ್ ಹುದ್ದೆ ನೀಡಲಾಯಿತು. ಬಳಿಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ನಂತರ ಡೈಮಂಡ್ ಲೀಗ್ ಪ್ರಶಸ್ತಿಯನ್ನು ಕೂಡ ತಮ್ಮ ಮುಡಿಗೇರಿಸಿಕೊಂಡರು. ಅಷ್ಟೇ ಅಲ್ಲದೆ, ಕಳೆದ ವರ್ಷ ನಡೆದಿದ್ದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಗಮನ ಸೆಳೆದಿದ್ದರು.
ಇನ್ನು 1983ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ತಂಡದ ನಾಯಕತ್ವ ವಹಿಸಿದ್ದ ಕಪಿಲ್ ದೇವ್ ಅವರಿಗೂ ಸಹ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಲಾಗಿತ್ತು. 2011ರಲ್ಲಿ ಎಂಎಸ್ ಧೋನಿ ಮತ್ತು ಅಭಿನವ್ ಬಿಂದ್ರಾ ಅವರಿಗೂ ಈ ಗೌರವ ಹುದ್ದೆಯನ್ನು ನೀಡಲಾಗಿತ್ತು. ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ವಿಶ್ವಕಪ್ ಗೆದ್ದರೆ, ಬಿಂದ್ರಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರರಾಗಿದ್ದರು. ಅಲ್ಲದೆ, ಕ್ರಿಕೆಟ್ ದೇವರು ಅಂತಲೇ ಹೆಸರುವಾಸಿಯಾಗಿರುವ ಸಚಿನ್ ತೆಂಡೂಲ್ಕರ್ ಅವರನ್ನು ಭಾರತೀಯ ವಾಯುಪಡೆಯು ಗೌರವ ಗ್ರೂಪ್ ಕ್ಯಾಪ್ಟನ್ ಆಗಿ ನೇಮಕ ಮಾಡಿದೆ.
ಇದೀಗ ನೀರಜ್ ಚೋಪ್ರಾ ಅವರಿಗೆ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಲಾಗಿದೆ. ಇನ್ನು ಇವರು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನಯ ಮುಡಿಗೇರಿಸಿಕೊಂಡಿದ್ದಾರೆ.












Click it and Unblock the Notifications