RCB vs MI: ರೋಚಕ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಗೆದ್ದ ಮುಂಬೈ ಇಂಡಿಯನ್ಸ್
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2025ರ ಪಂದ್ಯದಲ್ಲಿ ಆರ್ ಸಿಬಿ ಮೊದಲ ಸೋಲು ಕಂಡಿದೆ. ಶುಕ್ರವಾರ ನಡೆದ ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಎಲ್ಲಿಸ್ ಪೆರ್‍ರಿ ಮತ್ತು ಜಾರ್ಜಿಯಾ ವೇರಂ ಅವರ ಹೋರಾಟ ವ್ಯರ್ಥವಾಯಿತು.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿತು. ಸ್ಫೋಟಕ ಆರಂಭ ಪಡೆದರೂ ಬಳಿಕ ಸತತವಾಗಿ ವಿಕೆಟ್ ಕಳೆದುಕೊಂಡ ಕಾರಣ ದೊಡ್ಡ ಮೊತ್ತ ಕಲೆಹಾಕುವ ಅವಕಾಶ ಕಳೆದುಕೊಂಡಿತು.

ನಾಯಕಿ ಸ್ಮೃತಿ ಮಂಧಾನ 13 ಎಸೆತಗಳಲ್ಲಿ 26 ರನ್ ಗಳಿಸಿ ಔಟಾದರೆ, ವ್ಯಾಟ್ ಹಾಡ್ಜ್ 9 ರನ್ ಗಳಿಸಿದರು. ರಾಘ್ವಿ ಬಿಸ್ಟ್ 1 ರನ್ ಗಳಿಸಿ ಔಟಾದರು. ಕನಿಕಾ ಅಹುಜಾ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಎಲ್ಲಿಸ್ ಪೆರ್‍ರಿ ಆರ್ ಸಿಬಿ ತಂಡಕ್ಕೆ ಆಸರೆಯಾದರು 43 ಎಸೆತಗಳಲ್ಲಿ 11 ಬೌಂಡರಿ 3 ಸಿಕ್ಸರ್ ಸಹಿತ 81 ರನ್ ಗಳಿಸಿದರು. ರಿಚಾ ಘೋಷ್ 25 ಎಸೆತಗಳಲ್ಲಿ 28 ರನ್ ಗಳಿಸಿದರು.
ಅಮಂಜೋತ್ ಕೌರ್ 3 ಓವರ್ ಗಳಲ್ಲಿ 22 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ಶಭ್ಮನ್ ಇಸ್ಮಾಯಿಲ್, ನ್ಯಾಟ್ ಸಿವರ್ ಬ್ರಂಟ್, ಹೇಲಿ ಮ್ಯಾಥ್ಯೂಸ್ ಮತ್ತು ಸಂಸ್ಕೃತಿ ಗುಪ್ತಾ ತಲಾ 1 ವಿಕೆಟ್ ಪಡೆದರು.
ಸ್ಫೋಟಕ ಆರಂಭ ಪಡೆದ ಮುಂಬೈ
168 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಆರಂಭಿಕ ಆಘಾತದ ನಡುವೆಯೂ ಸ್ಫೋಟಕ ಆರಂಭ ಪಡೆಯಿತು. ಯಾಸ್ತಿಕಾ ಭಾಟಿಯಾ 8 ರನ್ ಗಳಿಸಿ ಔಟಾದರೆ, ಹೇಲಿ ಮ್ಯಾಥ್ಯೂಸ್ 15 ರನ್ ಗಳಿಸಿದರು. ನ್ಯಾಟ್ ಸಿವರ್ ಬ್ರಂಟ್ 21 ಎಸೆತಗಳಲ್ಲಿ 42 ರನ್ ಗಳಿಸುವ ಮೂಲಕ ಮುಂಬೈಗೆ ನೆರವಾದರು.
ಹರ್ಮನ್ ಪ್ರೀತ್ ಕೌರ್ 38 ಎಸೆತಗಳಲ್ಲಿ 50 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಮಹತ್ತರ ಕೊಡುಗೆ ನೀಡಿದರು. ಅಮೆಲಿಯಾ ಕೆರ್ 2 ರನ್ ಗಳಿಸಿ ಔಟಾದರೆ, ಅಮಂಜೋತ್ ಕೌರ್ 27 ಎಸೆತಗಳಲ್ಲಿ 2 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 34 ರನ್ ಗಳಿಸುವ ಮೂಲಕ ಆರ್ ಸಿಬಿ ಗೆಲುವನ್ನು ಕಿತ್ತುಕೊಂಡರು. 19.5 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 170 ರನ್ ಗಳಿಸಿದ ಮುಂಬೈ ಇಂಡಿಯನ್ಸ್ ಈ ಆವೃತ್ತಿಯ ಎರಡನೇ ಗೆಲುವು ಸಾಧಿಸಿತು.
ಈ ಗೆಲುವಿನ ಮೂಲಕ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಮೊದಲ ಎರಡು ಪಂದ್ಯ ಗೆದ್ದಿರುವ ಆರ್ ಸಿಬಿ ಉತ್ತಮ ರನ್‌ರೇಟ್‌ನೊಂದಿಗೆ ಮೊದಲ ಸ್ಥಾನದಲ್ಲೇ ಉಳಿದುಕೊಂಡಿದೆ.












Click it and Unblock the Notifications