ಆಶಾ ಭೋಸ್ಲೆಗೆ ಮುಂಬೈ ಇಂಡಿಯನ್ಸ್-ಆರ್‌ಸಿಬಿ ಪಂದ್ಯದಲ್ಲಿ ಗೌರವ ನಮನ, ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದ ಆಟಗಾರರು
ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರು ಕಪ್ಪು ಪಟ್ಟಿಯನ್ನು ಧರಿಸಿ ಕಣಕ್ಕಿಳಿದಿದ್ದಾರೆ. ಭಾನುವಾರ ನಿಧನರಾದ ಖ್ಯಾತ ಗಾಯಕಿ ಆಶಾ ಭೋಸ್ಲೆ (92) ಅವರ ಸ್ಮರಣಾರ್ಥವಾಗಿ ಪಂದ್ಯದ ಆರಂಭಕ್ಕೂ ಮುನ್ನ ಒಂದು ನಿಮಿಷದ ಮೌನವನ್ನು ಆಚರಿಸಲಾಯಿತು.
ಮತ್ತೊಬ್ಬ ದಂತಕಥೆ ಲತಾ ಮಂಗೇಶ್ಕರ್ ಅವರ ಕಿರಿಯ ತಂಗಿಯಾಗಿದ್ದ ಆಶಾ ಭೋಸ್ಲೆ ಅವರು, ಹೃದಯಾಘಾತ ಸಂಭವಿಸಿ ಶನಿವಾರ ಸಂಜೆ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನೂ ಆಶಾ ಭೋಸ್ಲೆ ಅವರ ನಿಧನದ ಸುದ್ದಿಯನ್ನು ಅವರ ಪುತ್ರ ಆನಂದ್ ಭೋಸ್ಲೆ ಅವರು ಭಾನುವಾರ ಖಚಿತಪಡಿಸಿದರು.

ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿ ಆಟಗಾರರು
ಐಪಿಎಲ್ ಪಂದ್ಯದ ಮೊದಲ ಎಸೆತಕ್ಕೂ ಮುನ್ನ, ಆಶಾ ಭೋಸ್ಲೆ ಅವರಿಗೆ ಗೌರವ ಸಲ್ಲಿಸಲು ಎರಡೂ ತಂಡಗಳ ಆಟಗಾರರು ಸಾಲಾಗಿ ನಿಂತು ಒಂದು ನಿಮಿಷದ ಮೌನಾಚರಣೆ ಮಾಡಿದರು. ಅವರ ನೆನಪಿಗಾಗಿ ಆಟಗಾರರು ಕಪ್ಪು ಪಟ್ಟಿಯನ್ನು ಧರಿಸಿದ್ದಾರೆ ಎಂದು ಹರ್ಷ ಭೋಗ್ಲೆ ತಿಳಿಸಿದರು.
"ದಂತಕಥೆ ಆಶಾ ಭೋಸ್ಲೆ ಅವರನ್ನು ಸ್ಮರಿಸುತ್ತಾ ಮತ್ತು ಅವರಿಗೆ ಗೌರವ ಸಲ್ಲಿಸುತ್ತಾ ವಾಂಖೇಡೆಯಲ್ಲಿ ಒಂದು ನಿಮಿಷದ ಮೌನ ಆಚರಿಸಲಾಯಿತು. ಗೌರವದ ಸಂಕೇತವಾಗಿ ನಮ್ಮ ಆಟಗಾರರು ಕಪ್ಪು ಪಟ್ಟಿಯನ್ನು ಧರಿಸಿದ್ದಾರೆ," ಎಂದು ಮುಂಬೈ ಇಂಡಿಯನ್ಸ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದೆ.
ಸುಮಾರು 80 ವರ್ಷಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಆಶಾ ಅವರು, ಸಾವಿರಾರು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಕೇವಲ ಸ್ಟುಡಿಯೋ ರೆಕಾರ್ಡಿಂಗ್ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲಿ ನೂರಾರು ಲೈವ್ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆಶ್ಚರ್ಯವೆಂದರೆ, ತಮ್ಮ 90ನೇ ವಯಸ್ಸಿನಲ್ಲೂ ಅವರು ಗಂಟೆಗಟ್ಟಲೆ ವೇದಿಕೆಯ ಮೇಲೆ ನಿಂತು ಹಾಡುವ ಚೈತನ್ಯ ಹೊಂದಿದ್ದರು. ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯೂ ಅವರು ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ಹಿಂದಿ, ಕನ್ನಡ, ಮರಾಠಿ ಸೇರಿದಂತೆ ಭಾರತದ ಬಹುತೇಕ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಮತ್ತು ವಿದೇಶಿ ಭಾಷೆಗಳಲ್ಲೂ ಆಶಾ ಅವರು ಹಾಡಿದ್ದಾರೆ. ಅಲ್ಲದೆ, ಅವರು ಕನ್ನಡ ಚಿತ್ರರಂಗಕ್ಕೂ ಕೊಡುಗೆ ನೀಡಿದ್ದಾರೆ. ಅವರು ಹಾಡಿರುವ ಪ್ರಮುಖ ಕನ್ನಡ ಗೀತೆಗಳೆಂದರೆ, ಏನೋ ಏನೋ... (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ - 1967), ಸವಾಲು ಹಾಕಿ ಸೋಲಿಸಿ ಎಲ್ಲರ... (ದೂರದ ಬೆಟ್ಟ - 1973), ಹೇಳದೆ ಕಾರಣ... (ಮತ್ತೆ ಮುಂಗಾರು - 2010). ಇವರ ಅಗಲಿಕೆಯು ಕಲೆ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.












Click it and Unblock the Notifications