MS Dhoni: ನಿಮ್ಮಲ್ಲಿ ಕ್ರಿಕೆಟ್ ಅಭೀ ಬಾಕಿಹೇ ಎನ್ನುತ್ತಿರುವ 'ತಲೈವಾ ಧೋನಿ ಫ್ಯಾನ್ಸ್'
ನಿವೃತ್ತಿಯ ಅಂಚಿನಲ್ಲಿರುವ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ತಾವು ನಾಯಕನಾಗಿರುವ ತಂಡಕ್ಕೆ ಐದನೇ ಬಾರಿಗೆ ಐಪಿಎಲ್ ಕಪ್ ಅನ್ನು ಗೆಲ್ಲಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆ ಮೂಲಕ, ದೇಶೀಯ ಲೀಗ್ ಕ್ರಿಕೆಟಿನಲ್ಲೂ ತಮ್ಮ ಖದರ್ ಅನ್ನು ಧೋನಿ ತೋರಿಸಿದ್ದಾರೆ. ನಲವತ್ತು ವರ್ಷದ ಧೋನಿ ಈಗ ರಿಟೈರ್ಮೆಂಟ್ ಬಗ್ಗೆ ಮಾತನಾಡುತ್ತಿದ್ದಾರೆ.
ಬಿಹಾರದ ರಾಂಚಿ ಮೂಲದವರಾದ ಧೋನಿಯನ್ನು ತಮಿಳಿಗರು ಯಾವತ್ತೋ ತಮ್ಮವರಾಗಿಸಿಕೊಂಡಾಗಿದೆ. ಹಾಗಾಗಿ, ಉತ್ತರ ಭಾರತದಲ್ಲಿ ಧೋನಿ ಭಾಯ್, ಮಾಹಿ, ತಮಿಳುನಾಡಿನಲ್ಲಿ 'ತಲೈವಾ'. ಅದ್ಯಾಕೋ ಈ ಬಾರಿಯ ಐಪಿಎಲ್ ಅನ್ನು ಧೋನಿ ಅಭಿಮಾನಿಗಳು ಭಾವನಾತ್ಮಕವಾಗಿ ವೀಕ್ಷಿಸಿದ್ದೇ ಹೆಚ್ಚು. ಕಾರಣ, ಇದು ತಾವು ಆರಾಧಿಸುವ ಕ್ರಿಕೆಟಿಗನ ಕೊನೆಯ ಟೂರ್ನಮೆಂಟ್ ಇದಾಗಬಹುದು ಎನ್ನುವ ಕಾರಣಕ್ಕಾಗಿ.

ಆಡಬೇಕು ಎನ್ನುವ ಛಲವಿದ್ದರೆ ಅದಕ್ಕೆ ವಯಸ್ಸು ಅಡ್ಡಿಯಾಗುವುದಿಲ್ಲ ಎನ್ನುವ ಮಾತಿದೆ. ಅವರ ಬ್ಯಾಟಿಂಗ್ ಶೈಲಿ ಹಿಂದಿನಂತೆ ಆಕ್ರಮಣಕಾರಿಯಾಗಿ ಮತ್ತು ಸ್ಥಿರತೆಯಿಂದ ಕೂಡಿಲ್ಲ ಎನ್ನುವುದು ಒಪ್ಪಿಕೊಳ್ಳಬೇಕಾದ ವಿಚಾರ. ಆದರೂ, 41ವರ್ಷದ ಧೋನಿಯ ಫಿಸಿಕಲ್ ಫಿಟ್ನೆಸ್ ಹದಿಹರೆಯದ ಹುಡುಗರಿಗಿಂತ ಕಮ್ಮಿ ಏನೂ ಇಲ್ಲ. ಇತ್ತೀಚಿನ ದಿನಗಳಲ್ಲಿ ತಂಡದ ಯುವ ಆಟಗಾರರಿಗೆ ಧೋನಿ ಮುಂಬಡ್ತಿಯನ್ನು ನೀಡುತ್ತಿದ್ದಾರೆ.
33 ತಿಂಗಳಿನ ಹಿಂದೆ ನಿವೃತ್ತಿ ಘೋಷಿಸಿರುವ ಧೋನಿ
ಅಂತರಾಷ್ಟ್ರೀಯ ಕ್ರಿಕೆಟಿಗೆ 33 ತಿಂಗಳಿನ ಹಿಂದೆ ನಿವೃತ್ತಿ ಘೋಷಿಸಿರುವ ಧೋನಿ, ಐಪಿಎಲ್ ನಲ್ಲಿ ನಾಯಕನಾಗಿ ಮುಂದುವರಿದಿದ್ದಾರೆ. ನಿವೃತ್ತಿಯ ವಿಚಾರದಲ್ಲಿ ಧೋನಿ ಗೊಂದಲದಿಂದ ಕೂಡಿದ್ದಾರೆ ಎನ್ನುವುದು ಅವರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಫೈನಲ್ ಪಂದ್ಯದ ಮುನ್ನ ಮತ್ತು ನಂತರ ಅವರ ಹೇಳಿಕೆ ದ್ವಂದ್ವದಿಂದ ಕೂಡಿತ್ತು.
ಧೋನಿಯ ಕೊನೆಯ ಐಪಿಎಲ್ ಎಂದು ಹೇಳಲಾಗುತ್ತಿತ್ತು
ಹಾಲೀ ಐಪಿಎಲ್ ಟೂರ್ನಿಯ ಆರಂಭದಿಂದಲೂ ಇದು ಧೋನಿಯ ಕೊನೆಯ ಐಪಿಎಲ್ ಎಂದು ಹೇಳಲಾಗುತ್ತಿತ್ತು. ಈ ಬಗ್ಗೆ ಧೋನಿ ಕೂಡಾ ಸ್ಪಷ್ಟ ಉತ್ತರವನ್ನು ಕೊಟ್ಟಿರಲಿಲ್ಲ. ಪಂದ್ಯ ಮುಗಿದ ನಂತರದ ಪ್ರೆಸಂಟೇಷನ್ ವೇಳೆ ಮಾತನಾಡಿದ ಧೋನಿ, "ನಿವೃತ್ತಿ ಪ್ರಕಟಿಸಲು ಇದು ಸರಿಯಾದ ಸಮಯ. ಆದರೆ, ನಾನು ಎಲ್ಲೇ ಇದ್ದರೂ ನನ್ನ ಮೇಲೆ ತೋರಿದ ಪ್ರೀತಿ ವಾತ್ಸಲ್ಯಕ್ಕೆ ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಹೇಳುವುದು ಸುಲಭದ ವಿಷಯ" ಎಂದು ಧೋನಿ ಹೇಳಿದರು.

ಶ್ರಮಪಟ್ಟು ಮುಂದಿನ ಐಪಿಎಲ್ ಆಡುವುದು
ಮುಂದುವರಿಯುತ್ತಾ, "ಕಷ್ಟದ ವಿಷಯವೇನಂದರೆ ಇನ್ನೂ 9 ತಿಂಗಳು ಶ್ರಮಪಟ್ಟು ಮುಂದಿನ ಐಪಿಎಲ್ ಆಡುವುದು. ಇದು ನನ್ನ ದೇಹಕ್ಕೆ ಮತ್ತು ನನ್ನ ವಯಸ್ಸಿಗೆ ಸುಲಭದ ವಿಚಾರವಲ್ಲ. ಆದರೂ, ಅಭಿಮಾನಿಗಳಿಗೆ ನನ್ನಿಂದ ಉಡುಗೊರೆಯಾಗಲಿದೆ. ಇಂದು ನಾನೇನಾಗಿದ್ದೀನೋ ಅದಕ್ಕೆ ಪ್ರಮುಖ ಕಾರಣವೇ ಅಭಿಮಾನಿಗಳ ಪ್ರೀತಿ. ಅಭಿಮಾನಿಗಳ ಈ ಪ್ರೀತಿಯನ್ನು ಆನಂದಿಸಬೇಕು ಎಂದು ನಾನು ಅಂದುಕೊಂಡಿದ್ದೇನೆ"ಎಂದು ಧೋನಿ ಹೇಳಿದರು.
ಮುಂದಿನ ಐಪಿಎಲ್ ನಲ್ಲೂ ಆಡುವ ಸುಳಿವು
ಆ ಮೂಲಕ, ಮುಂದಿನ ಐಪಿಎಲ್ ನಲ್ಲೂ ಆಡುವ ಸುಳಿವನ್ನು ನೀಡಿದರೂ, ತಮ್ಮ ದೇಹದ ಸಾಮರ್ಥ್ಯದ ಮೇಲೆ ಅವಲಂಬಿತ ಎಂದು ಧೋನಿ ಹೇಳಿದ್ದಾರೆ. ಧೋನಿ ತಮ್ಮ ವೃತ್ತಿ ಜೀವನದಲ್ಲಿ ಯಾರೊಂದಿಗೂ ನಿಷ್ಠುರವಾದವರಲ್ಲ. ಅಭಿಮಾನಿಗಳು ಅವರನ್ನು ಎಷ್ಟು ಪ್ರೀತಿಸುತ್ತಾರೋ, ಕ್ರಿಕೆಟ್ ಆಟಗಾರರೂ ಅವರನ್ನು ಅಷ್ಟೇ ಪ್ರೀತಿಸುತ್ತಾರೆ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ.
ಧೋನಿಯವರನ್ನು ಪ್ರೀತಿಸದವರು ಮನುಷ್ಯರೇ ಇಲ್ಲ
ಧೋನಿಯವರನ್ನು ಪ್ರೀತಿಸದವರು ಮನುಷ್ಯರೇ ಇಲ್ಲ, ನಾನು ನನ್ನ ಮೆಂಟರ್ ಧೋನಿ ವಿರುದ್ದ ಸೋತಿದ್ದೇನೆ, ನನಗೆ ಇದರಿಂದ ಬೇಸರವಿಲ್ಲ ಎನ್ನುವ ಮಾತು ಪಂದ್ಯ ಮುಗಿದ ನಂತ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಂದ ಬಂದಿದೆ. ಇದೇ ರೀತಿಯ ಗೌರವವನ್ನು ಅಂತರಾಷ್ಟ್ರೀಯ ಕ್ರಿಕೆಟಿಗರೂ ಧೋನಿ ಮೇಲೆ ಹೊಂದಿದ್ದಾರೆ.
ಧೋನಿ ನಿವೃತ್ತಿಯಾಗುತ್ತಾರೋ ಅಥವಾ ಮುಂದುವರಿಯುತ್ತಾರೋ
ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯಾಗುತ್ತಾರೋ ಅಥವಾ ಮುಂದುವರಿಯುತ್ತಾರೋ ಅದು ಅವರ ವಯಸ್ಸು, ದೇಹ, ಆರೋಗ್ಯದ ಮೇಲೆ ಅವಲಂಬಿತವಾಗಿರುವುದು. ಆದರೆ, ಇಷ್ಟು ವರ್ಷ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ್ದು, ಅವರ ಪ್ರೀತಿಯನ್ನು ಪಡೆದದ್ದು ಅಸಮಾನ್ಯವಾದದ್ದು. ಸಾಮಾನ್ಯವಾಗಿ ಹಿಂದಿ ಮತ್ತು ಹಿಂದಿ ಭಾಷಿಗರಿಗೆ ಹೆಚ್ಚಿನ ಮಣೆಹಾಕದ ತಮಿಳುನಾಡಿನವರು ಧೋನಿಯನ್ನು ತಮ್ಮ ಮನೆಯವರೇ ಎಂದು ಪರಿಗಣಿಸಿಯಾಗಿದೆ. ಕ್ರಿಕೆಟ್ ಅಭಿಮಾನಿಗಳು ಅದರಲ್ಲೂ ತಲಾ ಧೋನಿ ಫ್ಯಾನ್ಸ್ ಅವರಲ್ಲಿ ಕ್ರಿಕೆಟ್ ಇನ್ನೂ ಬಾಕಿಯಿದೆ ಎಂದು ಹೇಳುತ್ತಿದ್ದಾರೆ.












Click it and Unblock the Notifications