Mohammed Siraj: ಮೊಹಮ್ಮದ್ ಸಿರಾಜ್ ಈಗ ವಿಶ್ವದ ನಂಬರ್ 1 ಬೌಲರ್
ಏಷ್ಯಾ ಕಪ್ 2023 ರ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಮೊಹಮ್ಮದ್ ಸಿರಾಜ್ ಹೊಸ ನಂಬರ್ 1 ಏಕದಿನ ಬೌಲರ್ ಆಗಿದ್ದಾರೆ. 2023 ರ ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ಇದು ಭಾರತ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದೆ.
ಕೊಲಂಬೊದಲ್ಲಿ ನಡೆದ ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ 21 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ ಅದ್ಭುತ ಪ್ರದರ್ಶನ ನೀಡಿದ ನಂತರ ಮೊಹಮ್ಮದ್ ಸಿರಾಜ್ ಐಸಿಸಿ ಪುರುಷರ ಏಕದಿನ ಆಟಗಾರರ ಶ್ರೇಯಾಂಕದಲ್ಲಿ ಬೌಲರ್‌ಗಳಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಎರಡನೇ ಸ್ಥಾನಕ್ಕೆ ಕುಸಿದ ಹೇಜಲ್‌ವುಡ್
2023ರ ಜನವರಿಯಲ್ಲಿ ಕೂಡ ಮೊಹಮ್ಮದ್ ಸಿರಾಜ್ ನಂಬರ್ 1 ಬೌಲರ್ ಸ್ಥಾನವನ್ನು ಅಲಂಕರಿಸಿದ್ದರು. ಆದರೆ ಮಾರ್ಚ್ ತಿಂಗಳಿನಲ್ಲಿ ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ ಮೊದಲ ಸ್ಥಾನ ಅಲಂಕರಿಸುವ ಮೂಲಕ ಸಿರಾಜ್ ಕುಸಿತ ಕಂಡಿದ್ದರು. ಈಗ ಬರೋಬ್ಬರಿ 8 ಸ್ಥಾನಗಳನ್ನು ಏರುವ ಮೂಲಕ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ.
ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಸಿರಾಜ್ 6 ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾ ತಂಡವನ್ನು 50 ರನ್‌ಗಳಿಗೆ ಆಲೌಟ್ ಮಾಡಲು ಸಹಾಯ ಮಾಡಿದ್ದರು. ಈ ಪಂದ್ಯದಲ್ಲಿ 10 ವಿಕೆಟ್‌ಗಳ ಗೆಲುವು ಸಾಧಿಸಿದ ಭಾರತ ತಂಡ 8ನೇ ಬಾರಿಗೆ ಏಷ್ಯಾಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು.
ಏಷ್ಯಾಕಪ್ ಹೊರತುಪಡಿಸಿ, ಕಳೆದ ವಾರದಲ್ಲಿ ದಕ್ಷಿಣ ಆಫ್ರಿಕಾ vs ಆಸ್ಟ್ರೇಲಿಯಾ, ಇಂಗ್ಲೆಂಡ್ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ಕೂಡ ನಡೆದಿತ್ತು. ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ರ್‍ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದಾರೆ. ನ್ಯೂಜಿಲೆಂಡ್‌ನ ಮ್ಯಾಟ್ ಹೆನ್ರಿ ಕೂಡ ಒಂದು ಸ್ಥಾನ ಏರಿಕೆ ಕಂಡಿದ್ದು 7ನೇ ಸ್ಥಾನಕ್ಕೆ ಜಿಗಿದಿದ್ದಾರೆ.
694 ಅಂಕಗಳನ್ನು ಪಡೆದಿರುವ ಮೊಹಮ್ಮದ್ ಸಿರಾಜ್ ಮೊದಲ ಸ್ಥಾನದಲ್ಲಿದ್ದರೆ, 678 ಅಂಕಗಳೊಂದಿಗೆ ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ 2ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಟ್ರೆಂಟ್ ಬೋಲ್ಟ್ 677 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ ಒಂದು ಸ್ಥಾನ ಏರಿಕೆ
ಏಷ್ಯಾಕಪ್ ಪಂದ್ಯಾವಳಿಯಲ್ಲಿ ಶತಕ ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದಾರೆ. 9ನೇ ಸ್ಥಾನದಲ್ಲಿದ್ದ ಕೊಹ್ಲಿ ಒಂದು ಸ್ಥಾನ ಏರಿಕೆ ಕಂಡಿದ್ದು ಸದ್ಯ 8ನೇ ಸ್ಥಾನದಲ್ಲಿದ್ದಾರೆ. ಶುಭಮನ್ ಗಿಲ್ 2ನೇ ಸ್ಥಾನದಲ್ಲಿದ್ದು, ಪಾಕಿಸ್ತಾನದ ಬಾಬರ್ ಅಜಂ ಸದ್ಯ ಮೊದಲನೇ ಸ್ಥಾನದಲ್ಲಿದ್ದಾರೆ.












Click it and Unblock the Notifications