Ind vs Aus: ಸುಲಭವಾಗಿ ಗೆಲ್ಲಬಹುದಾದ ಅವಕಾಶ ಕಳೆದುಕೊಂಡ ಭಾರತ!
ಬಾಕ್ಸಿಂಗ್ ಡೇ ಟೆಸ್ಟ್‌ನ ನಾಲ್ಕನೇ ದಿನದಾಟ ಮುಕ್ತಾಯವಾಗಿದ್ದು ಆಸ್ಟ್ರೇಲಿಯಾ ದಿನದಾಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 228 ರನ್ ಕಲೆಹಾಕಿದ್ದು ಒಟ್ಟಾರೆ 333 ರನ್‌ಗಳ ಮುನ್ನಡೆ ಪಡೆದುಕೊಂಡಿದೆ. ಐದನೇ ದಿನ ಆಸ್ಟ್ರೇಲಿಯಾ ಬ್ಯಾಟಿಂಗ್ ಮುಂದುವರೆಸಿತ್ತಾ ಇಲ್ಲಾ ಡಿಕ್ಲೇರ್ ಮಾಡಿಕೊಂಡು ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸುತ್ತಾ ಎಂದು ಕಾದು ನೋಡಬೇಕಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 474 ರನ್ ಗಳಿಸಿದ್ದರೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 369 ರನ್‌ಗಳಿಗೆ ಆಲೌಟ್ ಆಗಿತ್ತು.
ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಬೌಲಿಂಗ್ ಅತ್ಯುತ್ತಮವಾಗಿತ್ತು, 91 ರನ್ ಗಳಿಸುವಷ್ಟರಲ್ಲಿ ಆಸ್ಟ್ರೇಲಿಯಾ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು, ಬುಮ್ರಾ, ಸಿರಾಜ್, ಆಕಾಶ್ ದೀಪ್ ಉತ್ತಮವಾಗಿ ಬೌಲಿಂಗ್ ಮಾಡಿದರು. ಆದರೆ ಫೀಲ್ಡಿಂಗ್‌ನಲ್ಲಿ ಭಾರತದ ಆಟಗಾರರು ಮಾಡಿದ ಎಡವಟ್ಟು ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿತು.

ಮೂರು ಕ್ಯಾಚ್ ಬಿಟ್ಟ ಯಶಸ್ವಿ ಜೈಸ್ವಾಲ್
ನಾಲ್ಕನೇ ದಿನ ಭಾರತ ಒಟ್ಟು ಐದು ಕ್ಯಾಚ್‌ಗಳನ್ನು ಕೈಬಿಟ್ಟಿತು. ಅದರಲ್ಲಿ ಒಂದು ನೋಬಾಲ್ ಆಗಿದ್ದರೂ ಉಳಿದ ನಾಲ್ಕು ಕ್ಯಾಚ್‌ಗಳು ಭಾರತಕ್ಕೆ ದುಬಾರಿಯಾದವು. ಯಶಸ್ವಿ ಜೈಸ್ವಾಲ್ ಪ್ರಮುಖ ಮೂರು ಕ್ಯಾಚ್ ಬಿಟ್ಟಿದ್ದು ನಾಯಕ ರೋಹಿತ್ ಶರ್ಮಾ ಕೋಪಕ್ಕೆ ಕಾರಣವಾಯಿತು. ಜೈಸ್ವಾಲ್ ಮೊದಲು ಉಸ್ಮಾನ್ ಖವಾಜಾ ಅವರ ಕ್ಯಾಚ್ ಕೈಬಿಟ್ಟರು, ಆದರೆ ಖವಾಜಾ ಹೆಚ್ಚು ರನ್ ಗಳಿಸದೆ ಔಟಾದ ಕಾರಣ ಭಾರತಕ್ಕೆ ಹೆಚ್ಚಿನ ನಷ್ಟವೇನೂ ಆಗಲಿಲ್ಲ. ಆದರೆ ಮಾರ್ನಸ್ ಲ್ಯಾಬುಸ್ಚಾಗ್ನೆ ಕ್ಯಾಚ್ ಕೈಬಿಟ್ಟಿದ್ದು ಭಾರತಕ್ಕೆ ದುಬಾರಿಯಾಗಿತ್ತು.
ಒಂದು ವೇಳೆ ಲ್ಯಾಬುಸ್ಚಾಗ್ನೆ ಅವರ ವಿಕೆಟ್ ಪಡೆದಿದ್ದರೆ ಆಸ್ಟ್ರೇಲಿಯಾ 150 ರನ್‌ಗಳ ಒಳಗೆ ಆಲೌಟ್ ಆಗುವ ಸಾಧ್ಯತೆ ಇತ್ತು. ಅದಾದ ಬಳಿಕವೂ ಸಿಲ್ಲಿ ಪಾಯಿಂಟ್‌ನಲ್ಲಿ ಪ್ಯಾಟ್ ಕಮಿನ್ಸ್ ಅವರ ಕ್ಯಾಚ್ ಕೂಡ ಕೈಬಿಟ್ಟಿದ್ದ ಭಾರತಕ್ಕೆ ದುಬಾರಿಯಾಯಿತು. ಬಳಿಕ ಮೊಹಮ್ಮದ್ ಸಿರಾಜ್ ನಾಥನ್ ಲಿಯಾನ್ ಅವರ ಕ್ಯಾಚ್ ಕೈಬಿಟ್ಟಿದ್ದು ಗಾಯದ ಮೇಲೆ ಉಪ್ಪು ಸವರಿದಂತಾಗಿತ್ತು.
ನಾಥನ್ ಲಿಯಾನ್ ಔಟಾಗಿದ್ದರೆ ಆಸ್ಟ್ರೇಲಿಯಾ ಇನ್ನೂ 55 ರನ್ ಕಡಿಮೆ ಗಳಿಸಿರುತ್ತಿತ್ತು. ಆದರೆ ಆಸ್ಟ್ರೇಲಿಯಾ ಈಗ ನಾಥನ್ ಲಿಯಾನ್‌ನ ಅಮೋಘ ಇನ್ನಿಂಗ್ಸ್ ನೆರವಿನಿಂದ 333 ರನ್‌ಗಳ ಮುನ್ನಡೆ ಪಡೆಯಲು ಕಾರಣವಾದರು. ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 9 ವಿಕೆಟ್ ಕಳೆದುಕೊಂಡು 228 ರನ್ ಗಳಿಸಿದೆ. ಸ್ಕಾಟ್ ಬೊಲ್ಯಾಂಡ್ ಅಜೇಯ 10 ರನ್ ಗಳಿಸಿದ್ದು, ನಾಥನ್ ಲಿಯಾನ್ ಅಜೇಯ 41 ರನ್ ಗಳಿಸಿದ್ದು ಐದನೇ ದಿನಕ್ಕೆ ವಿಕೆಟ್ ಉಳಿಸಿಕೊಂಡಿದ್ದಾರೆ.
ಟೀಂ ಇಂಡಿಯಾ ಈ ಟೆಸ್ಟ್ ಗೆಲ್ಲಬೇಕು ಎಂದರೆ ಭಾರತ ಈ ಬೃಹತ್ ಮೊತ್ತವನ್ನು ಬೆನ್ನಟ್ಟಬೇಕಿದೆ. ಆಸ್ಟ್ರೇಲಿಯಾ ಡಿಕ್ಲೇರ್ ಮಾಡುತ್ತಾ ಅಥವಾ ಇನ್ನಷ್ಟು ರನ್ ಕಲೆಹಾಕುತ್ತಾ ನೋಡಬೇಕಿದೆ. ಭಾರತ ನಿರ್ಭೀತಿಯಿಂದ ಬ್ಯಾಟಿಂಗ್ ಮಾಡಿದರೆ ಮಾತ್ರ ಪಂದ್ಯ ಗೆಲ್ಲುವ ಬಗ್ಗೆ ಯೋಚಿಸಬಹುದು. ಇಲ್ಲವಾದಲ್ಲೊ ಡ್ರಾ ಕಡೆ ನೋಡಬಹುದು.












Click it and Unblock the Notifications