MI Vs RR IPL 2026: ರಾಜಸ್ಥಾನ್ ರಾಯಲ್ಸ್ - ಮುಂಬೈ ಇಂಡಿಯನ್ಸ್ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಭೀತಿ
MI Vs RR IPL 2026: ಗುವಾಹಟಿಯ ಬರ್ಸಾಪಾರ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಐಪಿಎಲ್ 19ನೇ ಆವೃತ್ತಿಯ 13ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆದರೆ, ಈ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಹಾಗಾದ್ರೆ, ಹವಾಮಾನ ಇಲಾಖೆ ಹೇಳೋದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಗುವಾಹಟಿಯ ಬರ್ಸಾಪಾರ ಕ್ರೀಡಾಂಗಣದಲ್ಲಿ ಇಂದು (ಏಪ್ರಿಲ್ 7) ಸಂಜೆ ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆದರೆ, ಅಭಿಮಾನಿಗಳಲ್ಲಿ ಸಣ್ಣದೊಂದು ಆತಂಕ ಮನೆಮಾಡಿದೆ. ಅದಕ್ಕೆ ಕಾರಣ ವರುಣ ದೇವ.

ಆರ್‌ಆರ್-ಮುಂಬೈ ಪಂದ್ಯಕ್ಕೆ ಮಳೆ ಭೀತಿ
ಸೋಮವಾರವಷ್ಟೇ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಬೇಕಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಮಳೆಯಿಂದಾಗಿ ಕೇವಲ 3.4 ಓವರ್‌ಗಳಿಗೆ ಅಂತ್ಯಗೊಂಡು ರದ್ದಾಗಿತ್ತು. ಈಗ ಗುವಾಹಟಿಯಲ್ಲೂ ಅಂತಹದ್ದೇ ವಾತಾವರಣ ನಿರ್ಮಾಣವಾಗಿದೆ. ಅಕ್ಯುವೆದರ್ ವರದಿಯ ಪ್ರಕಾರ, ಇಂದು ಗುವಾಹಟಿಯಲ್ಲಿ ಮಳೆಯಾಗುವ ಸಾಧ್ಯತೆ ಶೇಕಡ 75 ರಷ್ಟಿದೆ.
ಅಗ್ರಸ್ಥಾನದ ಮೇಲೆ ಕಣ್ಣಿಟ್ಟ ರಾಜಸ್ಥಾನ್
ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ ಇರುವುದರಿಂದ ಟಾಸ್ ಪ್ರಕ್ರಿಯೆ ವಿಳಂಬವಾಗಬಹುದು ಅಥವಾ ಪಂದ್ಯಕ್ಕೆ ಅಡ್ಡಿಯಾಗಬಹುದು. ತಡರಾತ್ರಿ ಕೂಡ ಮಳೆಯಾಗುವ ಸಾಧ್ಯತೆ ಇರುವುದರಿಂದ ಪಂದ್ಯ ಪೂರ್ಣಗೊಳ್ಳುವ ಬಗ್ಗೆ ಅನುಮಾನಗಳಿವೆ. ರಾಜಸ್ಥಾನ್ ರಾಯಲ್ಸ್ ಪ್ರಸ್ತುತ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದರೆ, ರಾಜಸ್ಥಾನ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಹೀಗಾಗಿ ಆರ್‌ಆರ್ ತಂಡದ ಅಭಿಮಾನಿಗಳು ಸಂಪೂರ್ಣ ಪಂದ್ಯ ನಡೆಯಲಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡಕ್ಕೆ ಹಾರ್ದಿಕ್ ಕಮ್‌ಬ್ಯಾಕ್
ಮತ್ತೊಂದೆಡೆ, ಮೊದಲ ಪಂದ್ಯದಲ್ಲಿ ಗೆದ್ದು ಎರಡನೇ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೋತಿರುವ ಮುಂಬೈ ಇಂಡಿಯನ್ಸ್ 6ನೇ ಸ್ಥಾನದಲ್ಲಿದೆ. ತಂಡಕ್ಕೆ ಶುಭ ಸುದ್ದಿಯೆಂದರೆ, ಅನಾರೋಗ್ಯದಿಂದ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದ ನಾಯಕ ಹಾರ್ದಿಕ್ ಪಾಂಡ್ಯ ಈಗ ಸಂಪೂರ್ಣ ಫಿಟ್ ಆಗಿದ್ದಾರೆ. ಅವರು ಇಂದಿನ ಪಂದ್ಯದಲ್ಲಿ ಆಡುವುದು ಖಚಿತ ಎಂದು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ತಿಳಿಸಿದ್ದಾರೆ.
ಮಳೆಯಿಂದ ಪಂದ್ಯ ರದ್ದಾದ್ರೆ ಮುಂದಿನ ನಿಲುವೇನು?
ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಅಥವಾ ಫಲಿತಾಂಶ ಬರದಿದ್ದರೆ, ಐಪಿಎಲ್ ನಿಯಮದಂತೆ ಎರಡೂ ತಂಡಗಳಿಗೆ ತಲಾ 1 ಅಂಕವನ್ನು ನೀಡಲಾಗುತ್ತದೆ. ಪೂರ್ಣ ಪ್ರಮಾಣದ 20 ಓವರ್‌ಗಳ ಪಂದ್ಯವನ್ನು ನೋಡಲು ಕ್ರಿಕೆಟ್ ಪ್ರೇಮಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಅಲ್ಲದೆ, ಮಳೆರಾಯನ ಅಡ್ಡಿಯಾಗದಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.












Click it and Unblock the Notifications