ಕಲಬುರಗಿಯಲ್ಲಿ ಟೆನ್ನಿಸ್ ಟೂರ್ನಿ ಆರಂಭ, ಪ್ರವೇಶ ಉಚಿತ
ಕಲಬುರಗಿ, ನವೆಂಬರ್ 28; ಕಲಬುರಗಿ ನಗರದಲ್ಲಿ ಅಲ್ಟ್ರಾಟೆಕ್ ಐ.ಟಿ.ಎಫ್ ಕಲಬುರಗಿ ಓಪನ್ ಮೆನ್ಸ್ ಪುರುಷರ ಕ್ರೀಡಾಕೂಟ 2023ಕ್ಕೆ ಚಾಲನೆ ಸಿಕ್ಕಿದೆ. 32 ಕ್ರೀಡಾಟಪಟುಗಳು ಕಲಬುರಗಿ ಓಪನ್ ಕಿರೀಟಕ್ಕೆ ಸೆಣಸಲಿದ್ದಾರೆ. 8 ಸ್ಪರ್ಧಿಗಳು ಕ್ವಾಲಿಫೈ ಪಂದ್ಯವಾಡಿ ಪ್ರಮುಖ ಘಟಕ್ಕೆ ತಲುಪಿದ್ದಾರೆ.
ಮಂಗಳವಾರ ಚಂಪಾ ಕ್ರೀಡಾಂಗಣದ ಟೆನಿಸ್ ಕೋರ್ಟ್‌ನಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಬಲೂನ್‌ಗಳನ್ನು ಹಾರಿಬಿಡುವ ಮೂಲಕ ಟೆನ್ನಿಸ್ ಟೂರ್ನಿಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಎಸ್‌ಪಿ ಅಡ್ಡೂರು ಶ್ರೀನಿವಾಸಲು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಗಣ್ಯರು ಮುಖ್ಯ ಪಂದ್ಯಾವಳಿಗೆ ಆಯ್ಕೆಯಾದ ಕ್ರೀಡಾಪಟುಗಳು, ಅಂಪೈರ್, ಲೈನ್ ಅಂಪೈರ್, ಬಾಲ್ ಬಾಯ್ಸ್‌ಗಳಿಗೆ ಹಸ್ತಲಾಘವ ಮಾಡಿ ಪಂದ್ಯಕ್ಕೆ ಶುಭ ಕೋರಿದರು. ಭಾರತದ ಆದಿಲ್ ಶಾ ಮತ್ತು ಆದಿಲ್ ಕಲ್ಯಾಣಪುರ ನಡುವಿನ ಮೊದಲನೇ ಮುಖ್ಯ ಪಂದ್ಯಕ್ಕೆ ಬಿ. ಫೌಜಿಯಾ ತರನ್ನುಮ್ ಟಾಸ್ ಹಾರಿಸಿದರು.
ಕ್ರೀಡಾಪಟುಗಳಿಗೆ ಪ್ರೋತ್ಸಾಹ; ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, "ದೇಶಗಳ ನಡುವೆ ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳು ಸಹಕಾರಿಯಾಗಲಿವೆ. ಗೆಲುವು-ಸೋಲು ಕ್ರೀಡೆಯಲ್ಲಿ ಸಹಜ. ಅಚ್ಚುಕಟ್ಟಾಗಿ ಕ್ರೀಡಾಕೂಟ ಆಯೋಜಿಸಿದ ಜಿಲ್ಲಾಡಳಿತದ ಕಾರ್ಯ ಶ್ಲಾಘನೀಯ" ಎಂದರು.
ಕೆ.ಪಿ.ಟಿ.ಸಿ.ಎಲ್ ಎಂ.ಡಿ. ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ ಮಾತನಾಡಿ, "ಈ ಹಿಂದೆ ತಾವು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ 2002, 2007ರಲ್ಲಿ ಐ.ಟಿ.ಎಫ್. ಟೂರ್ನಿ ಆಯೋಜಿಸಲಾಗಿತ್ತು. ಕೋರ್ಟ್ ಸೇರಿದಂತೆ ಎಲ್ಲಾ ರೀತಿಯ ಮೂಲಸೌಕರ್ಯ ಇದೀಗ ಮತ್ತಷ್ಟು ಉತ್ತಮಗೊಂಡಿದೆ. ಕ್ರೀಡಾಪಟುಗಳ ಪ್ರತಿಭೆ ಅನಾವರಣಕ್ಕೆ ಪ್ರಾಯೋಜಕತ್ವದ ಅವಶ್ಯವಿರುವ ಕಾರಣ ಸ್ಥಳೀಯ ಸಿಮೆಂಟ್ ಕಂಪನಿಗಳು ಮುಂದೆ ಬರಬೇಕು" ಎಂದರು.
ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮಾತನಾಡಿ, "ಅಂತಾರಾಷ್ಟ್ರೀಯ ಟೂರ್ನಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ವಸತಿ ನಿಲಯದ ಮಕ್ಕಳಿಗೆ 3 ದಿನ ವಿಶೇಷ ತರಬೇತಿ ನೀಡಿ ಬಾಲ್ ಬಾಯ್ಸ್ ಆಗಿ ನಿಯೋಜಿಸಿದೆ. ಪಂದ್ಯ ವೀಕ್ಷಣೆ ಉಚಿತವಾಗಿದೆ. ಜಿಲ್ಲೆಯ ಸಾರ್ವಜನಿಕರು, ಶಾಲಾ-ಕಾಲೇಜು ಮಕ್ಕಳು ಬಂದು ಕ್ರೀಡಾಪಟುಗಳನ್ನು ಹುರಿದುಂಬಿಸಬೇಕು" ಎಂದು ಕರೆ ನೀಡಿದರು.
32 ಜನ ಕ್ರೀಡಾಟಪಟುಗಳು ಕಲಬುರಗಿ ಓಪನ್ ಕಿರೀಟಕ್ಕೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಸಲಿದ್ದಾರೆ. 8 ಜನ ಕ್ವಾಲಿಪೈ ಪಂದ್ಯವಾಡಿ ಪ್ರಮುಖ ಘಟಕ್ಕೆ ತಲುಪಿದರೆ, 20 ಜನ ಅಟಗಾರರು ಐ.ಟಿ.ಎಫ್. ರ‍್ಯಾಂಕಿಂಗ್ ಮತ್ತು 4 ಜನ ವೈಲ್ಡ್ ಕಾರ್ಡ್ ಪಡೆದು ಮುಖ್ಯ ಪಂದ್ಯಗಳಿಗೆ ನೇರ ಪ್ರವೇಶ ಪಡೆದಿದ್ದಾರೆ.
ಕಲಬುರಗಿಯಲ್ಲಿ ಭಾನುವಾರ ಆರಂಭಗೊಂಡ ಐ. ಟಿ. ಎಫ್. ಕಲಬುರಗಿ ಓಪನ್-2023 ಟೂರ್ನಿಯ ಮೊದಲ ಸುತ್ತಿನ ಅರ್ಹತಾ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಎಲ್ಲ ಆಟಗಾರರು ಸುಲಭ ಜಯದೊಂದಿಗೆ 2ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. 2ನೇ & ಅಂತಿಮ ಸುತ್ತಿನ ಅರ್ಹತಾ ಪಂದ್ಯಗಳು ಸೋಮವಾರ ನಡೆದಿದ್ದವು.
ಐ.ಟಿ.ಎಫ್ ಕಲಬುರಗಿ ಓಪನ್ ಪುರುಷರ ಅಂತಾರಾಷ್ಟ್ರೀಯ ಟೆನಿಸ್ ಪಂದ್ಯಾವಳಿಗಳು ನವೆಂಬರ್ 26 ರಿಂದ ಡಿಸೆಂಬರ್ 3ರ ವರೆಗೆ ಬೆಳಗ್ಗೆ 9.30 ರಿಂದ ಸಾಯಂಕಾಲ 5 ಗಂಟೆ ವರೆಗೆ ನಡೆಯಲಿದೆ. ಕ್ರೀಡಾಕೂಟ ವೀಕ್ಷಣೆ ಉಚಿತವಾಗಿದ್ದು, ಜಿಲ್ಲೆಯ ಸಾರ್ವಜನಿಕರು, ಶಾಲಾ-ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಪಂದ್ಯಾವಳಿಯನ್ನು ವೀಕ್ಷಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಲಾಗಿದೆ.












Click it and Unblock the Notifications