Big Bash League: ಅಪಾಯಕಾರಿಯಾಗಿ ವರ್ತಿಸಿದ ಪಿಚ್: ಆಸ್ಟ್ರೇಲಿಯಾದಲ್ಲಿ ಅರ್ಧಕ್ಕೆ ನಿಂತ ಕ್ರಿಕೆಟ್ ಪಂದ್ಯ!
ಸಾಮಾನ್ಯವಾಗಿ ಮಳೆಯಿಂದಾಗಿ ಪಂದ್ಯಗಳು ಅರ್ಧಕ್ಕೆ ನಿಲ್ಲುವುದು ಗೊತ್ತಿರುತ್ತದೆ. ಆದರೆ ಪಿಚ್ ಸರಿಯಿಲ್ಲ ಎಂದು ಪಂದ್ಯ ಅರ್ಧಕ್ಕೆ ನಿಂತ ಬಗ್ಗೆ ಕೇಳೀದ್ದೀರಾ? ಇಂತಹದ್ದೊಂದು ಅಪರೂಪದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಆಸ್ಟ್ರೇಲಿಯಾದಲ್ಲಿ ಈಗ ಬಿಗ್ ಬ್ಯಾಷ್ ಲೀಗ್‌ನ ಜ್ವರ ಹೆಚ್ಚಾಗಿದೆ. ಭಾರತದಲ್ಲಿ ಐಪಿಎಲ್ ನಡೆಯುವಂತೆ ಆಸ್ಟ್ರೇಲಿಯಾದಲ್ಲಿ ಪ್ರತಿ ವರ್ಷ ಬಿಗ್ ಬ್ಯಾಷ್ ಲೀಗ್ ನಡೆಯುತ್ತದೆ. 8 ತಂಡಗಳು ಪ್ರತಿಷ್ಠಿತಿ ಪ್ರಶಸ್ತಿಗಾಗಿ ಹಣಾಹಣಿ ನಡೆಸುತ್ತವೆ. ಡಿಸೆಂಬರ್ 7 ರಂದು ಬಿಗ್ ಬ್ಯಾಷ್ ಲೀಗ್ ಪಂದ್ಯಗಳು ಆರಂಭವಾಗಿವೆ. ಭಾರತ ಹೊರತುಪಡಿಸಿ ಉಳಿದ ಎಲ್ಲಾ ದೇಶದ ಪ್ರಮುಖ ಕ್ರಿಕೆಟಿಗರು ಕೂಡ ಈ ಪಂದ್ಯಾವಳಿಯಲ್ಲಿ ಆಡುತ್ತಾರೆ.

ಭಾನುವಾರ ಗೀಲಾಂಗ್‌ನ ಸೈಮಂಡ್ಸ್ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯ ನೋಡಲು ಬಂದಿದ್ದ ಅಭಿಮಾನಿಗಳಿಗೆ ಅಚ್ಚರಿ ಜೊತೆ ನಿರಾಸೆ ಕೂಡ ಕಾದಿತ್ತು. ಪರ್ತ್ ಸ್ಕಾರ್ಚರ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ನಡುವೆ ನಡೆಯುತ್ತಿದ್ದ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಇದಕ್ಕೆ ಕಾರಣ ಪಿಚ್. ಹೌದು, ಪಿಚ್ ಅಪಾಯಕಾರಿಯಾಗಿ ವರ್ತಿಸಲು ಆರಂಭಿಸಿದ್ದರಿಂದ ಪಂದ್ಯವನ್ನು ರದ್ದು ಮಾಡಲಾಗಿದೆ.
A big bash league match is suspended because of unsafe pitch😲 pic.twitter.com/1Qse1lxNPL
— Kishan18 (@Kishan__VK18) December 10, 2023
ಅಷ್ಟಕ್ಕೂ ಆಗಿದ್ದೇನು?
ಪರ್ತ್ ಸ್ಕಾರ್ಚರ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಮೆಲ್ಬೋರ್ನ್ ರೆನೆಗೇಡ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಪರ್ತ್ ಸ್ಕಾರ್ಚರ್ಸ್ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು. ನಂತರ ಪಂದ್ಯದ 5ನೇ ಓವರ್ ನಲ್ಲಿ 18 ರನ್ ಗಳಿಸಿದ್ದಾಗ ಎರಡನೇ ವಿಕೆಟ್ ಪತನವಾಯಿತು.
ಆದರೆ ಚೆಂಡು ಅಂದುಕೊಂಡದ್ದಕ್ಕಿಂತ ಹೆಚ್ಚಾಗಿ ಬೌನ್ಸ್ ಆಗುತ್ತಿತ್ತು, ಕೆಲವೊಮ್ಮೆ ಚಂಡು ನಿಂತು ಬರುತ್ತಿತ್ತು. ಬ್ಯಾಟಿಂಗ್ ಮಾಡುವುದು ತೀರಾ ಕಷ್ಟವಾಗಿತ್ತು. ಅಲ್ಲದೆ ಆಟಗಾರರು ಗಾಯಗೊಳ್ಳುವ ಸಾಧ್ಯತೆ ಹೆಚ್ಚಾಗಿತ್ತು.
7ನೇ ಓವರ್ ನ 5ನೇ ಎಸೆತವನ್ನು ಬೌಲ್ ಮಾಡಿದ ನಂತರ ಕೀಪಿಂಗ್ ಮಾಡುತ್ತಿದ್ದ ಕ್ವಿಂಟನ್ ಡಿ ಕಾಕ್ ಕೂಡ ಪಿಚ್ ವರ್ತನೆ ನೋಡಿ ಶಾಕ್ ಆದರು. ಅದಾಗಲೆ ಬ್ಯಾಟರ್ ಆರನ್ ಹಾರ್ಡಿ ತಾಳ್ಮೆ ಕಳೆದುಕೊಂಡಿದ್ದರು, ಪಿಚ್ ಬಗ್ಗೆ ಅಂಪೈರ್ ಬಳಿ ದೂರಿದರು.
ಬ್ಯಾಟರ್ ಮನವಿಯನ್ನು ಕೇಳಿದ ಆನ್‌ಫೀಲ್ಡ್ ಅಂಪೈರ್ ಗಳು ಚರ್ಚೆ ಮಾಡಿದ ಬಳಿಕ ಆಟಗಾರರಿಗೆ ಆಟ ನಿಲ್ಲಿಸಿ ಮೈದಾನದಿಂದ ಹೊರ ನಡೆಯಲು ಸೂಚನೆ ನೀಡಿದರು. ನಂತರ ಎರಡೂ ತಂಡಗಳ ನಾಯಕರು, ಕೋಚ್‌ಗಳು ಚರ್ಚೆ ಮಾಡಿದ ಬಳಿಕ ಪಂದ್ಯವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಯಿತು.
ಪಿಚ್ ಅಪಾಯಕಾರಿಯಾಗಲು ಕಾರಣವೇನು?
ಸೈಮಂಡ್ಸ್ ಸ್ಟೇಡಿಯಂನಲ್ಲಿ ರಾತ್ರಿ ಮಳೆಯಾಗಿದೆ. ಕವರ್ ಅಡಿಯಲ್ಲಿ ನೀರು ನುಗ್ಗಿದ್ದರಿಂದ ಪಿಚ್ ಒದ್ದೆಯಾಗಿತ್ತು ಎನ್ನಲಾಗಿದೆ, ಆದ್ದರಿಂದ ಚೆಂಡು ಮೇಲ್ಮೈ ಮೇಲೆ ಬಿದ್ದಾಗಲೆಲ್ಲಾ ಚೆಂಡು ವಿಚಿತ್ರವಾಗಿ ಪುಟಿಯುತ್ತದೆ. ಆಟಗಾರರು ಪಿಚ್ ವರ್ತಿಸುತ್ತಿದ್ದ ರೀತಿ ನೋಡಿ ಶಾಕ್ ಆಗಿದ್ದರು. ಕೊನೆಗೆ ಪಂದ್ಯವನ್ನೇ ರದ್ದು ಮಾಡಲಾಗಿದೆ.
ಕೊನೆಯ ಎಸೆತವು ಅಸ್ವಾಭಾವಿಕವಾಗಿ ವರ್ತಿಸಿತು, ಅದು ಅಪಾಯಕಾರಿಯಾಗಿ ವರ್ತಿಸಿತು ಮತ್ತು ನಾವು ಆಟವನ್ನು ನಿಲ್ಲಿಸಲೇಬೇಕಾಯಿತು. ನಾವು ಪಿಚ್ ಅನ್ನು ನೋಡಿದ್ದೇವೆ, ಅದು ಆಡುವಂತೆ ಇರಲಿಲ್ಲ, ನಾವು ಸಮಾಲೋಚಿಸಿ ಅಂತಿಮ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಆನ್‌ಫೀಲ್ಡ್ ಅಂಪೈರ್‌ಗಳು ಹೇಳಿದ್ದಾರೆ. ಪಂದ್ಯ ರದ್ದಾಗಿದ್ದು, ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಳ್ಳಲಿವೆ.












Click it and Unblock the Notifications