ಕ್ಯಾಮೆರಾ, ಫೋಕಸ್, ಲೈವ್ ಪ್ರೊಡಕ್ಷನ್; ಕ್ರೀಡಾ ಪ್ರೇಮಿಗಳಿಗೆ ಇದೊಂದು ಅದ್ಭುತ ವೃತ್ತಿ ಆಯ್ಕೆ
ನೀವು ಕ್ರೀಡಾ ಪ್ರೇಮಿಗಳಾಗಿದ್ದರೆ ನಿಮ್ಮ ಈ ಆಸಕ್ತಿಗೆ ಕೇವಲ ಕ್ರೀಡಾಪಟುಗಳು ಮಾತ್ರ ಕಾರಣನಾ? ಯೋಚಿಸಿ. ಕ್ರಿಕೆಟ್‌ನಲ್ಲಿ ಪ್ರತಿಯೊಂದು ಎಸೆತವನ್ನೂ ಕುತೂಹಲದಿಂದ ಗಮನಿಸುವುದು, ಕಬಡ್ಡಿಯಲ್ಲಿ ರೈಡ್ ಮತ್ತು ಟ್ಯಾಕಲ್‌ಗಳ ರೋಚಕತೆಯನ್ನು ಸವಿಯುವುದು, ಟೆನಿಸ್‌ನಲ್ಲಿ ಸರ್ವ್ ಮತ್ತು ರಿಟರ್ನ್‌ಗಳ ವೇಗಕ್ಕೆ ಬೆರಗಾಗುವುದು ಇವೆಲ್ಲವೂ ಕ್ರೀಡಾ ಪ್ರೇಮಿಗಳಿಗೆ ಒಂದು ಸಂಭ್ರಮವೇ ಸರಿ. ಇದಕ್ಕೆಲ್ಲ ಕಾರಣ ಖಂಡಿತ ನಮ್ಮ ಕ್ರೀಡಾಪಟುಗಳೇ.. ಆದರೆ ಇಂತಹ ಪಂದ್ಯಗಳ ಜೋಷ್ ಹೆಚ್ಚಿಸುವ ದೊಡ್ಡದಾದ ತಂಡವೊಂದು ಕೆಲಸ ಮಾಡುತ್ತದೆ.
ಪ್ರೇಕ್ಷಕರನ್ನ ರಂಜಿಸಲು ಪ್ರತಿ ಕ್ಷಣ ಮೈಯೆಲ್ಲ ಕಣ್ಣಾಗಿ ಕೆಲಸ ಮಾಡುವ ಈ ತಂಡದಲ್ಲಿ ಕ್ರೀಡಾಸಕ್ತರಿಗೆ ಸಾಕಷ್ಟು ಅವಕಾಶಗಳೂ ಇವೆ. ಅದೇ ಲೈವ್ ಸ್ಪೋರ್ಟ್ಸ್ ಪ್ರೊಡಕ್ಷನ್ ಮತ್ತು ಬ್ರಾಡ್‌ಕಾಸ್ಟಿಂಗ್. ಸದ್ದಿಲ್ಲದೇ ಕೆಲಸ ಮಾಡುವ ಈ ಕ್ಷೇತ್ರವು ಅವಕಾಶಗಳ ಗಣಿ. ಭಾರತ ಸೇರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಪಂದ್ಯಗಳ ಸಂಖ್ಯೆ ಹೆಚ್ಚುತ್ತಿದೆ. ಕ್ರೀಡಾ ಪ್ರೇಮಿಗಳಿಗೆ ಲೆಕ್ಕವಿಲ್ಲ. ಸಾಕಷ್ಟು ಹೊಸ ರೀತಿಯ ಕ್ರೀಡೆಗಳು ಪರಿಚಯಗೊಳ್ಳುತ್ತಿವೆ.

ಏಷ್ಯನ್ ಗೇಮ್ಸ್, ಕಾಮನ್ ವೆಲ್ತ್, ವಿಂಬಲ್‌ಡನ್, ಐಪಿಎಲ್, ಕ್ರಿಕೆಟ್ ಏಕ ದಿನ ಪಂದ್ಯಾವಳಿ ಸೇರಿ ಅನೇಕ ಈ ರೀತಿಯ ಪಂದ್ಯಗಳು ಜನರನ್ನು ರಂಜಿಸುವಲ್ಲಿ ಎಂದೂ ಸೋಲು ಕಂಡಿಲ್ಲ. ಇದರ ಶ್ರೇಯಸ್ಸು ತೆರೆ ಹಿಂದೆ ಕೆಲಸ ಮಾಡುವ ಪ್ರೊಡಕ್ಷನ್ ತಂಡಕ್ಕೂ ಸೇರುತ್ತದೆ. ಭಾರತ ಜನೆವರಿ 2025ರಿಂದ ಜೂನ್ 2026ರೋಳಗೆ 15 ನಗರಗಳಲ್ಲಿ ಒಟ್ಟೂ 36 ಅಂತಾರಾಷ್ಟ್ರೀಯ ಕ್ರೀಡಾ ಪಂದ್ಯಗಳನ್ನು ಆಯೋಜಿಸಿದೆ. ಇದರ ಜೊತೆಗೆ ಸಾಕಷ್ಟು ರಾಷ್ಟ್ರ ಮಟ್ಟದ ಕ್ರೀಡೆಗಳು ಕೂಡ ಆಯೋಜನೆಗೊಂಡಿವೆ. ಅಂದರೆ ಕ್ರೀಡಾ ಪಂದ್ಯಗಳು ಜಾಸ್ತಿ ಆದಂತೆ ಪಂದ್ಯಗಳ ಪ್ರೊಡಕ್ಷನ್ ಮತ್ತ ಬ್ರೋಡ್‌ಕಾಸ್ಟಿಂಗ್ ( ಪ್ರಸಾರಣ)ಕ್ಕೂ ಅವಕಾಶ ಹೆಚ್ಚಿದೆ.
ಏನಿದು ಲೈವ್ ಸ್ಪೋರ್ಟಸ್ ಪ್ರೊಡಕ್ಷನ್ ಮತ್ತು ಬ್ರಾಡ್‌ಕಾಸ್ಟಿಂಗ್?
ನಮ್ಮ ಸಿನಿಮಾ ಪ್ರೊಡಕ್ಷನ್ ರೀತಿಯಲ್ಲಿ ಆದರೆ, ಯಾವುದೇ ಪ್ರೀ ರೆಕಾರ್ಡಿಂಗ್ ಇಲ್ಲದೇ ನಡೆಯುತ್ತಿರುವ ಪಂದ್ಯದ ನೇರ ಪ್ರಸಾರವನ್ನು ನೀಡುವುದು ಈ ಕ್ಷೇತ್ರ. ದೂರದರ್ಶನದಲ್ಲಿ ನಾವು ನೋಡುವ ಪಂದ್ಯದ ಎಲ್ಲಾ ಕ್ಷಣಗಳು ಕೂಡ ಮೈದಾನದ ಅಂಚಿನಲ್ಲಿ ಕ್ಯಾಮೆರಾ ಹಿಂದೆ ನಿಂತವರ ಸೃಜನಶೀಲತೆ ಹಾಗೂ ಅವರ ತ್ವರಿತ ಪ್ರತಿಕ್ರಿಯೆ. ಪಂದ್ಯದ ಪ್ರತಿಯೊಂದು ಕ್ಷಣವನ್ನು ಫಾಲೋ ಮಾಡುತ್ತಾ, ಇದರ ಜೊತೆಗೆ ಬೆಳಕು, ಯಾವ ಸಮಯದಲ್ಲಿ ಯಾರ ಮುಖಭಾವ, ಯಾರ ಮಾತು, ಯಾವ ರೀತಿಯ ಕಮೆಂಟರಿ, ಪ್ರೇಕ್ಷಕರ ಯಾವ ಪ್ರತಿಕ್ರಿಯೆ , ಸೆರೆ ಹಿಡಿದು ತೆರೆ ಮೇಲೆ ಯಾವ ಸಂದರ್ಭದಲ್ಲಿ ತರಬೇಕು ಎಂಬುದನ್ನು ಈ ಸಂಪೂರ್ಣ ಪ್ರೊಡಕ್ಷನ್ ತಂಡ ನಿರ್ಧರಿಸುತ್ತದೆ.
ನಿಮಗೆ ಕ್ರೀಡೆಗಳಲ್ಲಿ ಸಂಪೂರ್ಣ ಆಸಕ್ತಿ ಇದ್ದರೆ ಇಂತಹ ತಂಡದಲ್ಲಿ ಕೆಲಸ ಮಾಡಲು ಕೂಡ ಸಾಕಷ್ಟು ಅವಕಾಶವಿದೆ. ಇದೊಂದು ಚಾಲೆಂಜ್ ಜೊತೆಗೆ, ಸಾಕಷ್ಟು ಎಂಜಾಯ್ ಮಾಡಬಹುದಾದ ಹಾಗೇ ಉತ್ತಮ ಕರಿಯರ್ ಆಯ್ಕೆ ಕೂಡ. ಜೊತೆಗೆ ಒಂದಿಷ್ಟು ತರಬೇತಿ, ಕಲಿಕೆ ಕೂಡ ಬಹಳ ಮುಖ್ಯ.
ಏಲ್ಲೆಲ್ಲಿ ಇವೆ ಅವಕಾಶ?
ಲೈವ್ ಸ್ಪೋರ್ಟ್ಸ್ ಪ್ರೊಡಕ್ಷನ್‌ನ ಒಂದು ತಂಡದಲ್ಲಿ, ಕ್ಯಾಮೆರಾ ಆಪರೇಟರ್‌ಗಳು, ವಿಷನ್ ಮಿಕ್ಸಿಂಗ್, ಡೈರೆಕ್ಷನ್ ತಂಡ, ಇನ್ಸ್ಟೆಂಟ್ ರೀಪ್ಲೆ ಆಪರೇಟರ್‌ಗಳು, ಗ್ರಾಫಿಕ್ಸ್ ತಜ್ಞರು, ಪ್ರಿಡಿಕ್ಟಿವ್ ಅನಾಲಿಸಿಸ್ ವಿಭಾಗ, ಆಡಿಯೋ ಹಾಗೂ ಸೌಂಡ್ ಇಂಜಿನಿಯರ್‌ಗಳು, ಪ್ರೊಡಕ್ಷನ್ ಮ್ಯಾನೇಜರ್‌ಗಳು, ಓಬಿ ಎಂಜಿನಿಯರ್ ಮತ್ತು ಬ್ರಾಡ್‌ಕಾಸ್ಟಿಂಗ್, ಸೆಟಲೈಟ್ ಅಪ್‌ಲಿಂಕಿಂಗ್, ಫ್ಲೋರ್ ನಿರ್ವಹಣೆ, ಪ್ರೊಡಕ್ಷನ್ ನಿರ್ವಹಣೆ ಸೇರಿ ನೇರ ಪ್ರಸಾರಕ್ಕೆ ಬೇಕಾದ ಅನೇಕ ಎಕ್ಸ್‌ಪರ್ಟ್‌ಗಳು ಇರುತ್ತಾರೆ.
ಈ ಕ್ಷೇತ್ರದಲ್ಲಿರುವ ಪ್ರಮುಖ ವೃತ್ತಿ ಅವಕಾಶಗಳು
* ಕ್ಯಾಮೆರಾ ಆಪರೇಟರ್‌ಗಳು: ಪಂದ್ಯದ ವಿವಿಧ ಕ್ಷಣಗಳನ್ನು ಸೂಕ್ತ ಕೋನಗಳಲ್ಲಿ ಸೆರೆಹಿಡಿಯುವುದು.
* ವಿಷನ್ ಮಿಕ್ಸರ್‌ಗಳು: ವಿವಿಧ ಕ್ಯಾಮೆರಾಗಳ ದೃಶ್ಯಗಳಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡಿ ಪರದೆಯ ಮೇಲೆ ಪ್ರಸಾರ ಮಾಡುವುದು.
* ನಿರ್ದೇಶನ ತಂಡ: ಪಂದ್ಯದ ದೃಶ್ಯ ನಿರೂಪಣೆ ಮತ್ತು ಪ್ರಸಾರದ ಒಟ್ಟಾರೆ ಹರಿವನ್ನು ನಿರ್ವಹಿಸುವುದು.
* ಇನ್‌ಸ್ಟಂಟ್ ರಿಪ್ಲೇ ಆಪರೇಟರ್‌ಗಳು: ನಿರ್ಣಾಯಕ ಕ್ಷಣಗಳ ಮರುಪ್ರಸಾರವನ್ನು ತ್ವರಿತವಾಗಿ ಸಿದ್ಧಪಡಿಸಿ ತೋರಿಸುವುದು.
* ಗ್ರಾಫಿಕ್ಸ್ ತಜ್ಞರು: ಅಂಕಿಅಂಶಗಳು, ಸ್ಕೋರ್‌ಕಾರ್ಡ್‌ಗಳು ಮತ್ತು ಇತರ ದೃಶ್ಯ ಮಾಹಿತಿಯನ್ನು ಪ್ರದರ್ಶಿಸುವುದು.
* ಆಡಿಯೋ ಮತ್ತು ಸೌಂಡ್ ಎಂಜಿನಿಯರ್‌ಗಳು: ಕಾಮೆಂಟರಿ, ಮೈದಾನದ ಧ್ವನಿ ಮತ್ತು ಇತರ ಆಡಿಯೋ ಅಂಶಗಳನ್ನು ನಿರ್ವಹಿಸುವುದು.
* ಪ್ರೊಡಕ್ಷನ್ ಮ್ಯಾನೇಜರ್‌ಗಳು: ತಂಡ, ಉಪಕರಣಗಳು, ವೇಳಾಪಟ್ಟಿ ಮತ್ತು ಕಾರ್ಯಾಚರಣೆಗಳ ಸಮನ್ವಯ ಮಾಡುವುದು.
* OB ಎಂಜಿನಿಯರ್‌ಗಳು ಮತ್ತು ಬ್ರಾಡ್‌ಕಾಸ್ಟ್ ತಂತ್ರಜ್ಞರು: ಹೊರಾಂಗಣ ಪ್ರಸಾರ ಘಟಕಗಳು ಹಾಗೂ ತಾಂತ್ರಿಕ ವ್ಯವಸ್ಥೆಗಳನ್ನು ನಿರ್ವಹಿಸುವುದು.
* ಸ್ಯಾಟಲೈಟ್ ಮತ್ತು ಪ್ರಸಾರ ತಂತ್ರಜ್ಞರು: ಪ್ರಸಾರ ಸಂಕೇತಗಳನ್ನು ಸಂಬಂಧಿತ ಜಾಲಗಳಿಗೆ ತಲುಪಿಸುವ ವ್ಯವಸ್ಥೆ ನೋಡಿಕೊಳ್ಳುವುದು.
* ಫ್ಲೋರ್ ಮ್ಯಾನೇಜರ್‌ಗಳು: ಮೈದಾನದಲ್ಲಿನ ಪ್ರಸಾರ ಚಟುವಟಿಕೆಗಳು ಮತ್ತು ತಂಡಗಳ ನಡುವಿನ ಸಮನ್ವಯಕ್ಕೆ ನೆರವಾಗುವುದು.
ಕ್ರೀಡೆಗಳಲ್ಲಿ ಆಸಕ್ತಿ ಹಾಗೂ ಪ್ರತಿಯೊಂದು ಆಟದ ತಿಳುವಳಿಕೆ ಇದ್ದಲ್ಲಿ ಜೊತೆಗೆ ಬೇರೆ ಬೇರೆ ವಿಭಾಗದ ತಂತ್ರಜ್ಞಾನದ ಅರಿವು , ತರಬೇತಿ ಇದ್ದಲ್ಲಿ ಸ್ಥಳೀಯ ಹಾಗೂ ಅಂತಾರಾಷ್ಟ್ರ ಮಟ್ಟದ ಪ್ರೊಡಕ್ಷನ್ ತಂಡದಲ್ಲಿ ಸಾಕಷ್ಟು ಅವಕಾಶಗಳಿವೆ. ಈ ಕ್ಷೇತ್ರದಲ್ಲಿ ಸದ್ಯ ಅವಕಾಶಗಳು ಹೆಚ್ಚಿದ್ದು ಅನುಭವಿಗಳ ಕೊರತೆ ಇದೆ. ಅದರಲ್ಲೂ ಸಾಕಷ್ಟು ಕ್ರೀಡಾ ಪಂದ್ಯಗಳು ನಡೆಯುತ್ತಿರುವುದರಿಂದ ಒತ್ತಡವೂ ಹೆಚ್ಚಿದೆ. ಹೀಗಾಗಿ ನಿಮ್ಮಲ್ಲಿನ ಕ್ರೀಡಾಸಕ್ತಿ, ನಿಮ್ಮ ಕೌಶಲ್ಯ, ಲೈವ್ ಪಂದ್ಯಗಳ ಒತ್ತಡವನ್ನು ಸಹಿಸುವ ಶಕ್ತಿ ಮತ್ತು ಕ್ಯಾಮೆರಾ ಸೇರಿ ಪ್ರೊಡಕ್ಷನ್‌ನಲ್ಲಿ ಭಾಗಿಯಾಗುವ ಉಪಕರಣಗಳ ಬಗ್ಗೆ ತಿಳುವಳಿಕೆಗೆ ಭಾರಿ ಬೇಡಿಕೆ ಇದೆ.
ವಿಶೇಷ ತರಬೇತಿ ಇಲ್ಲದೆ ಈ ಕ್ಷೇತ್ರಕ್ಕೆ ಪ್ರವೇಶಿಸಲು ಸಾಧ್ಯವೇ?
ಆಸಕ್ತಿ ಇದ್ದರೆ ಅಷ್ಟೇ ಸಾಲದು ತರಬೇತಿಯೂ ಬೇಕು, ಆಧುನಿಕ ತಂತ್ರಜ್ಞಾನದ ಅರಿವೂ ಅತ್ಯಗತ್ಯ. ಲೈವ್ ಸ್ಪೋರ್ಟ್ಸ್ ಪ್ರೊಡಕ್ಷನ್‌ನಲ್ಲಿ ಕರಿಯರ್ ಬೇಕು ಎನ್ನುವವರಿಗೆ ವಿಶೇಷ ಕೋರ್ಸ್‌ಗಳು ಲಭ್ಯವಿದೆ. ಪಂದ್ಯದ ನೇರ ಪ್ರಸಾರಕ್ಕೆ ಬೇಕಾದ ಎಲ್ಲಾ ವಿಭಾಗದ ಶಿಕ್ಷಣವನ್ನು ಪಡೆಯಬಹುದು ಹಾಗೂ ಇಂತಹ ಲೈವ್ ಪಂದ್ಯಗಳ ಪ್ರಸಾರ ವಿಭಾಗದಲ್ಲಿ ಭಾಗಿಯಾಗಿ ನೇರ ತರಬೇತಿಯನ್ನು ಕೂಡ ಪಡೆಯಬಹುದು. ಆನ್ ಗ್ರೌಂಡ್ ಪಡೆಯಬೇಕಾದ ತರಬೇತಿ ತಪ್ಪುಗಳ ಜೊತೆ ಜೊತೆಗೆ ಕಲಿಯಬೇಕು ಹಾಗೂ ಎಷ್ಟು ಉತ್ತಮವಾದ ಅನುಭವವನ್ನು ಪ್ರೇಕ್ಷಕರಿಗೆ ನೀಡಬಹುದು ಎಂಬುದನ್ನು ಅರಿಯಬೇಕು ಎಂದುದೇ ಈ ಕ್ಷೇತ್ರದ ವಿಶೇಷ.
ಸುಧಾಕರ್ ಶಾಸ್ತ್ರಿ,
ಐಐಎಲ್‌ಎಸ್‌ಪಿಬಿ ಸಂಸ್ಥಾಪಕ ನಿರ್ದೇಶಕರು,
ಎಕ್ಸುಕ್ಯುಟಿವ್ ಪ್ರೊಡ್ಯುಸರ್ ಮತ್ತು ಪ್ರೊಡಕ್ಷನ್ ಮ್ಯಾನೇಜರ್


Click it and Unblock the Notifications
