ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಟಗಾರರ ಮನಸ್ಥಿತಿ ಹೇಗಿತ್ತು? ಅಚ್ಚರಿಯ ಸಂಗತಿ ಬಿಚ್ಚಿಟ್ಟ ಕುಲದೀಪ್ ಯಾದವ್
Kuldeep Yadav: ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಪ್ರತಿಯೊಬ್ಬ ಆಟಗಾರನೂ ತಂಡಕ್ಕಾಗಿ ತನ್ನ ದೇಹವನ್ನೇ ಪಣಕ್ಕಿಟ್ಟು ಹೋರಾಡಲು ಸಿದ್ಧನಿರುತ್ತಿದ್ದ ಎಂದು ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಹೇಳಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಅವರಂತಹ ನಾಯಕರ ಅಡಿಯಲ್ಲೂ ಆಡಿದ ಅನುಭವ ಹೊಂದಿದ್ದರೂ, ಕೊಹ್ಲಿ ನಾಯಕತ್ವದಲ್ಲಿದ್ದ ವಿಶಿಷ್ಟ ಅನುಭವ ಮತ್ತು ಧೈರ್ಯದ ಮನೋಭಾವವನ್ನು ಕುಲದೀಪ್ ಯಾದವ್ ಅವರು ವಿಶೇಷವಾಗಿ ಸ್ಮರಿಸಿದ್ದಾರೆ. ಇದು ಸದ್ಯ ಭಾರಿ ವೈರಲ್ ಆಗುತ್ತಿದೆ.

ಕುಲದೀಪ್ ಯಾದವ್ ಕೊಹ್ಲಿ ನಾಯಕತ್ವದ ಬಗ್ಗೆ ಹೇಳಿದ್ದೇನು?
ಕ್ರಿಕೆಟ್‌ನ ಮೂರೂ ಸ್ವರೂಪಗಳಲ್ಲೂ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಹಲವು ಪಂದ್ಯಗಳನ್ನು ಆಡಿರುವ ಕುಲದೀಪ್ ಯಾದವ್, ಕ್ರಿಕ್‌ಇನ್ಫೋ ಜೊತೆ ಮಾತನಾಡುತ್ತಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ. 'ನಾನು ಹೆಚ್ಚಿನ ಕ್ರಿಕೆಟ್ ಅನ್ನು ವಿರಾಟ್ ಅಡಿಯಲ್ಲಿ, ನಂತರ ರೋಹಿತ್ ನಾಯಕತ್ವದಲ್ಲಿ ಆಡಿದ್ದೇನೆ. ವಿರಾಟ್ ನಾಯಕತ್ವದಲ್ಲಿ ಅಪಾರ ಒತ್ತಡ ಇತ್ತು,. ಅದು ಸಕಾರಾತ್ಮಕ ಮತ್ತು ಆಕ್ರಮಣಕಾರಿ ಒತ್ತಡವಾಗಿತ್ತು. ಅವರು ನಾಯಕರಾಗಿದ್ದಾಗ ಪ್ರತಿಯೊಬ್ಬ ಆಟಗಾರನೂ ಅವರಿಗಾಗಿ ತನ್ನ ಸರ್ವಸ್ವವನ್ನೂ ನೀಡಲು ಸಿದ್ಧನಿದ್ದಾನೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು,' ಎಂದು ಹೇಳಿದ್ದಾರೆ.
'ವಿಕೆಟ್ ಪಡೆಯುವ ಸ್ಪಷ್ಟ ಗುರಿ ಹೊಂದಿದ್ದೆವು'
ತಂಡದಲ್ಲಿ ತಮ್ಮ ಪಾತ್ರವನ್ನು ವಿರಾಟ್ ಅತ್ಯಂತ ಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದರು ಎಂದು ಕುಲದೀಪ್ ವಿವರಿಸಿದ್ದಾರೆ. 'ತಂಡಕ್ಕೆ ವಿಕೆಟ್ ತೆಗೆದುಕೊಡುವುದೇ ನನ್ನ ಪ್ರಮುಖ ಕೆಲಸ ಎಂಬುದು ಸ್ಪಷ್ಟವಾಗಿತ್ತು. ಯುಜುವೇಂದ್ರ ಚಹಲ್ ಮತ್ತು ನನಗೆ ಒಂದೇ ರೀತಿಯ ಜವಾಬ್ದಾರಿ ಇತ್ತು. ವಿರಾಟ್ ನಾಯಕರಾಗಿದ್ದಾಗ ನಮ್ಮ ತಂತ್ರ ಸರಳವಾಗಿತ್ತು. ಆಟವನ್ನು ಆನಂದಿಸಿ, ರನ್ ಬಿಟ್ಟುಕೊಡುವ ಬಗ್ಗೆ ಯಾವುದೇ ಒತ್ತಡ ಇರಲ್ಲ. ಅದನ್ನು ಬ್ಯಾಟರ್‌ಗಳು ನೋಡಿಕೊಳ್ಳುತ್ತಾರೆ. ನಿಮ್ಮ ಕೆಲಸ ವಿಕೆಟ್ ಪಡೆಯುವುದಷ್ಟೇ ಎಂದು ಅವರು ಹೇಳುತ್ತಿದ್ದರು,' ಎಂದು ನೆನಪಿಸಿಕೊಂಡಿದ್ದಾರೆ.
ಕೊಹ್ಲಿ ನಾಯಕತ್ವದ ಅವಧಿ ಮತ್ತು ಸಾಧನೆ
ವಿರಾಟ್ ಕೊಹ್ಲಿ 2014ರ ಕೊನೆಯಿಂದ 2022ರ ಆರಂಭದವರೆಗೆ ಟೆಸ್ಟ್ ತಂಡದ ನಾಯಕರಾಗಿದ್ದರೆ, 2017ರ ಆರಂಭದಿಂದ 2021ರ ಕೊನೆಯವರೆಗೆ ಸೀಮಿತ ಓವರ್‌ಗಳ ತಂಡದ ನಾಯಕತ್ವ ವಹಿಸಿದ್ದರು. ಆ ಅವಧಿಯಲ್ಲಿ ಐಸಿಸಿ ಪ್ರಶಸ್ತಿಗಳು ಬಾರದಿದ್ದರೂ, ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆಲುವುಗಳು ಹಾಗೂ ತವರಿನಲ್ಲಿ ಸತತ ಅಜೇಯ ಟೆಸ್ಟ್ ಸರಣಿ ಸಾಧನೆಗಳು ಮೂಡಿಬಂದಿದ್ದವು. ಕೊಹ್ಲಿ ನಾಯಕತ್ವದಲ್ಲಿ ವಿಶೇಷವಾಗಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಕುಲದೀಪ್ ಭಾರತದ ಪ್ರಮುಖ ಸ್ಪಿನ್ನರ್ ಆಗಿ ಹೊರಹೊಮ್ಮಿ, 2019ರ ಏಕದಿನ ವಿಶ್ವಕಪ್‌ನಲ್ಲೂ ಮಹತ್ವದ ಪಾತ್ರ ವಹಿಸಿದ್ದರು.
ಕ್ರಿಕೆಟ್ ಮೀರಿದ ಬದುಕಿನ ಪಾಠಗಳು..
ಕೇವಲ ಕ್ರಿಕೆಟ್ ಮಾತ್ರವಲ್ಲದೆ, ಆಟದ ಹೊರಗಿನ ಬದುಕಿನ ಬಗ್ಗೆಯೂ ವಿರಾಟ್ ಅವರಿಂದ ಸಾಕಷ್ಟು ಕಲಿತಿದ್ದೇನೆ ಎಂದು ಕುಲದೀಪ್ ಹೇಳಿದ್ದಾರೆ. 'ಒಬ್ಬ ಕ್ರಿಕೆಟಿಗ ಅಥವಾ ಕ್ರೀಡಾಪಟುವಾಗಿ ಮಾತ್ರವಲ್ಲದೆ, ಬದುಕಿನಲ್ಲಿ ಸಮತೋಲನ ಕಂಡುಕೊಳ್ಳುವ ಬಗ್ಗೆ ನಾವು ಮಾತನಾಡಿದ್ದೇವೆ. ಕೆಲವೊಮ್ಮೆ ದಾರಿ ಕಾಣದಂತೆ ಸಿಲುಕಿಕೊಂಡ ಭಾವನೆ ಬರಬಹುದು. ಅಂತಹ ಸಂದರ್ಭಗಳನ್ನು ಹೇಗೆ ಎದುರಿಸಿ ಮುಂದುವರಿಯಬೇಕು ಎಂಬುದರ ಕುರಿತು ಚರ್ಚಿಸಿದ್ದೇವೆ. ಕ್ರಿಕೆಟ್‌ಗಿಂತ ಮಿಗಿಲಾದ ಬದುಕಿನ ದೃಷ್ಟಿಕೋನವನ್ನು ಅವರು ನನಗೆ ನೀಡಿದ್ದಾರೆ. ವಿರಾಟ್ ಜೊತೆ ಮಾತನಾಡಿದಾಗಲೆಲ್ಲಾ ನನಗೆ ಸಂತೋಷವಾಗುತ್ತದೆ. ಏಕೆಂದರೆ ನಮ್ಮ ಮಾತುಕತೆ ಕೇವಲ ಆಟಕ್ಕಷ್ಟೇ ಸೀಮಿತವಾಗಿರುವುದಿಲ್ಲ,' ಎಂದು ಕುಲದೀಪ್ ಮನಬಿಚ್ಚಿ ಮಾತನಾಡಿದ್ದಾರೆ.


Click it and Unblock the Notifications
