KKR vs DC: ಮತ್ತೊಮ್ಮೆ ಆರ್‌ಸಿಬಿ ರೆಕಾರ್ಡ್ ಬ್ರೇಕ್: ಎಸ್‌ಆರ್‌ಎಚ್ ದಾಖಲೆ ಜಸ್ಟ್ ಮಿಸ್!
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಬ್ಯಾಟರ್ ಗಳ ಅಬ್ಬರಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್ ಗಳು ಅಕ್ಷರಶಃ ಕಳೆದುಹೋಗಿದ್ದಾರೆ. ಆರ್ ಸಿಬಿ ಮಾಡಿದ್ದ ಅತ್ಯಧಿಕ ಮೊತ್ತದ ದಾಖಲೆಯನ್ನು ಮತ್ತೊಂದು ತಂಡ ಮುರಿದುಹಾಕಿದೆ.
ವಿಶಾಖಪಟ್ಟಣದ ವೈಎಸ್ ರಾಜಶೇಖರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 272 ರನ್‌ಗಳನ್ನು ಕಲೆಹಾಕಿದೆ.

ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಫಾರ್ಮ್ ಕಂಡುಕೊಂಡಿದ್ದ ಆರಂಭಿಕ ಬ್ಯಾಟರ್ ಸುನಿಲ್ ನರೇನ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೂಡ ಅಬ್ಬರಿಸಿದರು.
ಕೇವಲ 39 ಎಸೆತಗಳಲ್ಲಿ 7 ಬೌಂಡರಿ 7 ಸಿಕ್ಸರ್ ಸಹಿತ 85 ರನ್ ಗಳಿಸಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಅವರು, ಕೆಕೆಆರ್ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿದರು. ಫಿಲ್ ಸಾಲ್ಟ್ 12 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರೂ ತಂಡಕ್ಕೆ ಉತ್ತಮ ಆರಂಭ ಸಿಕ್ಕಾಗಿತ್ತು.
ಮೊದಲ ವಿಕೆಟ್‌ಗೆ ಈ ಜೋಡಿ 4.3 ಓವರ್ ಗಳಲ್ಲಿ 60 ರನ್ ಕಲೆಹಾಕಿತು. ಫಿಲ್ ಸಾಲ್ಟ್ ಔಟಾದ ಬಳಿಕ ಬ್ಯಾಟಿಂಗ್ ಮಾಡಲು ಬಂದ ಆಂಗ್ಕ್ರಿಶ್ ರಘುವಂಶಿ ತಮ್ಮ ಮೊದಲ ಪಂದ್ಯದಲ್ಲೇ ಅತ್ಯುತ್ತಮ ಇನ್ನಿಂಗ್ಸ್ ಆಡಿದರು.
27 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ ಸಹಿತ 54 ರನ್ ಗಳಿಸಿದರು. ಭಾರತ ತಂಡಕ್ಕಾಗಿ ಅಂಡರ್ 19 ವಿಶ್ವಕಪ್‌ನಲ್ಲಿ ಆಡಿದ್ದ ಅವರು ಮೊದಲ ಪಂದ್ಯದಲ್ಲೇ ತಾವೆಂತಹ ಅತ್ಯುತ್ತಮ ಬ್ಯಾಟರ್ ಎಂದು ನಿರೂಪಿಸಿದರು.
ರಸೆಲ್ ಮಸಲ್, ರಿಂಕು ಅಬ್ಬರ
ಕೊನೆಯ ಓವರ್ ಗಳಲ್ಲಿ ಆಂಡ್ರೆ ರಸೆಲ್ ಮತ್ತು ರಿಂಕು ಸಿಂಗ್ ಅಬ್ಬರಿಸಿದರು. ಆಂಡ್ರೆ ರಸೆಲ್ 19 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ಸಹಿತ 41 ರನ್ ಗಳಿಸಿದರು. ರಿಂಕು ಸಿಂಗ್ 8 ಎಸೆತಗಳಲ್ಲಿ 1 ಬೌಂಡರಿ ಮೂರು ಸಿಕ್ಸರ್ ಸಹಿತ 26 ರನ್ ಗಳಿಸಿದರು. ನಾಯಕ ಶ್ರೇಯಸ್ ಅಯ್ಯರ್ 11 ಎಸೆತಗಳಲ್ಲಿ 18 ರನ್ ಗಳಿಸಿದರು.
ಒಂದು ಹಂತದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ 277 ರನ್‌ಗಳ ದಾಖಲೆ ಕೂಡ ಮುರಿಯುವ ಸಾಧ್ಯತೆ ಇತ್ತು. ಆದರೆ ಕೊನೆಯ ಓವರ್ ನಲ್ಲಿ ಇಶಾಂತ್ ಶರ್ಮಾ 2 ವಿಕೆಟ್ ಪಡೆದು ಕೇವಲ 8 ರನ್ ನೀಡಿದ್ದರಿಂದ ಕೆಕೆಆರ್ ಓಟಕ್ಕೆ ಬ್ರೇಕ್ ಹಾಕಿದರು. ಆದರೂ, ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಸ್ಕೋರ್ ದಾಖಲಾಯಿತು.












Click it and Unblock the Notifications