KKR vs SRH: ಕೆಕೆಆರ್, ಎಸ್‌ಆರ್‌ಎಚ್ ಕ್ವಾಲಿಫೈರ್ ಫೈಟ್: ಯಾರಿಗೆ ಸಿಗಲಿದೆ ಫೈನಲ್ ಟಿಕೆಟ್
ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಲೀಗ್ ಹಂತದ ಪಂದ್ಯಗಳು ಮುಗಿದಿದ್ದು, ಇಂದಿನಿಂದ ಪ್ಲೇ ಆಫ್ ಪಂದ್ಯಗಳು ಪ್ರಾರಂಭವಾಗಲಿವೆ. ಮೊದಲ ಕ್ವಾಲಿಫೈರ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಾದಾಟ ನಡೆಸಲಿವೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿರುವ ಕೆಕೆಆರ್ ಹಾಗೂ ಎರಡನೇ ಸ್ಥಾನ ಗಳಿಸಿರುವ ಎಸ್‌ಆರ್‌ಎಚ್ ತಂಡಗಳು ಮುಖಾಮುಖಿ ಆಗಲಿವೆ. ಅಂಕಿ ಸಂಖ್ಯೆಯ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಾಢ್ಯವಾಗಿದ್ದು, 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿವೆ.

ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಕೆಕೆಆರ್ ಬಲಿಷ್ಠವಾಗಿದೆ. ಈಗಾಗಲೇ ಉಭಯ ತಂಡಗಳು ಒಟ್ಟು 26 ಬಾರಿ ಮುಖಾಮುಖಿಯಾಗಿದ್ದು, 17 ಪಂದ್ಯಗಳಲ್ಲಿ ಕೆಕೆಆರ್ ಜಯ ಸಾಧಿಸಿದೆ. 9 ರಲ್ಲಿ ಎಸ್‌ಆರ್‌ಎಚ್ ಗೆಲುವಿನ ನಗೆ ಬೀರಿದೆ. ಇಬ್ಬರ ನಡುವಿನ ಕಾದಾಟದಲ್ಲಿ 228 ಗರಿಷ್ಠ ಮೊತ್ತವಾಗಿದ್ದು, 101 ಕನಿಷ್ಠ ಸ್ಕೋರ್ ಆಗಿದೆ.
ಕೆಕೆಆರ್‌ಗೆ ಆಲ್‌ರೌಂಡರ್ ಬಲ
ಮಾಜಿ ಚಾಂಪಿಯನ್ ಕೆಕೆಆರ್ ತಂಡಕ್ಕೆ ಆಲ್‌ರೌಂಡರ್‌ಗಳ ಬಲ ತುಂಬಿದ್ದಾರೆ. ಸ್ಟಾರ್ ವೆಸ್ಟ್ ಇಂಡೀಸ್ ಆಟಗಾರರಾದ ಸುನಿಲ್ ನರೈನ್, ಆಂಡ್ರಿ ರಸೆಲ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲೂ ತಂಡಕ್ಕೆ ನೆರವಾಗುತ್ತಿದ್ದಾರೆ. ಈ ಆಟಗಾರರ ಪ್ರದರ್ಶನ ಪ್ರಸಕ್ತ ವರ್ಷ ತಂಡಕ್ಕೆ ಬೂಸ್ಟ್ ನೀಡಿದೆ.

ಬ್ಯಾಟಿಂಗ್‌ನಲ್ಲಿ ಸುನಿಲ್ ನರೈನ್ (461 ರನ್), ಪಿನ್ ಸಾಲ್ಟ್ (435 ರನ್), ಶ್ರೇಯಸ್ ಅಯ್ಯರ್ (287 ರನ್) ತಂಡದ ಪರ ಅತಿ ಹೆಚ್ಚು ರನ್ ಬಾರಿಸಿ ಮಿಂಚುತ್ತಿದ್ದಾರೆ. ಮನೀಷ್ ಪಾಂಡೆ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್ ತಂಡ ತಮಗೆ ನೀಡಿದ ಪಾತ್ರವನ್ನು ಅಚ್ಚು ಕಟ್ಟಾಗಿ ನಿರ್ವಹಿಸಲಿದ್ದಾರೆ. ತಂಡದ ಮಿಡ್ಲ್ ಆರ್ಡರ್ ಬಲಾಡ್ಯವಾಗಿದ್ದು ತಂಡದ ಚಿಂತೆಯನ್ನು ದೂರ ಮಾಡಿದೆ.
ಬೌಲಿಂಗ್ ವಿಭಾಗದಲ್ಲಿ ವರುಣ್ ಚಕ್ರವರ್ತಿ, ಆಂಡ್ರಿ ರಸೆಲ್, ಹರ್ಷಿತ್ ರಾಣಾ, ಸುನಿಲ್ ನರೈನ್, ಐಪಿಎಲ್‌ನ ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್ ಬೇಟೆ ನಡೆಸಬಲ್ಲರು. ಈ ಎಲ್ಲ ಸ್ಟಾರ್ ಆಟಗಾರರು ಸ್ಥಿರ ಪ್ರದರ್ಶನ ನೀಡಿದರೆ ಫೈನಲ್‌ಗೆ ಅರ್ಹತೆ ಫಿಕ್ಸ್.
ಟಾಪ್ ಆರ್ಡರ್‌ಗಳೇ ಬಲ
ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಟಾಪ್ ಆರ್ಡರ್ ಬ್ಯಾಟರ್‌ಗಳೇ ಬಲ ತುಂಬಿದ್ದಾರೆ. ಫೀಯರ್ ಲೆಸ್ ಕ್ರಿಕೆಟ್ ಆಡುವ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಆರಂಭಿಕರಾಗಿ ಭರ್ಜರಿ ಆರಂಭ ನೀಡುತ್ತಿದ್ದು ತಂಡದ ಚಿಂತೆಯನ್ನು ದೂರ ಮಾಡಿದೆ. ಅಲ್ಲದೆ ಪವರ್ ಪ್ಲೇನಲ್ಲಿ ಇವರು ಅಬ್ಬರದ ಆಟವನ್ನು ಆಡಬಲ್ಲರು. ಮಿಡ್ಲ್ ಆರ್ಡರ್‌ನಲ್ಲಿ ಹೆನ್ರಿಚ್ ಕ್ಲಾಸೆನ್, ಶಹಬಾಜ್ ಅಹ್ಮದ್, ಏಡೆನ್ ಮಾರ್ಕ್ರಮ್, ಅಬ್ದುಲ್ ಸಮದ್ ಸಹ ರನ್ ಕಲೆ ಹಾಕುವ ಕ್ಷಮತೆಯನ್ನು ಹೊಂದಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಟಿ ನಟರಾಜನ್, ನಾಯಕ ಪ್ಯಾಟ್ ಕಮಿನ್ಸ್, ಅನುಭವಿ ಭುವನೇಶ್ವರ್ ಕುಮಾರ್ ಪವರ್ ಪ್ಲೇ ಹಾಗೂ ಡೆತ್ ಓವರ್‌ನಲ್ಲಿ ಬಿಗುವಿನ ದಾಳಿ ನಡೆಸಬಲ್ಲರು. ಮಧ್ಯದ ಓವರ್‌ಗಳಲ್ಲಿ ಸ್ಪಿನ್ ಬೌಲರ್‌ಗಳು ಶಿಸ್ತು ಬದ್ಧ ದಾಳಿ ನಡೆಸುತ್ತಿದ್ದಾರೆ. ಮತ್ತೊಮ್ಮೆ ಸಂಘಟಿತ ಆಟದ ಪ್ರದರ್ಶನ ನೀಡಿದ್ದೇ ಆದಲ್ಲಿ ಗೆಲುವಿನ ನಗೆ ಫಿಕ್ಸ್.
ಇಂದು ಸೋತರೆ ಮತ್ತೊಂದು ಅವಕಾಶ
ಇಂದು ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆಯಲಿದೆ. ಇನ್ನು ಸೋತ ತಂಡಕ್ಕೆ ಇನ್ನೊಂದು ಚಾನ್ಸ್ ಸಿಗಲಿದೆ. ಸೋತ ತಂಡ ಎರಡನೇ ಕ್ವಾಲಿಫೈರ್‌ನಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ವಿಜೇತ ತಂಡದ ವಿರುದ್ಧ ಕಾದಾಟ ನಡೆಸಲಿದೆ.
ಸಂಭಾವ್ಯ ಕೆಕೆಆರ್ ತಂಡ: ಸುನಿಲ್ ನರೈನ್, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಅನುಕುಲ್ ರಾಯ್ / ವೈಭವ್ ಎ. ರಾಣಾ, ವರುಣ್ ಚಕ್ರವರ್ತಿ
ಸಂಭಾವ್ಯ ಎಸ್‌ಆರ್‌ಎಚ್ ತಂಡ: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಅಬ್ದುಲ್ ಸಮದ್, ಸನ್ವಿರ್ ಸಿಂಗ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ವಿಜಯಕಾಂತ್ ವ್ಯಾಸ್ಕಂತ್, ಟಿ ನಟರಾಜನ್












Click it and Unblock the Notifications