Government employee; ಸರ್ಕಾರಿ ನೌಕರರ ಕ್ರೀಡಾಕೂಟದ ಮಾರ್ಗಸೂಚಿ
ಬೆಂಗಳೂರು, ಅಕ್ಟೋಬರ್ 09; ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ 2022-23ನೇ ಸಾಲಿನ ರಾಜ್ಯ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಸಂಘಟಿಸುವ ಬಗ್ಗೆ ಪ್ರಕಟಣೆ ಹೊರಡಿಸಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಲು ನಿಯಮಾವಳಿಗಳನ್ನು ಸಹ ತಿಳಿಸಲಾಗಿದೆ.
ಆಯುಕ್ತರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯದ ಎಲ್ಲಾ ಉಪ/ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯವರಿಗೆ ಈ ಕುರಿತು ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. ಕಛೇರಿಯ ಪತ್ರ ದಿನಾಂಕ 19/11/2022, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ಬೆಂಗಳೂರು 15/09/2023ರ ಪತ್ರವನ್ನು ಉಲ್ಲೇಖ ಮಾಡಿದ್ದಾರೆ.

2022-23ನೇ ಸಾಲಿನ ರಾಜ್ಯ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ತುಮಕೂರಿನಲ್ಲಿ ದಿನಾಂಕ 27/10/2023 ರಿಂದ 29/10/2023ರ ತನಕ ನಡೆಸಲು ತೀರ್ಮಾನಿಸಲಾಗಿರುತ್ತದೆ. ಕ್ರೀಡಾಕೂಟವನ್ನು ಈ ಕೆಳಕಂಡಂತೆ ಆಯೋಜಿಸಲು ಸೂಚಿಸಿ ಸುತ್ತೋಲೆ ಹೊರಡಿಸಲಾಗಿದೆ.
ಕ್ರೀಡಾಕೂಟದಲ್ಲಿ ಭಾಗವಹಿಸಲು ನಿಯಮಾವಳಿಗಳು
* ಸದರಿ ಕ್ರೀಡಾಕೂಟದಲ್ಲಿ ರಾಜ್ಯ ಸರ್ಕಾರದ ಎಲ್ಲಾ ಖಾಯಂ ನೌಕರರು ಭಾಗವಹಿಸಲು ಅರ್ಹರಾಗಿರುತ್ತಾರೆ.
* ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿನ ತರಬೇತುದಾರರು, ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಕರು. ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಕ್ರೀಡಾಕೋಟದಡಿ ನೇಮಕಗೊಂಡ ನೌಕರರು ಭಾಗವಹಿಸಲು ಅರ್ಹರಾಗಿರುವುದಿಲ್ಲ.
* ಎಲ್ಲಾ ಕ್ರೀಡಾಪಟುಗಳು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕ್ರೀಡೆಯಲ್ಲಿ ಭಾಗವಹಿಸಲು ನೀಡಿರುವ ಅಧಿಕೃತ ಗುರುತಿನ ಚೀಟಿ ಕಡಾಯವಾಗಿ ಸಲ್ಲಿಸತಕ್ಕದ್ದು.
* ಸಂಗೀತ, ನೃತ್ಯ ಮತ್ತು ಕಲಾ ಶಿಕ್ಷಕರು, ಸಂಗೀತ, ನೃತ್ಯ ಮತ್ತು ಕರಕುಶಲ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುವುದಿಲ್ಲ.
* ದಿನಗೂಲಿ ನೌಕರರು, ಅರೆಕಾಲಿಕ ನೌಕರರು, ಕ್ಷೇಮಾಭಿವೃದ್ಧಿ, ನೌಕರರು, ಗುತ್ತಿಗೆ ನೌಕರರು, ನಿಗಮ/ ಮಂಡಳಿ ನೌಕಕರು ಮತ್ತು ಇತರೇ ಖಾಯಂ ಅಲ್ಲದ ನೌಕರರು ಭಾಗವಹಿಸಲು ಅರ್ಹರಾಗಿರುವುದಿಲ್ಲ.
* ಪೊಲೀಸ್ ಇಲಾಖೆ, ಅರಣ್ಯ ಇಲಾಖೆಗಳಲ್ಲಿ ಸಮವಸ್ತ್ರ ವೃಂದಕ್ಕೆ ಪ್ರತ್ಯೇಕ ಕ್ರೀಡಾಕೂಟಗಳಿರುವುದರಿಂದ ಈ ಎರಡೂ ಇಲಾಖೆಗಳ ಕಛೇರಿ ಹಾಗೂ ಲಿಪಿಕ ನೌಕರರು/ ಕಛೇರಿ ಸಿಬ್ಬಂದಿ ಮಾತ್ರ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿದೆ.
* ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಅಬಕಾರಿ, ಅರಣ್ಯ, ಅಗ್ನಿಶಾಮಕ ಇಲಾಖೆಗಳ ಕ್ರೀಡಾ ಕೋಟಾದಡಿ ನೇಮಕವಾದ ನೌಕರರು ಭಾಗವಹಿಸಲು ಅವಕಾಶ ಇರುವುದಿಲ್ಲ.
* 1 ಟ್ರ್ಯಾಕ್ ಮತ್ತು 2 ಫೀಲ್ಡ್ ಅಥವಾ 2 ಟ್ರ್ಯಾಕ್ ಮತ್ತು 1 ಫೀಲ್ಡ್ ಸೇರಿ, ಒಟ್ಟು ಮೂರು ಆಟಗಳಲ್ಲಿ ಮಾತ್ರ ಭಾಗವಹಿಸತಕ್ಕದ್ದು.
* 45 ವರ್ಷ ಮೇಲ್ಪಟ್ಟ ಸ್ಪರ್ಧಿಗಳು 45 ವರ್ಷಕ್ಕೊಳಪಟ್ಟವರಿಗೆ ಇರುವ ಸ್ಪರ್ಧೆಗಳಲ್ಲಿ ಸ್ವಂತ ಜವಾಬ್ದಾರಿ ಮೇಲೆ ಭಾಗವಹಿಸಬಹುದು. 45 ವರ್ಷಕ್ಕೊಳಪಟ್ಟವರು 45 ವರ್ಷ ಮೇಲ್ಪಟ್ಟವರ ಜೊತೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
* ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ, ತಕರಾರಿಗೆ ಅವಕಾಶವಿರುವುದಿಲ್ಲ.
* ಏಕಕಾಲದಲ್ಲಿ ಸ್ಪರ್ಧೆಗಳನ್ನು ನಡೆಸಲಿದ್ದು, ಯಾವುದೇ ಕಾರಣಕ್ಕೂ ಸ್ಪರ್ಧಿಗಳನ್ನು ಕಾಯುವುದಿಲ್ಲ.
* ಕರಕುಶಲ ವಸ್ತು ಪ್ರದರ್ಶನದಲ್ಲಿ ಸಿದ್ಧವಿರುವ ವಸ್ತುಗಳ ಪ್ರದರ್ಶನಕ್ಕೆ ಅವಕಾಶವಿರುವುದಿಲ್ಲ. ಸ್ಥಳದಲ್ಲಿ ತಯಾರಾಗಿ (ಮೊದಲನೇ ದಿನ) ಇಡಬೇಕು. 2ನೇ ದಿನ ತೀರ್ಪುಗಾರರಿಂದ ಪರಿಶೀಲಿಸಲಾಗುವುದು.
* ಸ್ಪರ್ಧೆ ನಡೆಯದ ಕ್ರೀಡೆಗಳಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ಕ್ರೀಡಾ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ನೀಡಲಾಗುವುದಿಲ್ಲ.
* ಸಂಘಟಕರೊಡನೆ ಅಥವಾ ತೀರ್ಪುಗಾರರೊಡನೆ ಅಸಭ್ಯವಾಗಿ ವರ್ತಿಸುವ ಕೀಡಾಪಟುಗಳನ್ನು ಕ್ರೀಡಾ ಸ್ಪರ್ಧೆಯಿಂದ ಹೊರಹಾಕುವುದಲ್ಲದೆ, ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತಂದು ತಪ್ಪಿತಸ್ಥ ಕ್ರೀಡಾಪಟುವಿನ ಮೇಲೆ ಸೇವಾ ನಿಯಮಗಳ ರೀತ್ಯಾ ಶಿಸ್ತಿನ ಕ್ರಮ ಜರುಗಿಸಲು ಶಿಫಾರಸ್ಸು ಮಾಡಲಾಗುವುದು.
* ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಸ್ಪರ್ಧೆ ಪ್ರಾರಂಭವಾಗುವ ನಿಗದಿತ ಸಮಯಕ್ಕೆ ಕನಿಷ್ಠ 1 ಗಂಟೆ ಮುಂಚಿತವಾಗಿ ಹಾಜರಿದ್ದು, ಕ್ರೀಡಾ ಸಂಘಟಕನಾಧಿಕಾರಿಗಳಲ್ಲಿ ವರದಿ ಮಾಡಿಕೊಳ್ಳತಕ್ಕದ್ದು.
* ಕ್ರೀಡಾ ಸ್ಪರ್ಧೆಗಳಲ್ಲಿ ಸಂಗೀತ, ನೃತ್ಯ ಹಾಗೂ ನಾಟಕಗಳಲ್ಲಿ ಭಾಗವಹಿಸುವ ಸರ್ಧಿಗಳು ತಮ್ಮದೇ ಆದ ಸಲಕರಣೆಗಳನ್ನು ತರತಕ್ಕದ್ದು. ಸಂಗೀತ ಮತ್ತು ನೃತ್ಯ ಸ್ಪರ್ಧೆಗಳಲ್ಲಿ ಚಲನಚಿತ್ರ ಗೀತೆಯ ತುಣುಕು ಇತ್ಯಾದಿಗಳಿಗೆ ಅವಕಾಶವಿಲ್ಲ (ಫಿಲಂಟ್ಯೂನ್)
* ಸಂಗೀತ, ನೃತ್ಯ, ಚೆಸ್ ಮತ್ತು ಘಟಕ ಸ್ಪರ್ಧೆಗಳಲ್ಲಿ ಪ್ರತ್ಯೇಕವಾಗಿ ಪುರುಷರಿಗೆ ಮತ್ತು ಮಹಿಳೆಯರಿಗೆ ಸ್ಪರ್ಧೆಗಳು ಇರುವುದಿಲ್ಲ.
* ಸ್ಪರ್ಥಿಗಳು ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ಆಯಾ ಜಿಲ್ಲೆಯ ಬಾವುಟದೊಂದಿಗೆ ಭಾಗವಹಿಸುವುದು ಕಡ್ಡಾಯವಾಗಿದೆ. ಉದ್ಘಾಟನಾ ಸಮಾರಂಭಕ್ಕೆ ಮೊದಲು ನೋಂದಾವಣೆ ಮಾಡಿಕೊಳ್ಳುವ ಕ್ರೀಡಾಪಟುಗಳಿಗೆ ಮಾತ್ರ ಹಾಜರಾತಿ ನೀಡಲಾಗುವುದು.
* ಸರ್ಕಾರಿ ಆದೇಶ ದಿನಾಂಕ 27/11/2002ರಂತೆ ರಾಜ್ಯ ಸರ್ಕಾರದ ವತಿಯಿಂದ ನಡೆಸುವ ರಾಜ್ಯಮಟ್ಟದ ಮತ್ತು ಜಿಲ್ಲಾಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಮತ್ತು ಪ್ರಯಾಣ ಭತ್ಯೆ ಸೌಲಭ್ಯಗಳನ್ನು ಷರತ್ತಿಗೊಳಪಟ್ಟು ಮಂಜೂರಾತಿ ನೀಡಿದೆ.
* ಕೆಲವು ನೌಕರರು 2-4 ಕ್ರೀಡೆಗಳಲ್ಲಿ ಭಾಗವಹಿಸಿದ್ದು, ಅಂತಹವರ ಪಟ್ಟಿಯನ್ನು ಕ್ರೂಢೀಕರಿಸಿ ಸಲ್ಲಿಸುವುದು, (ಒಬ್ಬ ನೌಕರ ನಾಲ್ಕು, ಕ್ರೀಡೆಗಳಲ್ಲಿ ಭಾಗವಹಿಸಿದಲ್ಲಿ ಅಂತಹ ನೌಕರನಿಗೆ ಒಂದು ಜೊತೆ ಟ್ರಾಕ್ ಸೂಟ್ ನೀಡಲು ಕ್ರಮವಹಿಸುವುದು).
* ಯಾವ ಸ್ಪರ್ಧೆಗಳಲ್ಲಿ ಕ್ರೀಡಾಪಟುಗಳು ಭಾಗವಹಿಸಿರುವುದಿಲ್ಲವೋ ಅಂತಹ ಸರ್ಧಿಗಳಿಗೆ ಕ್ರೀಡಾಪಟುವಲ್ಲದ ನೌಕರರನ್ನು ಸೇರ್ಪಡೆಗೊಳಿಸುವ ಕ್ರಮವನ್ನು ಕೈಬಿಡುವುದು. ಒಂದು ವೇಳೆ ತಪ್ಪು ಮಾಹಿತಿ ನೀಡಿರುವುದು ಕಂಡುಬಂದಲ್ಲಿ ಅಂತಹ ಸಹಾಯಕ ನಿರ್ದೇಶಕರು ಹಾಗೂ ನೌಕರರ ವಿರುದ್ಧ ಶಿಸ್ತು ಕ್ರಮ ಅನಿವಾರ್ಯವಾಗಲಿದೆ.












Click it and Unblock the Notifications