Vijay Hazare Trophy: ರವಿಚಂದ್ರನ್ ಭರ್ಜರಿ ಶತಕ ಪುದುಚೆರಿ ವಿರುದ್ಧ ಗೆದ್ದ ಕರ್ನಾಟಕ
ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ 383 ರನ್‌ಗಳ ಬೃಹತ್ ಮೊತ್ತವನ್ನು ಚೇಸ್ ಮಾಡಿ ಭರ್ಜರಿ ಗೆಲುವು ಸಾಧಿಸಿದ್ದ ಕರ್ನಾಟಕ ಎರಡನೇ ಪಂದ್ಯದಲ್ಲಿ ಪುದುಚೆರಿ ವಿರುದ್ಧ ಗೆಲುವು ಸಾಧಿಸಿದೆ. ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಕರ್ನಾಟಕ ಅಂಕಪಟ್ಟಿಯಲ್ಲಿ ಮೇಲೇರಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪುದುಚೆರಿ ಕೇವಲ 31 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ವಿದ್ಯಾಧರ್ ಪಾಟೀಲ್ ಪ್ರಮುಖ ನಾಲ್ಕು ವಿಕೆಟ್ ಪಡೆದು ಪುದುಚೆರಿಗೆ ಆಘಾತ ನೀಡಿದ್ದರು.

ಆದರೆ ಅಮನ್ ಖಾನ್ ಮತ್ತು ಕೆಬಿ ಅರುಣ್ ಕಾರ್ತಿಕ್ ತಾಳ್ಮೆಯ ಬ್ಯಾಟಿಂಗ್ ಮಾಡುವ ಮೂಲಕ ಪುದುಚೆರಿಗೆ ಆಸರೆಯಾದರು. ಈ ಜೋಡಿ 6 ವಿಕೆಟ್‌ಗೆ 86 ರನ್ ಕಲೆಹಾಕಿತು. ಅಮನ್ ಖಾನ್ 65 ಎಸೆತಗಳಲ್ಲಿ 45 ರನ್ ಗಳಿಸಿ ಔಟಾದರು. ಬಳಿಕ ಬಂದ ಅಂಕಿತ್ ಶರ್ಮಾ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ನಾಯಕ ಅರುಣ್ ಕಾರ್ತಿಕ್ 71 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಸಾಗರ್ ಉದೇಶಿ 21 ರನ್ ಗಳಿಸಿದರೆ, ಗೌರವ್ ಯಾದವ್ 14 ರನ್ ಗಳಿಸಿದರು. ಅಂತಿಮವಾಗಿ ಪುದುಚೆರಿ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 211 ರನ್ ಕಲೆಹಾಕಿತು. ವಿದ್ಯಾಧರ್ ಪಾಟೀಲ್ 4 ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್ 2 ವಿಕೆಟ್ ಪಡೆದರು. ವಾಸುಕಿ ಕೌಶಿಕ್ ಮತ್ತು ವಿಜಯ್ ಕುಮಾರ್ ವೈಶಾಖ್ ತಲಾ ಒಂದು ವಿಕೆಟ್ ಪಡೆದರು.
ಸ್ಮರಣ್ ಅಜೇಯ ಶತಕ
212 ರನ್‌ಗಳ ಸುಲಭ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಉತ್ತಮ ಆರಂಭ ಪಡೆಯಲಿಲ್ಲ. ನಿಕಿನ್ ಜೋಸ್ 10 ರನ್ ಗಳಿಸಿ ಔಟಾದರೆ, ನಾಯಕ ಮಯಾಂಕ್ ಅಗರ್ವಾಲ್ 18 ರನ್ ಗಳಿಸಿ ಔಟಾದರು. ಅನೀಶ್ ಕೆವಿ 15 ರನ್ ಗಳಿಸಿ ಪೆವಿಲಿಯನ್ ಸೇರಿದರೆ ಮುಂಬೈ ವಿರುದ್ಧ ಶತಕ ಸಿಡಿಸಿದ್ದ ಶ್ರೀಜಿತ್ 1 ರನ್ ಮಾತ್ರ ಗಳಿಸಿ ಔಟಾದರು.
ರವಿಚಂದ್ರನ್ ಸ್ಮರಣ್ ಮಾತ್ರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. 87 ಎಸೆತಗಳಲ್ಲಿ 10 ಬೌಂಡರಿ 3 ಭರ್ಜರಿ ಸಿಕ್ಸರ್ ಸಹಿತ ಅಜೇಯ 100 ರನ್ ಗಳಿಸುವ ಮೂಲಕ ಕರ್ನಾಟಕದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
40.5 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 214 ರನ್ ಗಳಿಸಿದ ಕರ್ನಾಟಕ ಪಂದ್ಯಾವಳಿಯ ಎರಡನೇ ಗೆಲುವು ಸಾಧಿಸಿತು, ಈ ಗೆಲುವಿನ ಮೂಲಕ 8 ಪಾಯಿಂಟ್‌ಗಳೊಂದಿಗೆ ಕರ್ನಾಟಕ ಸಿ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.












Click it and Unblock the Notifications