Karnataka vs Namibia: ನಮೀಬಿಯಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಕರ್ನಾಟಕ
ಕರ್ನಾಟಕ ಕ್ರಿಕೆಟ್ ತಂಡ ನಮೀಬಿಯಾ ವಿರುದ್ಧದ ಕ್ರಿಕೆಟ್ ಸರಣಿಯ ಮೊದಲನೇ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಕರ್ನಾಟಕ ಕ್ರಿಕೆಟ್ ತಂಡ ನಮೀಬಿಯಾ ವಿರುದ್ಧ 5 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದ್ದು, ಮೊದಲನೇ ಪಂದ್ಯ ಗೆಲ್ಲುವ ಮೂಲಕ 1-0 ಮುನ್ನಡೆ ಸಾಧಿಸಿದೆ.
ವಿಂಡೊಕ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ನಮೀಬಿಯಾ 41.1ಓವರ್ ಗಳಲ್ಲಿ 171 ಗಳಿಸುವಷ್ಟರಲ್ಲಿ ಆಲೌಟ್ ಆಯಿತು.

ನಮೀಬಿಯಾ ಪರವಾಗಿ ಶಾನ್ ಫೌಚೆ 24 ರನ್ ಗಳಿಸಿದರೆ, ಗೆರ್‍ಹಾರ್ಡ್ ಎರಾಮಸ್ 31 ರನ್ ಗಳಿಸಿದರು, ಜಾನಿ ಫ್ರೈಲಿಂಕ್ 57 ರನ್ ಗಳಿಸಿ ನಮೀಬಿಯಾ 171 ರನ್ ಗಳಿಸಲು ಸಹಾಯ ಮಾಡಿದರು. ಕರ್ನಾಟಕದ ವೇಗಿ ವಿದ್ವತ್ ಕಾವೇರಪ್ಪ ಮಾರಕ ಬೌಲಿಂಗ್ ಮಾಡಿದರು. 8.1 ಓವರ್ ಗಳಲ್ಲಿ 16 ರನ್ ನೀಡಿ 4 ವಿಕೆಟ್ ಪಡೆದುಕೊಂಡರು. ರಿಶಿ ಬೋಪಣ್ಣ 9 ಓವರ್ ಗಳಲ್ಲಿ 34 ರನ್ ನೀಡಿ 3 ವಿಕೆಟ್ ಪಡೆದುಕೊಂಡರು. ಆದಿತ್ಯ ಗೋಯಲ್, ಆರ್ ಸಮರ್ಥ್, ವಿಜಯ್ ಕುಮಾರ್ ವೈಶಾಕ್ ತಲಾ ಒಂದು ವಿಕೆಟ್ ಪಡೆದರು.
ಕರ್ನಾಟಕದ ಅದ್ಭುತ ಬ್ಯಾಟಿಂಗ್ ಪ್ರದರ್ಶನ
ಸುಲಭದ ಮೊತ್ತವನ್ನು ಬೆನ್ನತ್ತಿದ ಕರ್ನಾಟಕ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಎಲ್‌ಆರ್ ಚೇತನ್ ಮತ್ತು ನಾಯಕ ರವಿಕುಮಾರ್ ಸಮರ್ಥ್ 10.1 ಓವರ್ ಗಳಲ್ಲಿ ಮೊದಲ ವಿಕೆಟ್‌ಗೆ 61 ರನ್ ಕಲೆಹಾಕಿದರು. ಎಲ್‌ಆರ್ ಚೇತನ್ 37 ಎಸೆತಗಳಲ್ಲಿ 37 ರನ್ ಗಳಿಸಿ ಔಟಾದರು. ನಂತರ ಬಂದ ನಿಕಿನ್ ಜೋಸ್, ಆರ್ ಸಮರ್ಥ್ ಜೊತೆಗೂಡಿ ತಂಡವನ್ನು ಗೆಲುವಿನ ದಡ ತಲುಪಿಸಿದರು.
ರವಿಕುಮಾರ್ ಸಮರ್ಥ್ 100 ಎಸೆತಗಳಲ್ಲಿ 8 ಬೌಂಡರಿ ಸಹಿತ 78 ರನ್ ಗಳಿಸಿದರು. ನಿಕಿನ್ ಜೋಸ್ 77 ಎಸೆತಗಳಲ್ಲಿ 2 ಬೌಂಡರಿ ಸಹಿತ 56 ರನ್ ಗಳಿಸಿದರು. ಎರಡನೇ ವಿಕೆಟ್‌ಗೆ ಈ ಜೋಡಿ ಅಜೇಯ 111 ಗಳಿಸಿ ಮಿಂಚಿದರು. 1 ವಿಕೆಟ್ ಪಡೆದು 78 ರನ್ ಗಳಿಸಿದ ರವಿಕುಮಾರ್ ಸಮರ್ಥ್ ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.
ಸರಣಿಯ ಎರಡನೇ ಪಂದ್ಯ ಜೂನ್ 4ರಂದು ಭಾನುವಾರ ನಡೆಯಲಿದೆ. ಭಾರತೀಯ ಕಾಲಮಾನ ಬೆಳಗ್ಗೆ 9.30ಕ್ಕೆ ಪಂದ್ಯ ಆರಂಭವಾಗಲಿದೆ. ಭಾರತದಲ್ಲಿ ಫ್ಯಾನ್‌ಕೋಡ್ ಅಪ್ಲಿಕೇಶನ್‌ನಲ್ಲಿ ಈ ಪಂದ್ಯವನ್ನು ನೇರವಾಗಿ ವೀಕ್ಷಿಸಬಹುದಾಗಿದೆ.












Click it and Unblock the Notifications