ಏಷ್ಯಾ ಬಾಸ್ಕೆಟ್‌ಬಾಲ್ ಅಧ್ಯಕ್ಷ ಹುದ್ದೆಗೇರಿದ ಮೊದಲ ಭಾರತೀಯ ಕೆ. ಗೋವಿಂದರಾಜು
ಕೌಲಾಲಂಪುರ, ಮೇ 24: ಫೆಡರೇಶನ್ ಆಫ್ ಇಂಟರ್‌ನ್ಯಾಷನಲ್ ಬಾಸ್ಕೆಟ್ ಬಾಲ್ ಅಸೋಸಿಯೇಷನ್ (ಎಫ್ಐಬಿಎ) ಏಷ್ಯಾದ ನೂತನ ಅಧ್ಯಕ್ಷರಾಗಿ ಕನ್ನಡಿಗ, ವಿಧಾನ ಪರಿಷತ್ ಸದಸ್ಯ ಡಾ. ಕೆ. ಗೋವಿಂದರಾಜು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.
ಫಿಬಾ ಏಷಿಯಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ @Iam_KGovindaraj ಅವರಿಗೆ ಅಭಿನಂದನೆಗಳು.
— Siddaramaiah (@siddaramaiah) May 23, 2023
ಮೊದಲ ಬಾರಿಗೆ ಕನ್ನಡಿಗನೊಬ್ಬ ಫಿಬಾ ಏಷಿಯಾದ ಅಧ್ಯಕ್ಷ ಸ್ಥಾನ ಅಲಂಕರಿಸಿರುವುದು ನಾಡಿಗೆ ಹೆಮ್ಮೆಯ ಸಂಗತಿ. #FIBAAsia pic.twitter.com/Y9Zvdm5gyV
ಮಂಗಳವಾರ, ಮೇ 23ರಂದು ಕೌಲಾಲಂಪುರದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಕೆ. ಗೋವಿಂದರಾಜು ಸೇರಿ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಏಷ್ಯಾ ಬಾಸ್ಕೆಟ್‌ಬಾಲ್ ಅಧ್ಯಕ್ಷ ಸ್ಥಾನಕ್ಕೇರಿದ ಮೊದಲ ಭಾರತೀಯ ಎನ್ನುವ ಹಿರಿಮೆಗೆ ಕೆ. ಗೋವಿಂದರಾಜು ಪಾತ್ರರಾಗಿದ್ದಾರೆ.

ಈ ವರ್ಷ ಫೆಬ್ರವರಿಯಲ್ಲಿ ಫಿಬಾ ಏಷ್ಯಾ ಅಧ್ಯಕ್ಷ ಹುದ್ದೆಗೆ ಕೆ. ಗೋವಿಂದರಾಜು ಅವರ ಹೆಸರು ನಾಮನಿರ್ದೇಶನಗೊಂಡಿತ್ತು. ಕತಾರ್‌ನ ಶೇಕ್ ಸೌದ್ ಅಲಿ ಅವರಿಂದ ತೆರವಾದ ಹುದ್ದೆಯನ್ನು ಕನ್ನಡಿಗ ಗೋವಿಂದರಾಜು ಅಲಂಕರಿಸಿದ್ದಾರೆ. ಫಿಬಾ ಏಷ್ಯಾದಡಿ 45 ಸದಸ್ಯ ರಾಷ್ಟ್ರಗಳ ಫೆಡರೇಶನ್‌ಗಳಿವೆ.
ಕೆ. ಗೋವಿಂದರಾಜು ಅವರು 2013ರಿಂದ 2018 ರವರೆಗೆ ಅಧಿಕಾರವಧಿಯಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಗೋವಿಂದರಾಜು ಅವರು ಪ್ರಸ್ತುತ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಉಪಾಧ್ಯಕ್ಷರಾಗಿ ಮತ್ತು ಬಾಸ್ಕೆಟ್‌ಬಾಲ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಕರ್ನಾಟಕ ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯರಾಗಿದ್ದಾರೆ.
ಫಿಬಾ ಏಷ್ಯಾ ಅಧ್ಯಕ್ಷರಾದ ಗೋವಿಂದರಾಜು ಅಭಿನಂದಿಸಿದ ಸಿದ್ದರಾಮಯ್ಯ
ಕೆ. ಗೋವಿಂದರಾಜು ಅವರು ಫಿಬಾ ಏಷ್ಯಾ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.
"ಫಿಬಾ ಏಷ್ಯಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ. ಗೋವಿಂದರಾಜು ಅವರಿಗೆ ಅಭಿನಂದನೆಗಳು. ಮೊದಲ ಬಾರಿಗೆ ಕನ್ನಡಿಗನೊಬ್ಬ ಫಿಬಾ ಏಷ್ಯಾದ ಅಧ್ಯಕ್ಷ ಸ್ಥಾನ ಅಲಂಕರಿಸಿರುವುದು ನಾಡಿಗೆ ಹೆಮ್ಮೆಯ ಸಂಗತಿ," ಎಂದು ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.












Click it and Unblock the Notifications