ವೈಭವ್ ಸೂರ್ಯವಂಶಿ 'ಟಿ-20 ರನ್ ಕಿಂಗ್' ಆಗೋದು ಫಿಕ್ಸ್.. ವಿಶ್ವದಾಖಲೆಯ ಬೆನ್ನಲ್ಲೆ ಜೋಸ್ ಬಟ್ಲರ್ ಭವಿಷ್ಯ
Vaibhav Sooryavanshi: ಭಾರತೀಯ ಉದಯೋನ್ಮುಖ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್ ಮೂಲಕವೇ ಇಡೀ ಕ್ರಿಕೆಟ್ ಜಗತ್ತು ತನ್ನೆಡೆಗೆ ತಿರುಗಿನೋಡುವಂತೆ ಮಾಡಿದ್ದಾರೆ. ಇವರ ಆಟಕ್ಕೆ ಮನಸೋಲದವರೇ ಇಲ್ಲ. ಇದೀಗ ಇಂಗ್ಲೆಂಡ್ ತಂಡದ ಹಿರಿಯ ಆಟಗಾರ ಜೋಸ್ ಬಟ್ಲರ್ ಅವರು ಈ 'ವಂಡರ್ ಕಿಡ್' ವೈಭವ್ ಬಗ್ಗೆ ಯಾರೂ ಊಹಿಸಲಾರದ ಅಚ್ಚರಿ ಭವಿಷ್ಯ ನುಡಿದಿದ್ದಾರೆ. ಇದು ಸಾಮಾಜಿಕ ಜಾಲತಾದಲ್ಲಿ ಧೂಳೆಬ್ಬಿಸುತ್ತಿದೆ.
ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರ್, ವಿಕೆಟ್ ಕೀಪರ್ ಜೋಸ್ ಬಟ್ಲರ್ ಟಿ-20 ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ಸಾರ್ವಕಾಲಿಕ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ವೆಸ್ಟ್ ಇಂಡೀಸ್‌ನ ದಿಗ್ಗಜ ಕೀರನ್ ಪೊಲಾರ್ಡ್ ಅವರ ದಾಖಲೆಯನ್ನು ಧೂಳಿಪಟ ಮಾಡಿದ ಬೆನ್ನಲ್ಲೇ ಅವರು ಟೀಮ್ ಇಂಡಿಯಾ ಉದಯೋನ್ಮುಖ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಕುರಿತು ನೀಡಿದ ಹೇಳಿಕೆ ಈಗ ಕ್ರಿಕೆಟ್ ವಲಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಟಿ-20 ಕ್ರಿಕೆಟ್‌ನ ನೂತನ ರನ್ ಕಿಂಗ್ ಬಟ್ಲರ್
ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಪರ ಆಡಿದ ಬಟ್ಲರ್, ವೆಲ್ಶ್ ಫೈರ್ ವಿರುದ್ಧದ ಪಂದ್ಯದಲ್ಲಿ ಕೇವಲ 20 ಎಸೆತಗಳಲ್ಲಿ 6 ಸಿಕ್ಸರ್, 2 ಬೌಂಡರಿಗಳ ನೆರವಿನಿಂದ 51 ರನ್ ಸಿಡಿಸಿ ಅಜೇಯರಾಗಿ ಉಳಿಳಿದರು. ಈ ಸ್ಪೋಟಕ ಇನಿಂಗ್ಸ್‌ನೊಂದಿಗೆ ಬಟ್ಲರ್ ತಮ್ಮ 522 ಟಿ20 ಪಂದ್ಯಗಳಿಂದ ಒಟ್ಟು 14,833 ರನ್‌ಗಳನ್ನು ಕಲೆಹಾಕಿದರು.
ಕೀರನ್ ಪೊಲಾರ್ಡ್ ದಾಖಲೆ ಉಡೀಸ್
ಈ ಮೂಲಕ ಜೋಸ್ ಬಟ್ಲರ್ ಅವರು ಕೀರನ್ ಪೊಲಾರ್ಡ್ (746 ಪಂದ್ಯಗಳಿಂದ 14,803 ರನ್) ಅವರ ದಾಖಲೆಯನ್ನು ಅಳಿಸಿದರು. ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಭಾಜನರಾದರು. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ (14,562 ರನ್) ಮೂರನೇ ಸ್ಥಾನದಲ್ಲಿದ್ದಾರೆ.
ವೈಭವ್ ಸೂರ್ಯವಂಶಿ ಕುರಿತು ಸ್ಪೋಟಕ ಭವಿಷ್ಯ
ವಿಶ್ವದಾಖಲೆ ಬರೆದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಬಟ್ಲರ್ ಅವರು, 'ಟಿ2-0 ಕ್ರಿಕೆಟ್‌ನಲ್ಲಿ ಜಗತ್ತಿನ ಎಲ್ಲಾ ಆಟಗಾರರಿಗಿಂತ ಹೆಚ್ಚು ರನ್ ಗಳಿಸಿದ್ದೇನೆ ಎಂಬುದು ನಿಜಕ್ಕೂ ಹೆಮ್ಮೆಯ ವಿಚಾರ. ಆದರೆ ಮುಂದಿನ ದಿನಗಳಲ್ಲಿ ಯಾವುದೋ ಒಂದು ದಿನ ಖಂಡಿತವಾಗಿಯೂ ಈ ದಾಖಲೆಯನ್ನು ಯಾರಾದರೂ ಮುರಿಯಲಿದ್ದಾರೆ. ನನ್ನ ಪ್ರಕಾರ ಆ ದಾಖಲೆಯನ್ನು ಮುರಿಯುವ ಆಟಗಾರ ಭಾರತದ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಇರಬಹುದು,' ಎಂದು ಹೇಳಿ ಗಮನ ಗಮನ ಸೆಳೆದರು.
ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ವೈಭವ್ ಸೂರ್ಯವಂಶಿ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿರುವ ಬಟ್ಲರ್, ಈ ಯುವ ಎಡಗೈ ಬ್ಯಾಟರ್‌ನ ಭಯವಿಲ್ಲದ ಹಾಗೂ ಸ್ಪೋಟಕ ಆಟವನ್ನು ಹತ್ತಿರದಿಂದ ಕಂಡಿದ್ದಾರೆ. ಆದ್ದರಿಂದ ಈ ಭರವಸೆಯ ಹೇಳಿಕೆಯನ್ನು ನೀಡಿದ್ದಾರೆ ಎನ್ನಲಾಗುತ್ತಿದೆ.
ವೈಭವ್ ಸೂರ್ಯವಂಶಿ ಸಾಧನೆಗಳ ವಿವರ
ಕೇವಲ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಈಗಾಗಲೇ ಭಾರತೀಯ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ಐಪಿಎಲ್ 2026ರ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ 16 ಪಂದ್ಯಗಳನ್ನು ಆಡಿದ್ದ ವೈಭವ್ ಬರೋಬ್ಬರಿ 776 ರನ್ ಗಳಿಸಿ 'ಆರೆಂಜ್ ಕ್ಯಾಪ್' ತಮ್ಮದಾಗಿಸಿಕೊಂಡಿದ್ದರು.
ಇತ್ತೀಚೆಗಷ್ಟೇ ಜಿಂಬಾಬ್ವೆ ವಿರುದ್ಧ ನಡೆದ ಟಿ20ಐ ಸರಣಿಯಲ್ಲಿ 151 ರನ್ ಗಳಿಸಿ 'ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿಯನ್ನೂ ಪಡೆದಿದ್ದಾರೆ. ಈವರೆಗೆ 40 ಟಿ20 ಪಂದ್ಯಗಳನ್ನು ಆಡಿರುವ ಅವರು 216ಕ್ಕೂ ಹೆಚ್ಚಿನ ಭರ್ಜರಿ ಸ್ಟ್ರೈಕ್ ರೇಟ್‌ನಲ್ಲಿ 1,670 ರನ್‌ಗಳನ್ನು ಕಲೆಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಜೋಸ್ ಬಟ್ಲರ್ ಅವರ ಈ ಭವಿಷ್ಯವಾಣಿಯು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಹೊಸ ಭರವಸೆಯನ್ನು ಹುಟ್ಟುಹಾಕಿವೆ. ಅಲ್ಲದೆ, ಬಟ್ಲರ್ ಅವರಿಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.


Click it and Unblock the Notifications
