Jay Shah: ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವಿರೋಧ ಆಯ್ಕೆ
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನವೆಂಬರ್ 2020 ರಿಂದ ಐಸಿಸಿ ಅಧ್ಯಕ್ಷರಾಗಿದ್ದ ಗ್ರೆಗ್ ಬಾರ್ಕ್ಲೇ ಅವರು ಮೂರನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರೆಯದ ಕಾರಣ, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಜಯ್ ಶಾ ಇದೀಗ ಅವಿರೋಧವಾಗಿ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ಬಿಸಿಸಿಐ ಕಾರ್ಯದರ್ಶಿ ಹುದ್ದೆಯನ್ನು ಅವರು ತೊರೆದಿದ್ದಾರೆ.
ವರದಿಗಳ ಪ್ರಕಾರ ಜಯ್ ಶಾ ಅವರಿಗೆ ಐಸಿಸಿ ಮಂಡಳಿಯಿಂದ ಭಾರಿ ಬೆಂಬಲ ಸಿಕ್ಕಿದೆ. 16 ರಲ್ಲಿ 15 ಸದಸ್ಯರು ಜಯ್ ಶಾ ಪರವಾಗಿದ್ದರು. ಇದರಿಂದಾಗಿ ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಆಯ್ಕೆ ಮೊದಲೇ ಖಚಿತವಾಗಿತ್ತು, ಇದೀಗ ಅದು ಅಧಿಕೃತವಾಗಿದೆ. ನಾಮನಿರ್ದೇಶನ ಪ್ರಕ್ರಿಯೆಯು ಆಗಸ್ಟ್ 27 ರಂದು ಮುಕ್ತಾಯಗೊಂಡಿದ್ದು, ಐಸಿಸಿಯಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಕಿರಿಯ ಎನ್ನುವ ಹೆಗ್ಗಳಿಕೆ ಇದೀಗ್ ಜಯ್ ಶಾ ಅವರದ್ದಾಗಿದೆ.

ಬಿಸಿಸಿಐ ಕಾರ್ಯದರ್ಶಿಯಾಗಿ ಕೆಲಸ
ಬಿಸಿಸಿಐ ಕಾರ್ಯದರ್ಶಿಯಾಗಿ ಜಯ್ ಶಾ ಹಲವು ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ ಆರಂಭಿಸಿದ್ದು, ಏಕದಿನ ವಿಶ್ವಕಪ್ ಪಂದ್ಯಾವಳಿ ಆಯೋಜನೆ, ಇತರೆ ಕ್ರೀಡೆಗಳಿಗೂ ಆರ್ಥಿಕ ಸಹಾಯ ಮಾಡುವ ಮೂಲಕ ಗಮನ ಸೆಳೆದರು. ಮಹಿಳಾ ಕ್ರಿಕೆಟ್ ಜನಪ್ರಿಯಗೊಳಿಸುವ ಕನಸನ್ನು ಜಯ್ ಶಾ ಹಲವು ಬಾರಿ ವ್ಯಕ್ತಪಡಿಸಿದ್ದರು, ಮಹಿಳಾ ಪ್ರೀಮಿಯರ್ ಲೀಗ್ ಅದರ ಭಾಗವಾಗಿತ್ತು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇದೀಗ ವಿಶ್ವದ ಶ್ರೀಮಂತ ಲೀಗ್ ಆಗಿ ಬೆಳೆದಿದೆ. ಜಗತ್ತಿನಾದ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ಕ್ರೀಡಾ ಲೀಗ್‌ಗಳಲ್ಲಿ ಒಂದಾಗಿದೆ. ಪುರುಷರ ಮತ್ತು ಮಹಿಳಾ ಕ್ರಿಕೆಟ್ ನಡುವಿನ ವೇತನ ಸಮಾನತೆ ಮತ್ತು ದೇಶೀಯ ಕ್ರಿಕೆಟಿಗರ ವೇತನದಲ್ಲಿ ಉತ್ತೇಜನ ನೀಡುವ ಮೂಲಕ ಜಯ್ ಶಾ ಕ್ರಿಕೆಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.












Click it and Unblock the Notifications