ವೈಭವ್ ಸೂರ್ಯವಂಶಿಗೆ ಹೆದರಿದ್ರಾ ನ್ಯೂಜಿಲೆಂಡ್ ಬೌಲರ್? ಆರ್‌ಸಿಬಿ ಸ್ಟಾರ್ ಜೇಕಬ್ ಡಫಿ ಅಚ್ಚರಿ ಹೇಳಿಕೆ
Vaibhav Sooryavanshi: ಟೀಮ್ ಇಂಡಿಯಾ ಕ್ರಿಕೆಟ್‌ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್‌ನಿಂದಲೇ ಹೆಸರಾಗಿದ್ದಾರೆ. ಅವರು ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟಿ20ಗೆ ಆಯ್ಕೆಯಾಗಿದ್ದು, ವಂಡರ್ ಕಿಡ್ ಕಟ್ಟಿಹಾಕಲು ಕಿವೀಸ್ ಸಿದ್ಧತೆ ಹೇಗಿದೆ ಗೊತ್ತಾ? ಈ ಕುರಿತು ಆರ್‌ಸಿಬಿ ಸ್ಟಾರ್ ಬೌಲರ್ ಜೇಕಬ್ ಡಫಿ ಬಿಚ್ಚಿಟ್ಟ ಮಹತ್ವದ ಮಾಹಿತಿ ಇಲ್ಲಿದೆ ನೋಡಿ.
ಟೀಮ್ ಇಂಡಿಯಾ 15 ವರ್ಷದ ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ನಿಯಂತ್ರಿಸಲು ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಬಲವಾದ ತಂತ್ರಗಳನ್ನು ರೂಪಿಸಿದೆ. ಗುರುವಾರ (ಅಕ್ಟೋಬರ್ 22) ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಗೂ ಮುನ್ನ, ನ್ಯೂಜಿಲೆಂಡಿನ ವೇಗಿ ಹಾಗೂ ಆರ್‌ಸಿಬಿ ಸ್ಟಾರ್ ಬೌಲರ್ ಜೇಕಬ್ ಡಫಿ ಅವರು ಸೂರ್ಯವಂಶಿ ವಿರುದ್ಧ ತಮ್ಮ ತಂಡವು ನಡೆಸಿರುವ ವಿಶೇಷ ಸಿದ್ಧತೆಗಳ ಕುರಿತು ಮಾತನಾಡಿದ್ದಾರೆ.

ವೈಭವ್ ಸೂರ್ಯವಂಶಿ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ನ್ಯೂಜಿಲೆಂಡ್ ತಂಡವು ಸೂಕ್ಷ್ಮವಾಗಿ ಅಧ್ಯಯನ ಮಾಡಿದೆ. ಈ ಕುರಿತು ಜೇಕಬ್ ಡಫಿ ಸುದ್ದಿಗಾರರೊಂದಿಗೆ ಮಾತನಾಡಿ, 'ವೈಭವ್ ಅದ್ಭುತ ಪ್ರತಿಭೆ. ಐಪಿಎಲ್‌ನಲ್ಲಿ ಅವರು ಬಿರುಗಾಳಿ ಎಬ್ಬಿಸಿದ್ದಾರೆ. ಪ್ರತಿಯೊಂದು ಪಂದ್ಯದಲ್ಲೂ 250ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸುತ್ತಾ ಸ್ಥಿರತೆ ಕಾಯ್ದುಕೊಳ್ಳುವುದು ನಿಜಕ್ಕೂ ಅದ್ಭುತ. ಅವರ ಆಟದ ಬಗ್ಗೆ ನಾವು ಸ್ಪಷ್ಟವಾದ ವಿಶ್ಲೇಷಣೆ ನಡೆಸಿದ್ದು, ಅವರನ್ನು ಕಟ್ಟಿಹಾಕಲು ಸೂಕ್ತ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೇವೆ,' ಎಂದು ಹೇಳಿದ್ದಾರೆ.
ಹೋಮ್ ಪಿಚ್ ಪರಿಸ್ಥಿತಿಯ ಸವಾಲು
ವೈಭವ್ ಸೂರ್ಯವಂಶಿ ಅವರು ಇಂಗ್ಲೆಂಡ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಆದರೂ ನ್ಯೂಜಿಲೆಂಡ್‌ನ ವೇಗ ಮತ್ತು ಬೌನ್ಸ್ ಇರುವ ಪಿಚ್‌ಗಳು ಅವರಿಗೆ ಹೊಸ ಸವಾಲನ್ನು ನೀಡಲಿವೆ ಎಂದು ಡಫಿ ಅಭಿಪ್ರಾಯಪಟ್ಟಿದ್ದಾರೆ. ಮೊದಲ ಟಿ20 ಪಂದ್ಯವು ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯಲಿದ್ದು, ಅಲ್ಲಿನ ವಾತಾವರಣವು ಭಾರತದ ಯುವ ಆರಂಭಿಕ ಬ್ಯಾಟರ್‌ಗೆ ಒಂದು ಪರೀಕ್ಷೆಯಾಗಲಿದೆ.
'ಹೈದರಾಬಾದ್‌ನಂತೆ ರನ್ ಹೊಳೆ ಹರಿಯದಿರಲಿ'
ಪಂದ್ಯಾವಳಿಯ ಪಿಚ್ ಕುರಿತು ಮಾತನಾಡಿದ ಡಫಿ, ಹ್ಯಾಗ್ಲಿ ಓವಲ್‌ನ ಮುಖ್ಯ ಕ್ಯುರೇಟರ್ ಬಳಿ ಪಿಚ್ ಬೌನ್ಸ್ ಹಾಗೂ ವೇಗಕ್ಕೆ ಸಹಕರಿಸುವಂತೆ ವಿನಂತಿಸಿರುವುದಾಗಿ ತಮಾಷೆಯಾಗಿ ಹೇಳಿದರು. 'ನಮಗೆ ಕೇವಲ ಬೌಲರ್‌ಗಳಿಗೆ ಬೆಂಬಲ ನೀಡುವ ಬೌನ್ಸ್ ಸಿಕ್ಕರೆ ಸಾಕು, ಅದು ಹೈದರಾಬಾದ್‌ನಂತಹ ಬ್ಯಾಟಿಂಗ್ ಸ್ನೇಹಿ ಪಿಚ್ ಆಗದಿರಲಿ ಎಂಬುದು ನನ್ನ ಆಸೆ,' ಎಂದು ಅವರು ತಿಳಿಸಿದರು.
ವೈಭವ್ ಸೂರ್ಯವಂಶಿ ಅವರ ಸಾಧನೆ
ವಂಡರ್ ಕಿಡ್ ವೈಭವ್ ಸೂರ್ಯವಂಶಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಬಳಿಕ ಜಪಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲಿಸಿಕೊಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.
ಮುಂಬರುವ ಐದು ಪಂದ್ಯಗಳ ಟಿ20 ಸರಣಿಯು ವೈಭವ್ ಸೂರ್ಯವಂಶಿ ಅವರ ವೃತ್ತಿಜೀವನಕ್ಕೆ ಪ್ರಮುಖ ಮೈಲಿಗಲ್ಲಾಗಲಿದೆ. ನ್ಯೂಜಿಲೆಂಡ್‌ನ ಸವಾಲಿನ ವಾತಾವರಣದಲ್ಲಿ ಮತ್ತು ಕೀವೀಸ್ ಬೌಲರ್‌ಗಳ ತಂತ್ರಗಳ ವಿರುದ್ಧ ಈ ಯುವ ತಾರೆ ಹೇಗೆ ಬ್ಯಾಟ್ ಬೀಸಲಿದ್ದಾರೆ ಎಂಬುದನ್ನು ನೋಡಲು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಅವರಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗುತ್ತದೆಯೇ ಎಂದು ಕಾದುನೋಡಬೇಕಿದೆ. ಒಟ್ಟಿನಲ್ಲಿ ವೈಭವ್ ಸೂರ್ಯವಂಶಿ ಕಟ್ಟಿಹಾಕಲು ಕಿವೀಸ್ ಏನೆಲ್ಲಾ ತಯಾರಿ ಮಾಡಿಕೊಂಡಿದೆ ಎಂದು ನೀಡುರುವ ಹೇಳಿಕೆ ಇದೀಗ ಭಾರಿ ವೈರಲ್ ಆಗುತ್ತಿದೆ.


Click it and Unblock the Notifications
