IPL 2027: ಐಪಿಎಲ್ ರಿಟೆನ್ಷನ್ ಡೆಡ್‌ಲೈನ್ ವಿಸ್ತರಣೆ..
IPL 2027 Auction: ಇಂಡಿಯನ್ ಪ್ರೀಮಿಯರ್ ಲೀಗ್ 2027 ಮಿನಿ ಹರಾಜಿಗೂ ಮುನ್ನ ಬಿಸಿಸಿಐ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸುವ ಅಂತಿಮ ದಿನಾಂಕವನ್ನು ವಿಸ್ತರಣೆ ಮಾಡಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯು ಸೋಮವಾರ (ನವೆಂಬರ್ 2) ಎಲ್ಲಾ ಐಪಿಎಲ್ ಫ್ರಾಂಚೈಸಿಗಳಿಗೆ ಈ ಹೊಸ ಬದಲಾವಣೆಯ ಕುರಿತು ಅಧಿಕೃತ ಮಾಹಿತಿ ರವಾನಿಸಿದೆ. ಈ ಹಿಂದೆ ತಮ್ಮ ರಿಟೇನ್ ಮಾಡಿಕೊಂಡ ಆಟಗಾರರ ಪಟ್ಟಿಯನ್ನು ನವೆಂಬರ್ 15 ರೊಳಗೆ ಸಲ್ಲಿಸಬೇಕು ಎಂದು ತಿಳಿಸಿತ್ತು.

ದಿನಾಂಕ ಬದಲಾವಣೆಗೆ ಪ್ರಮುಖ ಕಾರಣ
ಇದೀಗ ರಿಟೆನ್ಷನ್ ದಿನಾಂಕವನ್ನು ಮುಂದೂಡಲಾಗಿದೆ. ಫ್ರಾಂಚೈಸಿಗಳಿಗೆ ತಮ್ಮ ಅಂತಿಮ ಪಟ್ಟಿ ಸಿದ್ಧಪಡಿಸಲು ಹೆಚ್ಚುವರಿಯಾಗಿ ಎರಡು ದಿನಗಳ ಕಾಲಾವಕಾಶ ಸಿಕ್ಕಿದೆ. ನವೆಂಬರ್ 15ರಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಐದನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯಲಿದೆ. ಅಂದು ಪ್ರಮುಖ ಪಂದ್ಯಾವಳಿ ಇರುವುದರಿಂದ ಬಿಸಿಸಿಐ ಈ ದಿನಾಂಕವನ್ನು ನವೆಂಬರ್ 17ಕ್ಕೆ ಮರುನಿಗದಿಪಡಿಸಿದೆ.
ಐಪಿಎಲ್ 2027 ಹರಾಜಿನ ಪ್ರಮುಖ ದಿನಾಂಕಗಳು
ಆಟಗಾರರ ನೋಂದಣಿ ಪ್ರಕ್ರಿಯೆ ನವೆಂಬರ್ 2ರಿಂದ ಆರಂಭವಾಗಿದ್ದು, ನವೆಂಬರ್ 23ರ ವರೆಗೆ ಅವಕಾಶ ನೀಡಲಾಗಿದೆ. ಫ್ರಾಂಚೈಸಿಗಳು ತಮ್ಮ ಆದ್ಯತೆಯ ಆಟಗಾರರ ಪಟ್ಟಿಯನ್ನು ಡಿಸೆಂಬರ್ 1ರೊಳಗೆ ಸಲ್ಲಿಸಬೇಕಿದೆ. ಹರಾಜಿನಲ್ಲಿ ಭಾಗವಹಿಸುವವರ ಅಂತಿಮ ಪಟ್ಟಿಯನ್ನು ಬಿಸಿಸಿಐ ಡಿಸೆಂಬರ್ 3ರಂದು ಪ್ರಕಟಿಸಲಿದೆ.
ಐಪಿಎಲ್ 2027 ಹರಾಜು ದಿನಾಂಕದಲ್ಲೂ ಬದಲಾವಣೆ ಸಾಧ್ಯತೆ
ಐಪಿಎಲ್ 2027ರ ಮಿನಿ ಹರಾಜನ್ನು ಡಿಸೆಂಬರ್ 16ರಂದು ಗೋವಾದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಆದರೆ ಅದೇ ದಿನ (ಡಿಸೆಂಬರ್ 16) ಬೆಂಗಳೂರಿನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಏಕದಿನ ಪಂದ್ಯ ನಿಗದಿಯಾಗಿದೆ. ಒಂದೇ ದಿನ ಪಂದ್ಯ ಹಾಗೂ ಹರಾಜು ಪ್ರಕ್ರಿಯೆ ಎದುರಾಗಿರುವುದರಿಂದ ಹರಾಜು ದಿನಾಂಕ ಅಥವಾ ಪಂದ್ಯದ ದಿನಾಂಕ ಬದಲಾಗುವ ಸಾಧ್ಯತೆಯಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳ ಪ್ರಕಾರ, ಪಂದ್ಯದ ದಿನಾಂಕವನ್ನು ಒಂದು ದಿನ ಮುಂದೂಡಿಕೆ ಮಾಡಿದ ಡಿಸೆಂಬರ್ 17ಕ್ಕೆ ಆಯೋಜಿಸುವ ಆಲೋಚನೆಯೂ ನಡೆಯುತ್ತಿದೆ. ಈ ಕುರಿತು ಮಂಡಳಿಯಿಂದ ಇನ್ನಷ್ಟೇ ಅಧಿಕೃತ ಸ್ಪಷ್ಟನೆ ಬರಬೇಕಿದೆ.
ಹಾರ್ದಿಕ್ ಸೇರ್ಪಡೆಗೆ ಮುಂದೆ ಬಂದ ತಂಡಗಳು
ಐಪಿಎಲ್ 2026 ಮುಕ್ತಾಯದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ಭವಿಷ್ಯದ ಕುರಿತು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗಳು ಆರಂಭವಾಗಿವೆ. 2027ರ ಐಪಿಎಲ್ ಆವೃತ್ತಿಗೂ ಮುನ್ನ ಹಾರ್ದಿಕ್ ಬೇರೆ ತಂಡಕ್ಕೆ ವರ್ಗಾವಣೆಯಾಗಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿದ್ದು, ಸರಿಸುಮಾರು 6 ಫ್ರಾಂಚೈಸಿಗಳು ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿವೆ ಎನ್ನಲಾಗಿದೆ.
ವರದಿಯ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರನ್ನು ಬಿಟ್ಟುಕೊಡುವ ಸಂಭಾವ್ಯ ಟ್ರೇಡ್ ಒಪ್ಪಂದದಲ್ಲಿ ಮುಂಬೈ ಇಂಡಿಯನ್ಸ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮುಂದೆ ಕಠಿಣ ಷರತ್ತೊಂದನ್ನು ಇಟ್ಟಿದೆ. ಹಾರ್ದಿಕ್ ಬದಲಿಗೆ ಯುವ ವಿಕೆಟ್‌ಕೀಪರ್-ಬ್ಯಾಟರ್ ಅಂಗ್‌ಕ್ರಿಶ್ ರಘುವಂಶಿ ಮತ್ತು ವೇಗದ ಬೌಲರ್ ಹರ್ಷಿತ್ ರಾಣಾ ಅವರನ್ನು ನೀಡುವಂತೆ ಕೆಕೆಆರ್ ತಂಡವನ್ನು ಸಂಪರ್ಕಿಸಿದೆ.
ಮುಂಬೈ ತಂಡಕ್ಕೆ ಸದ್ಯ ಭಾರತೀಯ ವಿಕೆಟ್ ಕೀಪರ್ ಮತ್ತು ಬಲವಾದ ವೇಗದ ಬೌಲಿಂಗ್ ಬೆಂಬಲ ಅಗತ್ಯ ಇರುವುದರಿಂದ ಈ ಇಬ್ಬರು ಆಟಗಾರರ ಮೇಲೆ ಕಣ್ಣಿಟ್ಟಿದೆ. ಆದರೆ, ತಮ್ಮ ಭವಿಷ್ಯದ ಆಟಗಾರರಾಗಿರುವ ರಘುವಂಶಿ ಹಾಗೂ ಹರ್ಷಿತ್ ರಾಣಾ ಅವರನ್ನು ಬಿಟ್ಟುಕೊಡಲು ಕೆಕೆಆರ್ ಫ್ರಾಂಚೈಸಿ ತೀವ್ರ ಹಿಂದೇಟು ಹಾಕುತ್ತಿದೆ.
ಅಷ್ಟೇ ಅಲ್ಲದೆ, ತಂಡದ ಪ್ರಮುಖ ಆಟಗಾರರಾದ ಸುನಿಲ್ ನರೈನ್, ವರುಣ್ ಚಕ್ರವರ್ತಿ ಮತ್ತು ಉಪನಾಯಕ ರಿಂಕು ಸಿಂಗ್ ಅವರನ್ನು ಯಾವುದೇ ಕಾರಣಕ್ಕೂ ಟ್ರೇಡ್ ಒಪ್ಪಂದದಲ್ಲಿ ಸೇರಿಸುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ಕೆಕೆಆರ್ ತಳೆದಿದೆ. ಹಾರ್ದಿಕ್ ಅವರ ಗಾಯದ ಸಮಸ್ಯೆಗಳು ಮತ್ತು ಫಿಟ್‌ನೆಸ್ ಕುರಿತ ಕಳವಳಗಳು ಕೂಡ ಕೆಕೆಆರ್ ಆರಂಭದಲ್ಲಿ ಹೆಚ್ಚಿನ ಆಸಕ್ತಿ ತೋರದಿರಲು ಕಾರಣ ಎನ್ನಲಾಗಿದೆ.
ಕೆಕೆಆರ್ ಮಾತ್ರವಲ್ಲದೆ ಹಾರ್ದಿಕ್ ಪಾಂಡ್ಯ ಅವರನ್ನು ಪಡೆಯಲು ಇತರ ಪ್ರಮುಖ ಫ್ರಾಂಚೈಸಿಗಳು ಕೂಡ ರೇಸ್‌ನಲ್ಲಿವೆ.
* ರಾಜಸ್ಥಾನ್ ರಾಯಲ್ಸ್ (RR): ಹಾರ್ದಿಕ್ ಪಾಂಡ್ಯಗೆ ಪ್ರತಿಯಾಗಿ ಯಶಸ್ವಿ ಜೈಸ್ವಾಲ್ ಮತ್ತು ರವಿ ಬಿಷ್ಣೋಯ್ ಅವರನ್ನು ಪಡೆಯಲು ಮುಂಬೈ ಇಂಡಿಯನ್ಸ್ ಪ್ರಸ್ತಾಪಿಸಿದೆ ಎಂಬ ಮಾತುಗಳು ಕೇಳಿಬಂದಿವೆ.
* ಚೆನ್ನೈ ಸೂಪರ್ ಕಿಂಗ್ಸ್ (CSK): ಸಿಎಸ್‌ಕೆಯ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಅವರನ್ನು ನೀಡುವಂತೆ ಮುಂಬೈ ಆಸಕ್ತಿ ತೋರಿತ್ತಾದರೂ, ಚೆನ್ನೈ ಫ್ರಾಂಚೈಸಿ ಈ ಪ್ರಸ್ತಾಪವನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.
ಐಪಿಎಲ್ 2027ರ ಆಟಗಾರರ ರಿಟೆನ್ಷನ್ ಗಡುವಿಗೆ ಮುನ್ನ ಹಾರ್ದಿಕ್ ಪಾಂಡ್ಯ ಅವರ ಟ್ರೇಡಿಂಗ್ ಕುರಿತು ಅಂತಿಮ ಚಿತ್ರಣ ಸಿಗುವ ಸಾಧ್ಯತೆಯಿದೆ. ಕೆಕೆಆರ್ ತನ್ನ ನಿಲುವನ್ನು ಬದಲಿಸಿ ಒಪ್ಪಂದಕ್ಕೆ ಬರಲಿದೆಯೇ ಅಥವಾ ಮುಂಬೈ ಇಂಡಿಯನ್ಸ್ ಹಾರ್ದಿಕ್ ಅವರನ್ನು ಇನ್ನೊಂದು ಆವೃತ್ತಿಗೆ ನಾಯಕನಾಗಿ ಉಳಿಸಿಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications
