RCB Mangesh Yadav: ಆರ್‌ಸಿಬಿ ಮಂಗೇಶ್ ಯಾದವ್‌ಗೆ ₹5,20,00,000 ನೀಡಿರುವುದರ ಹಿಂದಿದೆ ಬಿಗ್ ಪ್ಲ್ಯಾನ್
RCB Mangesh Yadav: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್ ಕಿಂಗ್ಸ್ ಮಣಿಸಿ ಚೊಚ್ಚಲ ಟ್ರೋಫಿ ಗೆದ್ದುಕೊಂಡಿತು. ಇನ್ನೂ ಮುಂದಿನ ಬಾರಿಯೂ ಟ್ರೋಫಿ ಗೆಲ್ಲಲು ಮಿನಿ ಹರಾಜಿನಲ್ಲಿ ಆಲ್‌ರೌಂಡರ್ ಆಟಗಾರರಿಗೆ ಗಾಳ ಹಾಕಿ ತಂಡವನ್ನು ಮತ್ತಷ್ಟು ಬಲಿಷ್ಠಪಡಿಸಿಕೊಂಡಿದೆ. ಈ ಪೈಕಿ ಯುವ ಆಟಗಾರ ಮಂಗೇಶ್ ಯಾದವ್‌ಗೆ ಕೋಟಿ.. ಕೋಟಿ ಹಣ ಸುರಿದಿದೆ. ಹಾಗಾದ್ರೆ, ಈತ ಯಾರು ಎಂದು ಇಲ್ಲಿ ತಿಳಿಯಿರಿ.
ಐಪಿಎಲ್ 2025 ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ನಡೆದಿದ್ದು, ಈ ವೇಳೆ ಆರ್‌ಸಿಬಿಯು ಎಂಟು ಆಟಗಾರರನ್ನು ಖರೀದಿ ಮಾಡಿದೆ. ಇದರಲ್ಲಿ ಬಹುತೇಕ ಆಲ್‌ರೌಂಡರ್‌ಗಳೇ ಇದ್ದಾರೆ. ಫ್ರಾಂಚೈಸಿಯು ಅತೀ ಹೆಚ್ಚು ಹಣ ಸುರಿದಿದ್ದು ಅಂತಾರಾಷ್ಟ್ರೀಯ ಆಟಗಾರ ವೆಂಕಟೇಶ್ ಅಯ್ಯರ್‌ಗೆ. ಎರಡನೇಯದಾಗಿ ಯುವ ಆಟಗಾರ 23 ವರ್ಷದ ಮಂಗೇಶ್ ಯಾದವ್‌ಗೆ ನೀಡಿದೆ.

ದುಬಾರಿ ಹಣಕ್ಕೆ ಖರೀದಿ: ಆರ್‌ಸಿಬಿ ₹7,00,00,000ಗೆ ನೀಡಿ ಅಂರಾಷ್ಟ್ರೀಯ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ಅವರನ್ನು ಕೊಂಡುಕೊಂಡಿತು. ಇನ್ನೂ ಎರಡನೇಯದಾಗಿ ಅತೀ ಹೆಚ್ಚು ಹಣಕ್ಕೆ ಖರೀದಿಸಿದ್ದು 23 ವರ್ಷದ ಮಂಗೇಶ್ ಯಾದವ್ ಅವರನ್ನು. ಹಾಗಾದ್ರೆ, ಇವರನ್ನು ಆರ್‌ಸಿಬಿ ಆಯ್ಕೆ ಮಾಡಿಕೊಂಡಿದ್ದೇಕೆ? ಇವರ ಹಿನ್ನೆಲೆ ಏನು ಎನ್ನುವ ಪ್ರಶ್ನೆಗಳು ಹುಟ್ಟುವುದು ಸಹಜ. ಆದರೆ, ಇದಕ್ಕೆ ಪ್ರಮುಖ ಕಾರಣ ಇದೆ.
ಐಪಿಎಲ್ ಫ್ರಾಂಚೈಸಿಗಳು ಹೊಸ ಆಟಗಾರರ ಮೇಲೆ ಕೋಟಿಗಟ್ಟಲೇ ಹಣವನ್ನು ಕಾರಣವಿಲ್ಲದೆ ಸುರಿಯುವುದಿಲ್ಲ. ಪ್ರದರ್ಶನ ಕಂಡು ಈ ತೀರ್ಮಾನಕ್ಕೆ ಬರುತ್ತವೆ. ಹಾಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುವ ಆಟಗಾರ ಮಂಗೇಶ್ ಯಾದವ್‌ಗೆ ಇಷ್ಟೊಂದು ಹಣ ಸುರಿದಿರುವುದ ಹಿಂದೆ ಮಾಸ್ಟರ್ ಪ್ಲ್ಯಾನ್ ಇದೆ.
ಮಂಗೇಶ್ ಕೊಂಡುಕೊಳ್ಳಲು ತೀವ್ರ ಪೈಪೋಟಿ: ಮಂಗೇಶ್ ಯಾದವ್ ಮಧ್ಯಪ್ರದೇಶದ ಆಲ್‌ರೌಂಡರ್ ಕ್ರಿಕೆಟರ್ ಆಗಿದ್ದಾರೆ. ಇವರು ಎಡಗೈ ಬ್ಯಾಟರ್ ಹಾಗೂ ವೇಗದ ಬೌಲರ್ ಆಗಿದ್ದಾರೆ. ಆರ್‌ಸಿಬಿಯು ಮಿನಿ ಹರಾಜಿನಲ್ಲಿ ತನ್ನ ನಾಲ್ಕನೇ ಖರೀದಿಯಾಗಿ ಇವರನ್ನು ಸೇರ್ಪಡೆ ಮಾಡಿಕೊಂಡಿದೆ. ಮೂಲ ಬೆಲೆ 30,00,000 ರೂಗಳೊಂದಿಗೆ ಹರಾಜಿಗೆ ಬಂದ ಮಂಗೇಶ್ ಅವರ ಖರೀದಿಗೆ ಎಸ್‌ಆರ್‌ಎಚ್ ಮತ್ತು ಆರ್‌ಸಿಬಿ ನಡುವೆ ತೀವ್ರ ಪೈಪೋಟಿ ನಡೆಯಿತು. ಆದರೆ, ಕೊನೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಅವರನ್ನು ₹5,20,00,000ಗೆ ಖರೀದಿಸಿ ಮಾಡಿತು.
ಮಂಗೇಶ್ ಯಾದವ್‌ಗೆ ಮಣೆ ಹಾಕಲು ಕಾರಣವೇನು?: ಮಂಗೇಶ್ ಯಾದವ್ ಅವರು ಎಡಗೈ ವೇಗದ ಬೌಲರ್ ಆಗಿದ್ದು, ಬ್ಯಾಟಿಂಗ್ ಸಹ ಮಾಡಲಿದ್ದಾರೆ. ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದರ್ ಪ್ರತಿನಿಧಿಸುವ ಮಧ್ಯಪ್ರದೇಶ ತಂಡದ ಪರ ದೇಶಿ ಕ್ರಿಕೆಟ್ ಆಡುತ್ತಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಇದನ್ನು ಗಮನಿಸಿದ ಪಾಟೀದಾರ್ ಇವರನ್ನು ಕೊಂಡುಕೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಆಧಾರದ ಮೇಲೆ ಆರ್‌ಸಿಬಿಯು ಮಂಗೇಶ್ ಯಾದವ್ ಅವರಿಗೆ ಮಣೆ ಹಾಕಿದೆ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲದೆ, 2025ರ ಎಂಪಿ ಟಿ-20 ಲೀಗ್ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ 14 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಜೊತೆಗೆ ಬುಚಿ ಬಾಬು ಟೂರ್ನಮೆಂಟ್‌ನಲ್ಲಿ ಪಂಜಾಬ್ ವಿರುದ್ಧ ಅವರ 75 ರನ್‌ಗಳ ಇನ್ನಿಂಗ್ಸ್ ಸಹ ಆಡಿದ್ದರು. ಪವರ್‌ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಮಾರಕ ಬೌಲಿಂಗ್ ದಾಳಿ ಮಾಡಬಲ್ಲ ಜೊತೆಗೆ ಸ್ಫೋಟಕ ಬ್ಯಾಟರ್ ಕೂಡ ಆಗಿದ್ದಾರೆ. ಇದೇ ಕಾರಣಕ್ಕೆ ಆರ್‌ಸಿಬಿ ಇವರನ್ನು ಕೊಂಡುಕೊಂಡಿದೆ. ಇದೀಗ ಮಧ್ಯಪ್ರದೇಶದ ಕ್ರಿಕೆಟಿಗ ಮಂಗೇಶ್ ಯಾದವ್, ರಜತ್ ಪಾಟಿದಾರ್ ನಾಯಕತ್ವದಲ್ಲಿ ಐಪಿಎಲ್ 2025 ಚಾಂಪಿಯನ್ ಆದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕರೆ ಇವರು ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎಂದು ಕಾದುನೋಡಬೇಕಿದೆ.












Click it and Unblock the Notifications