RCB Vs PBKS: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಭರ್ಜರಿ ಅರ್ಧ ಶತಕ: ಪಂಜಾಬ್ ವಿರುದ್ಧ ಸೇಡು ತೀರಿಸಿಕೊಂಡ ಆರ್‌ಸಿಬಿ
IPL 2025 RCB Vs PBKS: ಐಪಿಎಲ್ 2025ನೇ ಆವೃತ್ತಿಯ 37ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತವರು ಮೈದಾನ ಬೆಂಗಳೂರು ಚಿನ್ನಸ್ವಾಮಿಯಲ್ಲಿ ಪಂಜಾಬ್ ವಿರುದ್ಧ ಸೋತಿದ್ದ ಸೇಡನ್ನು ತೀರಿಸಿಕೊಂಡಿದೆ. ಹಾಗಾದ್ರೆ ಯಾರೆಲ್ಲಾ ಎಷ್ಟು ರನ್‌ಗಳನ್ನು ಚಚ್ಚಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಇಂದಿನ ಪಂದ್ಯ ಚಂಡೀಗಢದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಟಾಸ್ ಗೆದ್ದ ಆರ್‌ಸಿಬಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳ್ಲಿ 6 ವಿಕೆಟ್‌ಗಳ ಕಳೆದುಕೊಂಡು 157 ರನ್‌ಗಳನ್ನು ಕಲೆಹಾಕಿ ಸಾಧಾರಣ 158 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ್ದ ಆರ್‌ಸಿಬಿ ಕೇವಲ 18.5 ಓವರ್‌ಗಳಿಗೆ 3 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕುವ ಮೂಲಕ ಸುಲಭವಾಗಿ ಗೆದ್ದು ಬೀಗಿತು.

ಪಂಜಾಬ್ ಕಿಂಗ್ಸ್ ನೀಡಿದ್ದ 158 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡವು ಮೊದಲ ಓವರ್‌ನಲ್ಲೇ ಫಿಲ್ ಸಾಲ್ಟ್ ವಿಕೆಟ್ ಕಳೆದುಕೊಂಡಿತು. ಫಿಲ್ ಸಾಲ್ಟ್ ಕೇವಲ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಆಕರ್ಷಕ ಶತಕದ 103 ರನ್‌ಗಳ ಜೊತೆಯಾಟ ಆಡಿ ಮಿಂಚಿದರು. ಅಲ್ಲದೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಬಳಿಕ ಪಡಿಕ್ಕಲ್ ಕ್ಯಾಚ್ ಔಟ್ ಆಗಿ ಪೆವಿಲಿಯನ್‌ನತ್ತ ತೆರಳಿದರು.
ದೇವದತ್ ಪಡಿಕ್ಕಲ್ 35 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಿತ 61 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಇನ್ನು ವಿರಾಟ್ ಕೊಹ್ಲಿ ಅವರು ಕೊನೆವರೆಗೂ ಜವಾಬ್ದಾರಿಯುತ ಬ್ಯಾಟಿಂಗ್ ಆಡಿದರು. ಅವರು 54 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ 73 ರನ್ ಕಲೆಹಾಕುವ ಮೂಲಕ ಅಜೇಯರಾಗಿ ಉಳಿದರು.
ನಾಯಕ ರಜತ್ ಪಟಿದಾರ್ 12 ರನ್ ಗಳಿಸಿ ಕ್ಯಾಚ್ ನೀಡಿ ಔಟಾದರು, ಜಿತೇಶ್ ಶರ್ಮಾ ವಿನ್ನಿಂಗ್ ಶಾಟ್ ಸಿಕ್ಸ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಒಟ್ಟು ಅವರು 11 ರನ್ ಕಲೆಹಾಕಿದರು. ಈ ಮೂಲಕ ಪಂಜಾಬ್ ವಿರುದ್ಧ ಆರ್‌ಸಿಬಿ ತಂಡವು ಸೇಡು ತೀರಿಸಿಕೊಂಡಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್‌ಸಿಬಿಯು ತವರು ಮೈದಾನವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ವಿರುದ್ಧ ಸೋಲನುಭವಿಸಿದ್ದರು.
ಇದೀಗ ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್‌ಸಿಬಿ ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೇರಿ ಪಂಜಾಬ್ ಅನ್ನು ಕೆಳಗಿಳಿಸಿದೆ. ಇದುವರೆಗೂ ಆಡಿದ 8ರಲ್ಲಿ 3ರಲ್ಲಿ ಸೋತು, 5 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ 10 ಅಂಕಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೇರಿದೆ.
ಟಾಸ್ ಸೋತ ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಿತು. ಪ್ರಿಯಾನ್ಸ್ ಆರ್ಯ 22, ಪ್ರಭ್ ಸಿಮ್ರಾನ್ 33, ಶ್ರೇಯಸ್ ಅಯ್ಯರ್ 6, ಜೋಶ್ ಇಂಗ್ಲಿಸ್ 29, ನೆಹಾಲ್ ವಧೇರಾ 5, ಶಶಾಂಕ್ ಸಿಂಗ್ 31, ಸ್ಟೋಯ್ನಿಸ್ 1, ಮಾರ್ಕೋ ಜಾನ್ಸನ್ 25 ರನ್ ಕಲೆಹಾಕಿ ನಾಟ್ ಆಗಿ ಉಳಿದರು. ಈ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬೌಲಿಂಗ್ ಮಾಡಿದ ಕೃನಾಲ್ ಪಾಂಡೆ ಹಾಗೂ ಸುಯೇಶ್ ಶರ್ಮಾ ತಲಾ 2 ವಿಕೆಟ್ ಕಬಳಿಸಿದರೆ, ಶೆಫರ್ಡ್ 1 ವಿಕೆಟ್ ತೆಗೆದರು. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡದ 6 ವಿಕೆಟ್ ಕಿತ್ತು 157 ರನ್‌ಗಳಿಗೆ ಕಟ್ಟಿಹಾಕಿದರು.












Click it and Unblock the Notifications