IPL 2024: ಇದು ಹೊಸ ಅಧ್ಯಾಯ; ಹಲವು ದಾಖಲೆಗಳ ನಿರ್ಮಿಸಲು ಸಜ್ಜಾದ ವಿರಾಟ್ ಕೊಹ್ಲಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಆರಂಭದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಲವು ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಐಪಿಎಲ್ 2024ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಮುಖುಮುಖಿಯಾಗಲಿವೆ.
2024 ರ ಜನವರಿ ನಂತರ ಮೊದಲ ಬಾರಿಗೆ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಮೊದಲ ಪಂದ್ಯದಲ್ಲೇ ಹಲವು ದಾಖಲೆಗಳನ್ನು ಬರೆಯುವ ಅವಕಾಶ ಇದ್ದು, ಉತ್ತಮ ಫಾರ್ಮ್ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ 3ನೇ ಟಿ20 ಪಂದ್ಯದಲ್ಲಿ ಕೊಹ್ಲಿ ಕೊನೆಯದಾಗಿ ಆಡಿದ್ದರು. ಅದರ ನಂತರ, ಅವರು ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಕಳೆದುಕೊಂಡರು.
ಕೊಹ್ಲಿ ಮಾಡಬಹುದಾದ ದಾಖಲೆಗಳು
ಶುಕ್ರವಾರ, ಚೆನ್ನೈ ವಿರುದ್ಧದ ಪಂದ್ಯದ ವೇಳೆ, ಕೊಹ್ಲಿ ಆರು ರನ್ ಗಳಿಸಿದರೆ, ಟಿ20ಯಲ್ಲಿ 12,000 ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಸದ್ಯಕ್ಕೆ, 376 ಟಿ20 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 11,994 ರನ್ ಗಳಿಸಿದ್ದಾರೆ.
ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 99 ಅರ್ಧಶತಕಗಳನ್ನು ಸಿಡಿಸಿದ್ದು, ಇನ್ನೊಂದು ಅರ್ಧಶತಕ ಗಳಿಸಿದರೆ 100 ಅರ್ಧಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟರ್ ಮತ್ತು ಒಟ್ಟಾರೆ ಮೂರನೇ ಆಟಗಾರನಾಗುವ ಅವಕಾಶವನ್ನು ಪಡೆಯುತ್ತಾರೆ. ಕ್ರಿಸ್ ಗೇಲ್ (110) ಮತ್ತು ಡೇವಿಡ್ ವಾರ್ನರ್ (109) ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.
ಐಪಿಎಲ್‌ನಲ್ಲಿ ಚೆನ್ನೈ ಮೂಲದ ಫ್ರಾಂಚೈಸಿ ವಿರುದ್ಧ 1000 ರನ್ ಗಳಿಸಿದ ಎರಡನೇ ಬ್ಯಾಟರ್ ಆಗುವ ಅವಕಾಶವನ್ನು ಕೊಹ್ಲಿ ಪಡೆಯಲಿದ್ದಾರೆ. 31 ಪಂದ್ಯಗಳಲ್ಲಿ 985 ರನ್ ಗಳಿಸಿರುವ ಕೊಹ್ಲಿ, ಈ ಸಾಧನೆ ಮಾಡಲು ಕೇವಲ 15 ರನ್ ಗಳಿಸಬೇಕಾಗಿದೆ.
ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೂಡ. 237 ಪಂದ್ಯಗಳು ಮತ್ತು 229 ಇನ್ನಿಂಗ್ಸ್‌ಗಳಲ್ಲಿ, 37.24 ಸರಾಸರಿಯಲ್ಲಿ 130.02 ಸ್ಟ್ರೈಕ್ ರೇಟ್‌ನೊಂದಿಗೆ 7263 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 113. ಅವರು ಐಪಿಎಲ್‌ನಲ್ಲಿ ಏಳು ಶತಕಗಳನ್ನು ಗಳಿಸಿದ್ದಾರೆ, ಅವರ ಐಪಿಎಲ್ ವೃತ್ತಿಜೀವನದಲ್ಲಿ 50 ಅರ್ಧಶತಕಗಳನ್ನು ಗಳಿಸಿದ್ದಾರೆ.
ಕಳೆದ ಆವೃತ್ತಿಯಲ್ಲಿ ಮಿಂಚು
ಕಳೆದ ಋತುವಿನಲ್ಲಿ, 35 ವರ್ಷ ವಯಸ್ಸಿನ ಬ್ಯಾಟರ್ 53.25 ರ ಸರಾಸರಿಯಲ್ಲಿ ಮತ್ತು 139.82 ರ ಸ್ಟ್ರೈಕ್ ರೇಟ್‌ನಲ್ಲಿ 639 ರನ್‌ಗಳನ್ನು ಪೇರಿಸುವ ಮೂಲಕ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಅವರ ಅತ್ಯುತ್ತಮ ಸ್ಕೋರ್ 101* ಆಗಿತ್ತು. ಕಳೆದ ಆವೃತ್ತಿಯಲ್ಲಿ ಎರಡು ಶತಕ ಮತ್ತು ಆರು ಅರ್ಧಶತಕಗಳನ್ನು ಗಳಿಸಿದರು.
ಐಪಿಎಲ್‌ನ 17ನೇ ಸೀಸನ್ ಶುಕ್ರವಾರ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಚೆನ್ನೈ ತಂಡವು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆರ್ ಸಿಬಿ ವಿರುದ್ಧ ಸೆಣೆಸಲಿದೆ.












Click it and Unblock the Notifications